ಗ್ರಾಮೀಣ ವಸತಿಗಿಲ್ಲ ಕೇಂದ್ರದ ಪಾಲು; ವಸತಿರಹಿತರ ಸಿಟ್ಟು, ಸ್ವಪಕ್ಷ ಶಾಸಕರ ಒತ್ತಡ ತಣಿಸಲು ಕಸರತ್ತು

Kapagal Story
Published on

| ಮೃತ್ಯುಂಜಯ ಕಪಗಲ್ ಬೆಂಗಳೂರು

ಗ್ರಾಮೀಣ-ನಗರ ವಸತಿ ಯೋಜನೆ ರಾಜ್ಯ ಸರ್ಕಾರಕ್ಕೆ ಬಿಸಿತುಪ್ಪವಾಗಿ ಪರಿಣಮಿಸಿದ್ದು, ಅಗತ್ಯ ಆರ್ಥಿಕ ಸಂಪನ್ಮೂಲ ಹೊಂದಿಸಲು ಒದ್ದಾಡುತ್ತಿರುವ ಸರ್ಕಾರವನ್ನು ಕೇಂದ್ರವೂ ಅಗ್ನಿ ಪರೀಕ್ಷೆಗೆ ದೂಡಿದೆ. ಕರೊನಾದಿಂದ ಉಂಟಾದ ಆರ್ಥಿಕ ಮುಗ್ಗಟ್ಟಿನಿಂದ ವಿವಿಧ ವಸತಿ ಯೋಜನೆಗಳು ಗರ ಬಡಿದು ಕುಳಿತಿವೆ. ಈ ನಡುವೆ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ (ಗ್ರಾಮೀಣ)ಕೇಂದ್ರ ಸರ್ಕಾರ ತನ್ನ ಪಾಲಿನ ಅನುದಾನ ಬಿಡುಗಡೆ ಮಾಡದಿರುವುದು ಮತ್ತಷ್ಟು ಸಂಕಷ್ಟ ತಂದೊಡ್ಡಿದೆ. ಪ್ರಸಕ್ತ ಆರ್ಥಿಕ ವರ್ಷಕ್ಕೆ ಪಿಎಂಎವೈ (ಗ್ರಾಮೀಣ) ಅಡಿ ಕೇಂದ್ರದ ಪಾಲು 300 ಕೋಟಿ ರೂ. ನಿಗದಿ ಮಾಡಿದ್ದು, ಹಣಕಾಸು ವರ್ಷ ಅರ್ಧ ಕಳೆದರೂ ಕೇಂದ್ರದಿಂದ ನಯಾಪೈಸೆ ಅನುದಾನ ಬಂದಿಲ್ಲ. ಕೇಂದ್ರ ಹಂಚಿಕೆ ಮಾಡಿದ ಅನುದಾನ ನೀಡದ ಕಾರಣ ರಾಜ್ಯ ತನ್ನ ಪಾಲಿನ ಅನುದಾನ 200 ಕೋಟಿ ರೂ. ಬಿಡುಗಡೆ ಮಾಡಿಲ್ಲ. ಪ್ರಾರಂಭಿಕ ಶಿಲ್ಕು ಸೇರಿ ಒಟ್ಟು 904 ಕೋಟಿ ರೂ. ಅನುದಾನ ನಿಗದಿಯಾಗಿದೆ.

ವಸತಿ ಯೋಜನೆಯಡಿ ಫಲಾನುಭವಿಗಳ ಆಯ್ಕೆ, ಮನೆಗಳ ಮಂಜೂರು ವಿಳಂಬಕ್ಕೆ ಹಿಂದಿನ ಸರ್ಕಾರಗಳತ್ತ ಬೊಟ್ಟು ತೋರಿಸಿಯೇ ಆಡಳಿತ ಬಿಜೆಪಿ ಕಾಲ ಕಳೆದಿದೆ. ಹಿಂದಿನ ಸರ್ಕಾರದ ಆರ್ಥಿಕ ಅಶಿಸ್ತು, ಅನುದಾನ ಇಲ್ಲದೆಯೂ ಸಾವಿರಾರು ಕೋಟಿ ರೂ. ಮೊತ್ತದ ಮನೆಗಳ ಘೋಷಣೆ ಬಿಕ್ಕಟ್ಟಿಗೆ ಕಾರಣ ಎಂದು ಪುನರುಚ್ಚರಿಸಿದೆ. ಅಧಿಕಾರಕ್ಕೆ ಬಂದು ಒಂದೂವರೆ ವರ್ಷ ಕಳೆದರೂ ಅದೇ ನೆಪ ಹೇಳಿದರೆ ಕ್ಷೇತ್ರದಲ್ಲಿ ಜನರಿಗೆ ಮುಖ ತೋರಿಸುವುದು ಕಷ್ಟವಾಗುತ್ತದೆ ಎಂದು ಸ್ವಪಕ್ಷದ ಶಾಸಕರು ಅಳಲು ತೋಡಿಕೊಂಡಿದ್ದರು. ಮುಖ್ಯಮಂತ್ರಿ, ಪಕ್ಷದ ರಾಜ್ಯ ಉಸ್ತುವಾರಿ ಇನ್ನಿತರ ನಾಯಕರ ಶಾಸಕರ ತಂದ ಒತ್ತಡಕ್ಕೆ ಮಣಿದು ಗ್ರಾಮೀಣ ಪ್ರದೇಶಕ್ಕೆ ನಾಲ್ಕು ಲಕ್ಷ ಮತ್ತು ನಗರ-ಪಟ್ಟಣಕ್ಕೆ ಒಂದು ಲಕ್ಷ ಮನೆಗಳನ್ನು ಪ್ರಕಟಿಸಿದೆ. ನಿವೇಶನ ಹಾಗೂ ವಸತಿರಹಿತರ ಸಿಟ್ಟು, ಶಾಸಕರ ಅಹವಾಲಿಗೆ ಸ್ಪಂದಿಸಿ ಐದು ಲಕ್ಷ ಮನೆಗಳನ್ನು ಒಂದೂವರೆ ವರ್ಷದೊಳಗೆ ನಿರ್ವಿುಸುವುದಾಗಿ ಘೋಷಿಸಿ ಸಮಾಧಾನಪಡಿಸಿದೆ.

ಕೇಂದ್ರದಿಂದ ಸಕಾಲಕ್ಕೆ ಅನುದಾನ ಲಭ್ಯವಾದರೆ ರಾಜ್ಯದ ವಿವಿಧ ವಸತಿ ಯೋಜನೆಗಳಡಿ ಮನೆಗಳ ನಿರ್ಮಾಣ ಕಾಲಮಿತಿಯೊಳಗೆ ಪೂರ್ಣಗೊಳಿಸಲು ಸಾಧ್ಯವಾಗಲಿದೆ. ಗ್ರಾಪಂ ಸದಸ್ಯರ ಬಲದ ಆಧಾರದಲ್ಲಿ ಫಲಾನುಭವಿಗಳ ಪಟ್ಟಿ ಅಂತಿಮವಾಗುವ ಹಂತದಲ್ಲಿದ್ದು, ಪಿಎಂಎವೈ ಗ್ರಾಮೀಣ ವಸತಿಯಡಿ ಹಂಚಿಕೆ ಮಾಡಿದ ಅನುದಾನ ನೀಡಿಲ್ಲ. ಇದರಿಂದಾಗಿ ಸರ್ಕಾರ ನಿಗದಿಪಡಿಸಿದ ಗಡುವಿನೊಳಗೆ ವಸತಿ ನಿರ್ಮಾಣ ಸವಾಲಾಗಲಿದೆ ಎಂದು ಮೂಲಗಳು ಕಳವಳ ವ್ಯಕ್ತಪಡಿಸಿವೆ.

ಅರ್ಧಕ್ಕಿಂತ ಕಡಿಮೆ ಅನುದಾನ: ಪಿಎಂಎವೈ ಗ್ರಾಮೀಣದಂತೆ ಸ್ವಚ್ಛ ಭಾರತ ಯೋಜನೆಯಡಿ ಕೇಂದ್ರದ ಪಾಲು 249.60 ಕೋಟಿ ರೂ. ಈವರೆಗೂ ಬಿಡಿಗಾಸು ಬಿಡುಗಡೆಯಾಗಿಲ್ಲ. ಪ್ರಧಾನಮಂತ್ರಿ ಗ್ರಾಮೀಣ ಸಡಕ್ ಯೋಜನೆಯಡಿ ಕೇಂದ್ರದ ಪಾಲು 900 ಕೋಟಿ ರೂ.ಗಳಿದ್ದು, 195.75 ಕೋಟಿ ರೂ. ಬಿಡುಗಡೆಯಾಗಿದೆ. ರಾಷ್ಟ್ರೀಯ ಆರೋಗ್ಯ ಅಭಿಯಾನ 960 ಕೋಟಿ ರೂ. ಹಂಚಿಕೆಯಾಗಿದ್ದರೆ, 358.47 ಕೋಟಿ ರೂ. ಬಿಡುಗಡೆ ಮಾಡಿದೆ. ಪೂರಕ ಪೌಷ್ಟಿಕಾಂಶ ಕಾರ್ಯಕ್ರಮಕ್ಕೆ 599.24 ಕೋಟಿ ರೂ. ನಿಗದಿಪಡಿಸಿದ್ದರಲ್ಲಿ 180.72 ಕೋಟಿ ರೂ. ಬಂದಿದೆ. 14 ಇಲಾಖೆಗಳ ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಶೇ.50ಕ್ಕಿಂತ ಕಡಿಮೆ ಅನುದಾನ ಬಿಡುಗಡೆಯಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

ಗೃಹ ಸಾಲದ ಮೊತ್ತ ಏರಿಕೆ: ಪ್ರಧಾನಮಂತ್ರಿ ಆವಾಸ್ ಯೋಜನೆಯನ್ನು ನಗರ ಪ್ರದೇಶಕ್ಕೂ ವಿಸ್ತರಿಸಿ 3.61 ಲಕ್ಷ ಮನೆಗಳ ನಿರ್ವಣದ ಪ್ರಸ್ತಾವನೆಗೆ ಅಸ್ತು ಎಂದಿದ್ದು, ಗೃಹ ಸಾಲದ ಮೊತ್ತವನ್ನು ಹೆಚ್ಚಿಸಿ ಮಧ್ಯಮವರ್ಗಕ್ಕೂ ಅನುಕೂಲ ಮಾಡಿಕೊಟ್ಟಿದೆ. ಯೋಜನೆಯಡಿ ಗೃಹ ಸಾಲದ ಮೊತ್ತವು 3ರಿಂದ 6 ಲಕ್ಷ ರೂ.ಗಳವರೆಗೆ ಇದ್ದದ್ದು 8 ಲಕ್ಷ ರೂ.ಗೆ ಏರಿಸಿದ್ದು, ಸಾಲದ ಮೇಲಿನ ಬಡ್ಡಿಯನ್ನು ಸಬ್ಸಿಡಿ ರೂಪದಲ್ಲಿ ಕೇಂದ್ರ ಭರಿಸಲಿದೆ. ಮನೆ ಇಲ್ಲವೇ ಫ್ಲ್ಯಾಟ್ ಖರೀದಿಸಲು ಇಚ್ಛಿಸುವ ನಗರ-ಪಟ್ಟಣಗಳ ಬಡವರ ಜತೆಗೆ ಮಧ್ಯಮ ವರ್ಗಕ್ಕೂ ಅವಕಾಶ ಕಲ್ಪಿಸಿದ್ದು, ಕೇಂದ್ರದ ಪಾಲಿನ ಅನುದಾನವೂ ಕಾಲಕಾಲಕ್ಕೆ ಬಿಡುಗಡೆಯಾದರೆ ವಸತಿ ಪ್ರಗತಿ ನಿರೀಕ್ಷಿತ ವೇಗ ಪಡೆಯಲಿದೆ ಎಂದು ಇಲಾಖೆ ಮೂಲಗಳು ಹೇಳಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net