ಚೀಯರ್ ಲೀಡರ್ ಬೇಡ, ಕನ್ನಡಿಗರ ಪದ ದನಿ ಎತ್ತಿ|No cheerleaders

Devegowda Siddaramaiah
Published on

ಬೆಂಗಳೂರು: ಜಲಜೀವನ್ ಮಿಷನ್ ಅಡಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಅನ್ಯಾಯವೆಸಗಿದೆ ಎಂದು ಶನಿವಾರ ಕಿಡಿಕಾರಿದ್ದ ಸಿಎಂ ಸಿದ್ದರಾಮಯ್ಯ ಈಗ ದೇವೇಗೌಡರ ಹೋರಾಟವನ್ನು ಹೊಗಳುತ್ತಲೇ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ(While praising Deve Gowda's struggle,  CM has attacked the central government).

ಮೋದಿ ನೇತೃತ್ವದ ಸರ್ಕಾರ ಕರ್ನಾಟಕವನ್ನು ಶತ್ರು ರಾಜ್ಯದಂತೆ ನಡೆಸಿಕೊಳ್ಳುತ್ತಿದೆ ಎಂದು ಚಾಟಿ ಬೀಸಿರುವುದಲ್ಲದೆ, ಮಗನನ್ನು ಸಚಿವನನ್ನಾಗಿ ಮಾಡಲು ಇಷ್ಟೊಂದು ರಾಜಿ ಮಾಡಿಕೊಳ್ಳುವ ಅಗತ್ಯ ಇತ್ತೆ? ಎಂದು ದೇವೇಗೌಡರನ್ನು ಕಿಚಾಯಿಸಿದ್ದಾರೆ. ದೇವೇಗೌಡರು ಬಿಜೆಪಿ ಮತ್ತು ನರೇಂದ್ರ ಮೋದಿಯವರ ಚಿಯರ್ ಲೀಡರ್ ರೀತಿ ವರ್ತಿಸುತ್ತಿದ್ದಾರೆ ಎಂದೂ ಕಾಲೆಳೆದಿದ್ದಾರೆ.

ದೇವೇಗೌಡರ ಹೋರಾಟದ ಹೇಳಿಗೆ ಸ್ವಾಗತ

ನೀರಾವರಿ ವಿಚಾರದಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯದ ವಿರುದ್ಧ ಪಕ್ಷಾತೀತವಾಗಿ ಹೋರಾಡಲು ಸಿದ್ಧ ಎಂಬ ಮಾಜಿ ಪ್ರಧಾನಿ ದೇವೇಗೌಡರ ಹೇಳಿಕೆಯನ್ನು ನಾನು ಸಂಪೂರ್ಣ ಸ್ವಾಗತಿಸುತ್ತೇನೆ. ವೈಯಕ್ತಿಕವಾಗಿ ಇದು ನನ್ನ ಅಭಿಪ್ರಾಯವಾಗಿದ್ದು, ನೆಲ-ಜಲ-ಭಾಷೆ ವಿಚಾರದಲ್ಲಿ ನಾನು ಸದಾ ಕನ್ನಡಿಗನಾಗಿ ನಡೆದುಕೊಂಡಿದ್ದೇನೆಯೇ ಹೊರತು ರಾಜಕಾರಣಿಯಾಗಿ ಅಲ್ಲ ಎನ್ನುವುದನ್ನು ಹಿರಿಯರಾದ ದೇವೇಗೌಡರ ಗಮನಕ್ಕೆ ತರಬಯಸುತ್ತೇನೆ ಎಂದು ಸಿದ್ದರಾಮಯ್ಯ ಪ್ರಕಟಣೆಯಲ್ಲಿ ಹೇಳಿದ್ದಾರೆ.

ನಾನೇ ನಿಮ್ಮ ಮನೆಗೆ ಬಂದಿದ್ದೆ

ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಬೇಕೆಂದು 2016ರ ಸೆಪ್ಟೆಂಬರ್‌ನಲ್ಲಿ ಸುಪ್ರೀಂ ಕೋರ್ಟ್ ಆದೇಶ ನೀಡಿದಾಗ ಉದ್ಭವವಾದ ಬಿಕ್ಕಟ್ಟಿನ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿದ್ದ ನಾನು ನಿಮ್ಮ ಮನೆಗೆ ಬಂದು ಕೈಹಿಡಿದು ಕರೆದುಕೊಂಡು ಬಂದು ಸರ್ವಪಕ್ಷಗಳ ಸಭೆ ನಡೆಸಿದ್ದು ನಿಮಗೆ ನೆನಪಿರಬಹುದೆಂದು ಭಾವಿಸಿದ್ದೇನೆ.

ಹಿಂದೆಲ್ಲ ರಾಜ್ಯದ ಹಿತಾಸಕ್ತಿಯ ರಕ್ಷಣೆಯ ಪ್ರಶ್ನೆ ಎದುರಾದಾಗ ಒಬ್ಬ ಮುತ್ಸದ್ದಿಯಾಗಿ ಇದಕ್ಕಿಂತಲೂ ಮುಖ್ಯವಾಗಿ ಒಬ್ಬ ಹೆಮ್ಮೆಯ ಕನ್ನಡಿಗನಾಗಿ ರಾಜ್ಯಕ್ಕೆ ನ್ಯಾಯ ಕೊಡಲು ನೀವು ಹೋರಾಟ ನಡೆಸಿದ್ದನ್ನು ರಾಜ್ಯದ ಜನರು ಗಮನಿಸಿದ್ದಾರೆ. ಆದರೆ ಇತ್ತೀಚೆಗೆ ನೀವು ಮತ್ತು ನಿಮ್ಮ ಪಕ್ಷ ಕೇಂದ್ರ ಸರ್ಕಾರದ ವಕ್ತಾರರಂತೆ ಪಕ್ಷಪಾತಿಯಾಗಿ ವರ್ತಿಸುತ್ತಿರುವುದನ್ನು ಕೂಡ ನನ್ನನ್ನೂ ಸೇರಿದಂತೆ ಏಳುಕೋಟಿ ಕನ್ನಡಿಗರು ಗಮನಿಸುತ್ತಿದ್ದಾರೆ. ಕೇಂದ್ರ ಸಂಪುಟದಲ್ಲಿ ಮಗನನ್ನು ಸಚಿವನನ್ನಾಗಿ ಮಾಡಲು ಗೌಡರು ಇಷ್ಟೊಂದು ರಾಜಿ ಮಾಡಿಕೊಳ್ಳುವ ಅಗತ್ಯ ಇತ್ತೆ? ಎಂದು ಜನ ಪ್ರಶ್ನಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ಮೀನಮೇಷ ಎಣಿಸುತ್ತಿರುವ ಕೇಂದ್ರ

ಮಹದಾಯಿ ಯೋಜನೆಗೆ ಕೇಂದ್ರ ಸರ್ಕಾರ ಅನುಮತಿ ನೀಡಬೇಕಾಗಿದೆ. ಬಂಡೂರಿ ನಾಲೆ ತಿರುವು ಯೋಜನೆಗೆ ಕೇಂದ್ರ ಸರ್ಕಾರ ಅನುಮತಿ ನೀಡುವುದಷ್ಟೇ ಬಾಕಿ ಉಳಿದಿದೆ.ಕೃಷ್ಣಾ ಜಲವಿವಾದ ಐತೀರ್ಪನ್ನು ಗೆಜೆಟ್‌ನಲ್ಲಿ ಪ್ರಕಟಿಸಿ, ಈ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಬೇಕು. ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಣೆ ಮಾಡುವಲ್ಲಿ ಕೇಂದ್ರ ಸರ್ಕಾರ ಮೀನಮೇಷ ಎಣಿಸುತ್ತ ಕೂತಿದೆ. ಮೇಕೆದಾಟು ಯೋಜನೆಯ ವಿವರಗಳೆಲ್ಲ ನಿಮಗೆ ಬಾಯಿಪಾಠದಲ್ಲಿರಬಹುದು. ಈ ಯೋಜನೆಗೆ ಕೇಂದ್ರ ಸರ್ಕಾರದಿಂದ ಅನುಮತಿ ದೊರಕಿಸಿಕೊಟ್ಟರೆ ಬೆಂಗಳೂರು ನಿವಾಸಿಗಳು ಸದಾ ನಿಮಗೆ ಋಣಿಯಾಗಿರುತ್ತಾರೆ.

ಕೃಷ್ಣಾ ಮತ್ತು ಕಾವೇರಿ ನದಿಗಳ ಜೋಡಣೆಯ ನೀರಾವರಿ ಯೋಜನೆಯ ಬಗ್ಗೆ ನಿಮ್ಮ ಕಳಕಳಿಗೆ ನಮ್ಮ ಸಂಪೂರ್ಣ ಸಹಕಾರ ಇದೆ. ಈ ವಿಷಯದಲ್ಲಿ ನೀವು ನಡೆಸುವ ಹೋರಾಟಕ್ಕೆ ನಾನು ಮತ್ತು ಡಿ.ಕೆ.ಶಿವಕುಮಾರ್ ಮಾತ್ರವಲ್ಲ ಸಮಸ್ತ ಕರ್ನಾಟಕ ನಿಮ್ಮ ಜೊತೆ ಇರುತ್ತದೆ. ಆದರೆ ಹೊಸ ನೀರಾವರಿ ಯೋಜನೆಗಳನ್ನು ಪ್ರಾರಂಭಿಸುವ ಮೊದಲು ಅಪೂರ್ಣ ಸ್ಥಿತಿಯಲ್ಲಿರುವ ನೀರಾವರಿ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ನಿಮ್ಮ ಸಹಕಾರ ಇರಲಿ ಎಂದು ಸಿದ್ದರಾಮಯ್ಯ ಮನವಿ ಮಾಡಿಕೊಂಡಿದ್ದಾರೆ.

ಶತ್ರು ರಾಜ್ಯಗಳಂತೆ ನಡೆಸಿಕೊಳ್ಳುತ್ತಿದೆ

ಕರ್ನಾಟಕ ನೀರಾವರಿ ಮಾತ್ರವಲ್ಲ, ತೆರಿಗೆ ಹಂಚಿಕೆ, ಪ್ರಕೃತಿ ವಿಕೋಪ ಪರಿಹಾರ, ಕುಡಿಯುವ ನೀರು ಪೂರೈಕೆ, ರೈಲ್ವೆ ಯೋಜನೆಗಳ ವಿಚಾರದಲ್ಲಿಯೂ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕರ್ನಾಟಕವನ್ನು ಶತ್ರು ರಾಜ್ಯದಂತೆ ನಡೆಸಿಕೊಳ್ಳುತ್ತಿದೆ. ಈ ವಿಚಾರಗಳು ಕೂಡ ನಿಮಗೆ ಗೊತ್ತಿರುವುದರಿಂದ ಸಂಸಸ್‌ನಲ್ಲಿ ಈ ಬಗ್ಗೆ ನೀವು ದನಿ ಎತ್ತುತ್ತೀರಿ ಎಂದು ರಾಜ್ಯದ ಜನರು ನಿರೀಕ್ಷಿಸಿದ್ದರು ಎಂದು ಹೇಳಿದ್ದಾರೆ.

ಚೀಯರ್ ಲೀಡರ್ ರೀತಿ ವರ್ತನೆ

ಕೇಂದ್ರದಲ್ಲಿ ಯಾವ ಪಕ್ಷದ ಸರ್ಕಾರ ಇದ್ದರೂ ನೀವು ಮುಲಾಜಿಗೆ ಬೀಳದೆ ಕರ್ನಾಟಕದ ಹಿತಾಸಕ್ತಿಯ ರಕ್ಷಣೆಯ ಪ್ರಶ್ನೆ ಎದುರಾದಾಗ ದನಿ ಎತ್ತುತ್ತ ಬಂದವರು. ಆ ಮುತ್ಸದ್ದಿ ದೇವೇಗೌಡರನ್ನು ಕಾಣಲು ಕನ್ನಡಿಗರು ಬಯಸುತ್ತಿದ್ದಾರೆ. ಆದರೆ ಈಗಿನ ದೇವೇಗೌಡರು ಬಿಜೆಪಿ ಮತ್ತು ನರೇಂದ್ರ ಮೋದಿಯವರ ಚಿಯರ್ ಲೀಡರ್ ರೀತಿ ವರ್ತಿಸುತ್ತಿದ್ದಾರೆ ಎಂದು ವಿಷಾದದಿಂದ ಹೇಳಬೇಕಾಗಿದೆ ಎಂದು ಕಾಲೆಳೆದಿದ್ದಾರೆ.

ಮುತ್ಸದ್ದಿ ನಾಯಕನಂತೆ ನಡೆಯಿರಿ

ದೈಹಿಕವಾಗಿ ನೀವು ಸ್ವಲ್ಪ ಕುಗ್ಗಿದಂತೆ ಕಂಡರೂ ಮಾನಸಿಕವಾಗಿ ನೀವಿನ್ನೂ ದೃಡವಾಗಿದ್ದೀರಿ. ದಯವಿಟ್ಟು ಈಗಲಾದರೂಪಕ್ಷ ರಾಜಕಾರಣವನ್ನು ಮೀರಿ ಒಬ್ಬ ಮುತ್ಸದ್ದಿ ನಾಯಕನ ರೀತಿಯಲ್ಲಿ ಕನ್ನಡ-ಕನ್ನಡಿಗ-ಕರ್ನಾಟಕದ ಹಿತರಕ್ಷಣೆಗೆ ಮುಂದಾಗಬೇಕೆಂದು. ಈ ನಿಟ್ಟಿನಲ್ಲಿ ನೀವು ಮಾಡುವ ಪ್ರಯತ್ನಕ್ಕೆ ನಮ್ಮ ಸರ್ಕಾರದ ಸಂಪೂರ್ಣ ಬೆಂಬಲ ಇದೆ. ಏಳು ಕೋಟಿ ಕನ್ನಡಿಗರೂ ನಿಮ್ಮ ಜೊತೆಯಲ್ಲಿ ಇರುತ್ತಾರೆ ಎಂಬ ಭರವಸೆಯೂ ನನಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net