ಆರ್​ಬಿಐ ಎಂಪಿಸಿ ಸಭೆ: ರೆಪೊ ದರ ಯಥಾಸ್ಥಿತಿ

RBI
Published on

ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್​ಬಿಐ) ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಮಾಡದೇ, ರೆಪೊ ಶೇ. 4 ಮತ್ತು ರಿವರ್ಸ್ ರೆಪೊವನ್ನು ಶೇ. 3.35ರಲ್ಲೇ ಮುಂದುವರಿಸುವ ನಿರ್ಧಾರ ಕೈಗೊಂಡಿದೆ. 2020ರ ಮೇ ತಿಂಗಳಿಂದ ರೆಪೊ ದರ ಇದೇ ಸ್ಥಿತಿಯಲ್ಲಿ ಮುಂದುವರಿದಿದೆ.

2021-22ರಲ್ಲಿ ಒಟ್ಟು ದೇಶೀಯ ಉತ್ಪನ್ನ ದರ (ಜಿಡಿಪಿ) ಶೇ. 10.5ರಲ್ಲಿ ಇರುತ್ತದೆ ಎಂಬ ಹಿಂದಿನ ಅಂದಾಜಿನಲ್ಲಿ ಯಾವುದೇ ಬದಲಾವಣೆಯನ್ನು ಆರ್​ಬಿಐ ಮಾಡಿಲ್ಲ. ಪ್ರಸಕ್ತ ಹಣಕಾಸು ಸಾಲಿನ ಮೊದಲ ತ್ರೖೆಮಾಸಿಕದಲ್ಲಿ ಹಣದುಬ್ಬರದ ಪ್ರಮಾಣ ಶೇ. 5.2 ಇದ್ದರೂ 3ನೇ ತ್ರೖೆಮಾಸಿಕದ ಹೊತ್ತಿಗೆ ಅದು ಶೇ. 4.4ರ ಆಸುಪಾಸಿನಲ್ಲಿರುವ ಆಶಯವನ್ನು ಕೇಂದ್ರೀಯ ಬ್ಯಾಂಕ್ ವ್ಯಕ್ತಪಡಿಸಿದೆ. 2020-21ರ ಕೊನೆಯ ತ್ರೖೆಮಾಸಿಕದಲ್ಲಿ (ಜನವರಿ-ಮಾರ್ಚ್) ಹಣದುಬ್ಬರದ ಪ್ರಮಾಣ ಶೇ. 5ಕ್ಕೆ ಏರಿತ್ತು. ಕರೊನಾ ಎರಡನೇ ಅಲೆಯಲ್ಲಿ ಸೋಂಕು ಉಲ್ಬಣಗೊಂಡಿರುವ ಸಂದರ್ಭದಲ್ಲಿ ಬಡ್ಡಿ ದರವನ್ನು ಪರಿಷ್ಕರಿಸಿದರೆ ಅದು ಬೆಳವಣಿಗೆಗೆ ಮಾರಕವಾಗುತ್ತದೆ ಎಂದು ಎಂಪಿಸಿ ಅಭಿಪ್ರಾಯಪಟ್ಟಿದೆ. ಉತ್ಪಾದಕ ವಲಯಕ್ಕೆ ಸಾಕಷ್ಟು ಸಾಲ ದೊರೆಯುವಂತೆ ಹಣದ ಹರಿವು ಇರಬೇಕಾಗುತ್ತದೆ. ಈ ನಿಟ್ಟಿನಲ್ಲಿ ಆರ್ಥಿಕ ಸ್ಥಿರತೆ ಕಾಯ್ದುಕೊಳ್ಳುವ ಕ್ರಮಗಳನ್ನು ಮುಂದುವರಿಸಲಾಗುವುದು ಎಂದು ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ತಿಳಿಸಿದ್ದಾರೆ.

ಸಾಲ ವಿತರಣೆಗೆ ಹೆಚ್ಚುವರಿ ಅನುದಾನ: 2021-22ರಲ್ಲಿ ಹೆಚ್ಚು ಹೆಚ್ಚು ಸಾಲ ವಿತರಣೆಗೆ ಅನುಕೂಲ ಕಲ್ಪಿಸಲು ನಬಾರ್ಡ್​ಗೆ 25 ಸಾವಿರ ಕೋಟಿ ರೂಪಾಯಿ, ಎನ್​ಎಚ್​ಬಿಗೆ 10 ಸಾವಿರ ಕೋಟಿ ರೂಪಾಯಿ ಮತ್ತು ಎಸ್​ಐಡಿಬಿಐಗೆ 15 ಸಾವಿರ ಕೋಟಿ ರೂಪಾಯಿ ಒಟ್ಟಾರೆ 50 ಸಾವಿರ ಕೋಟಿ ರೂಪಾಯಿ ಹೆಚ್ಚುವರಿ ಅನುದಾನ ಮಂಜೂರು ಮಾಡಲು ಎಂಪಿಸಿ ಸಮ್ಮತಿಸಿದೆ.

ಎಂಪಿಸಿ ಇತರ ನಿರ್ಧಾರಗಳು

  • ಬ್ಯಾಂಕಿಂಗೇತರ ಸಂಸ್ಥೆಗಳಿಂದಲ್ಲೂ ಮಿತ ಪ್ರಮಾಣದಲ್ಲಿ ನಗದ ಹಿಂಪಡೆಯಲು ಅವಕಾಶ. ಆದರೆ, ಗ್ರಾಹಕರ ಕೆವೈಸಿ ಪ್ರಕ್ರಿಯೆ ಪೂರ್ಣಗೊಂಡಿರುವುದು ಕಡ್ಡಾಯ.
  • ಬ್ಯಾಂಕಿಂಗೇತರ ಸಂಸ್ಥೆಗಳಿಗೆ ಕಲ್ಪಿಸಿರುವ ಆರ್​ಟಿಜಿಎಸ್, ನೆಫ್ಟ್ ಮೂಲಕ ಪಾವತಿ ಸೇವೆ ಮುಂದುವರಿಕೆ.
  • ಪೇಮೆಂಟ್ಸ್ ಬ್ಯಾಂಕ್​ಗಳ ದಿನ ಅಂತ್ಯದ ವೇಳೆಯ ಬ್ಯಾಲೆನ್ಸ್ ಅನ್ನು -ಠಿ;1 ಲಕ್ಷದಿಂದ -ಠಿ;2 ಲಕ್ಷಕ್ಕೆ ಹೆಚ್ಚಳ.
  • ಹಣದ ಹರಿವಿನ ಯೋಜನೆ ಟಿಎಲ್​ಟಿಆರ್​ಒ ಸೆಪ್ಟೆಂಬರ್ 30ರವರೆಗೆ ವಿಸ್ತರಣೆ.

ಮತ್ತೆ ಮಾರಟೋರಿಯಮ್ ಇಲ್ಲ

ಕರೊನಾ ಎರಡನೇ ಅಲೆ ತೀವ್ರವಾಗಿರುವ ಹಿನ್ನೆಲೆಯಲ್ಲಿ ಸ್ಥಳೀಯವಾಗಿ ಲಾಕ್​ಡೌನ್ ಜಾರಿ ಮಾಡಲಾಗುತ್ತಿದೆ. ಆದರೆ, ಇದಕ್ಕೆ ಸಾಲದ ಕಂತು ಪಾವತಿ ಮುಂದೂಡಿಕೆ (ಮಾರಟೋರಿಯಮ್ ಘೋಷಣೆ ಮಾಡುವ ಅಗತ್ಯ ಸದ್ಯಕ್ಕೆ ಇಲ್ಲ ಎಂದು ಶಕ್ತಿಕಾಂತ ದಾಸ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ವ್ಯಾಪಾರ-ವಹಿವಾಟುಗಳು ಕರೊನಾ ಸನ್ನಿವೇಶವನ್ನು ಎದುರಿಸಲು ಶಕ್ತವಾಗಿವೆ ಹೀಗಾಗಿ ಸದ್ಯದ ಮಟ್ಟಿಗೆ ಮಾರಟೋರಿಯಮ್ ಅಗತ್ಯತೆ ಕಾಣುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net