ಸದ್ಯಕ್ಕಿಲ್ಲ ಸಚಿವ ಸಂಪುಟ ಸರ್ಜರಿ; ಮಂತ್ರಿ ಸ್ಥಾನದ ಆಕಾಂಕ್ಷಿಗಳಿಗೆ ನಿರಾಸೆ

DK Siddu Modi
Published on

ನವದೆಹಲಿ: ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಗೆದ್ದು ಬೀಗಿದ ಬೆನ್ನಲ್ಲೇ ಸಚಿವ ಸಂಪುಟ ಪುನರ್​ರಚನೆಗೆ ವೇದಿಕೆ ಸಜ್ಜಾಗಿದೆ ಎಂಬ ಸುದ್ದಿ ಹರಿದಾಡಿತ್ತು. ಆಕಾಂಕ್ಷಿಗಳು ಕೂಡ ಮಂತ್ರಿಗಿರಿ ಪಡೆಯೋಕೆ ಸಿದ್ಧ ಎಂಬ ಸಂದೇಶ ರವಾನಿಸಿದ್ದರು. ಆದರೆ ಸಂಪುಟ ಪುನರ್​ರಚನೆಯಂತಹ ಯಾವುದೇ ಬೆಳವಣಿಗೆ ಸದ್ಯಕ್ಕಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಈ ಮಾತಿಗೆ ದನಿಗೂಡಿಸಿರುವ ಡಿಸಿಎಂ ಡಿಕೆ ಶಿವಕುಮಾರ್ ಸಹ ‘ಸಂಪುಟ ವಿಸ್ತರಣೆ ಮಾಡುವುದಕ್ಕೆ ಸ್ಥಾನಗಳೇ ಖಾಲಿ ಇಲ್ಲ, ಇರುವುದು ಒಂದೇ ಸ್ಥಾನ’ ಎಂದಿದ್ದಾರೆ.

ಸಿಎಂ, ಡಿಸಿಎಂ ಹೇಳಿಕೆಯಿಂದಾಗಿ ಎರಡು ಡಜನ್​ಗೂ ಹೆಚ್ಚು ಆಕಾಂಕ್ಷಿಗಳು ತೀವ್ರ ನಿರಾಸೆಗೆ ಒಳಗಾಗಿದ್ದಾರೆ. ಇವರೆಲ್ಲ ಸರ್ಕಾರಕ್ಕೆ ಎರಡು ವರ್ಷ ತುಂಬುವ ತನಕ ಕಾಯುವುದು ಅನಿವಾರ್ಯವಾಗಿದೆ. ಸಂಪುಟ ಪುನರ್​ರಚನೆ ಆಗಬಹುದೆಂಬ ಮಹದಾಸೆಯಿಂದ ಅನೇಕ ಶಾಸಕರು ಲಾಬಿ ಆರಂಭಿಸಿದ್ದರು. ಆದರೆ ಸರ್ಕಾರ ಸದ್ಯ ಬೆಳಗಾವಿ ಅಧಿವೇಶನದ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿದೆ. ಹೀಗಾಗಿ ಪುನರ್​ರಚನೆಗೆ ಬಗ್ಗೆ ಗಂಭೀರ ಚಿಂತನ-ಮಂಥನವೇ ಆರಂಭವಾಗಿಲ್ಲ ಎಂದು ಮೂಲಗಳು ತಿಳಿಸಿವೆ. ಎಂಟರಿಂದ ಹತ್ತು ಜನರನ್ನು ಸಂಪುಟದಿಂದ ಕೈಬಿಟ್ಟು ಅಷ್ಟೇ ಪ್ರಮಾಣದಲ್ಲಿ ಹೊಸಬರು ಸಂಪುಟ ಸೇರಲಿದ್ದಾರೆ. ಬೆಳಗಾವಿ ಅಧಿವೇಶನಕ್ಕೆ ಮುನ್ನವೇ ಈ ಪ್ರಕ್ರಿಯೆ ನಡೆಯಲಿದೆ ಎಂದು ವದಂತಿಗಳು ಹರಿದಾಡಿದ್ದವು. ಎಐಸಿಸಿ ಸಭೆಯಲ್ಲಿ ಭಾಗವಹಿಸಲು ಸಿಎಂ ಹಾಗೂ ಡಿಸಿಎಂ ದೆಹಲಿಗೆ ತೆರಳಿದ ಬಳಿಕ ವದಂತಿಗಳಿಗೆ ರೆಕ್ಕೆಪುಕ್ಕ ಸೇರಿದ್ದವು.

ನಾನೇಕೆ ಉತ್ತರ ಕೊಡಲಿ: ‘ಸಂಪುಟ ವಿಸ್ತರಣೆ, ಪುನರ್​ರಚನೆ ಕುರಿತಾದ ಪ್ರಶ್ನೆಗಳಿಗೆ ಉತ್ತರ ಕೊಡಬೇಕಾದವರು ಮಾಧ್ಯಮಗಳವರೇ ಹೊರತು ನಾನಲ್ಲ. ಮಾಧ್ಯಮಗಳೇ ಸುದ್ದಿಗಳನ್ನು ಬಿತ್ತರಿಸುತ್ತಿವೆ. ಸಂಭವನೀಯ ಸಚಿವರ ಪಟ್ಟಿಯನ್ನೂ ಪ್ರಕಟಿಸುತ್ತಿವೆ. ಹೀಗಾಗಿ ಈ ಪ್ರಶ್ನೆಗಳಿಗೆ ಮಾಧ್ಯಮಗಳೇ ಉತ್ತರಿಸಬೇಕು’ ಎಂದು ಸಿದ್ದರಾಮಯ್ಯ ದೆಹಲಿಯಲ್ಲಿ ಹೇಳಿದರು.

ಬೆಳಗಾವಿ ಸಮಾವೇಶದ ಚರ್ಚೆ: ಬೆಳಗಾವಿಯಲ್ಲಿ ಗಾಂಧೀಜಿ ಅಧ್ಯಕ್ಷತೆಯಲ್ಲಿ ನಡೆದಿದ್ದ ಕಾಂಗ್ರೆಸ್ ಅಧಿವೇಶನಕ್ಕೆ ನೂರು ವರ್ಷ ಆಗಿದೆ. ಈ ಹಿನ್ನೆಲೆಯಲ್ಲಿ ರೂಪಿಸಿರುವ ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ರ್ಚಚಿಸಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿದ್ದಾಗಿ ಡಿಕೆಶಿ ಹೇಳಿದರು. ಡಿಸೆಂಬರ್ 28ರಂದೇ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ. ಈ ಹಿಂದೆ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳ ಬಳಿ ಕಾರ್ಯಕ್ರಮದ ಬಗ್ಗೆ ಚರ್ಚೆ ನಡೆಸಿ ತೆಗೆದುಕೊಂಡ ಸಲಹೆ, ಸೂಚನೆಗಳನ್ನು ಖರ್ಗೆ ಬಳಿ ಚರ್ಚೆ ಮಾಡಿದೆ. ಸುಮಾರು 300ಕ್ಕೂ ಹೆಚ್ಚು ನಾಯಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ಈ ಕಾರ್ಯಕ್ರಮ ಕರ್ನಾಟಕದಲ್ಲಿ ನಡೆಯಬೇಕು ಎನ್ನುವ ಅಭಿಲಾಷೆ ಹೊಂದಿದ್ದೇವೆ. ಪಕ್ಷದ ಕಾರ್ಯಕಾರಿ ಸಭೆಯಲ್ಲಿ ರ್ಚಚಿಸಿ ತಿಳಿಸುವುದಾಗಿ ಅವರು ಹೇಳಿದ್ದಾರೆ. ನಾನು ಮತ್ತು ಮುಖ್ಯಮಂತ್ರಿ ಇಬ್ಬರೂ ಒಟ್ಟಿಗೆ ಈ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದು ಶಿವಕುಮಾರ್ ತಿಳಿಸಿದರು.

ರಾಹುಲ್-ಸಿದ್ದರಾಮಯ್ಯ ಭೇಟಿ: ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿದ ಸಿಎಂ ಸಿದ್ದರಾಮಯ್ಯ, ಹಾಸನದ ಡಿ.5ರ ಸಮಾವೇಶದ ಬಗ್ಗೆ ಮಾಹಿತಿ ನೀಡಿ, ಸಮಾವೇಶ ನಡೆಸಲು ಒಪ್ಪಿಗೆ ಪಡೆದುಕೊಂಡಿದ್ದಾರೆ. ಮುಂಬರುವ ಜಿಲ್ಲಾ ಪಂಚಾಯ್ತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗೆ ಇದು ನೆರವಾಗಲಿದೆ. ಪಕ್ಷದ ಎಲ್ಲಾ ನಾಯಕರೂ ಇದರಲ್ಲಿ ಭಾಗಿಯಾಗಲಿದ್ದಾರೆ. ಪಕ್ಷ ಮತ್ತು ಹಿಂದುಳಿದ ವರ್ಗಗಳ ಒಕ್ಕೂಟದ ಅಡಿಯಲ್ಲಿ ಸಮಾವೇಶ ನಡೆಯಲಿದೆ ಎಂದು ಸಿಎಂ ರಾಹುಲ್​ಗೆ ವಿವರಿಸಿದ್ದಾರೆ. ಮೈಸೂರು ವಿಭಾಗದ 6-7 ಜಿಲ್ಲೆಗಳ ಅಭಿಮಾನಿ, ಅಹಿಂದ ಸಂಘಟನೆಗಳ ಕಾರ್ಯಕರ್ತರು, ಮುಖಂಡರು ಸೇರಿ ದೊಡ್ಡ ಸಂಖ್ಯೆಯಲ್ಲಿ ಜನ ಸೇರಲಿದ್ದಾರೆ ಎಂದು ತಿಳಿದುಬಂದಿದೆ.

ಮಾಧ್ಯಮದ ಮುಂದೆ ರಾಜಕಾರಣ ನಡೆಯಲ್ಲ: ಮಾಧ್ಯಮಗಳ ಮುಂದೆ ಮಾಡುವ ಚರ್ಚೆಯಿಂದ ರಾಜಕಾರಣ ನಡೆಯುವುದಿಲ್ಲ ಎಂದು ಪಕ್ಷದ ಕೆಲ ನಾಯಕರಿಗೆ ಡಿಸಿಎಂ ಡಿಕೆ ಶಿವಕುಮಾರ್ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಗಾದಿಗೆ ಆಕಾಂಕ್ಷಿ ಎಂದು ಸಚಿವರಾದ ಕೆ.ಎನ್.ರಾಜಣ್ಣ ಹಾಗೂ ಸತೀಶ್ ಜಾರಕಿಹೊಳಿ ಹೆಸರು ಮುನ್ನೆಲೆಗೆ ಬಂದಿರುವ ಬಗ್ಗೆ ಉತ್ತರಿಸಿದ ಡಿಸಿಎಂ, ಮಾಧ್ಯಮಗಳ ಮುಂದೆ ರಾಜಕೀಯ ಚರ್ಚೆ ಮಾಡುವುದು ಯಾವ ಪಕ್ಷದವರಿಗೂ ಹಾಗೂ ಯಾರಿಗೂ ಸೂಕ್ತವಾದುದಲ್ಲ ಎಂದು ಪರೋಕ್ಷ ತಿರುಗೇಟು ನೀಡಿದ್ದಾರೆ.

ಹಾಸನ ಸಮಾವೇಶ ವರಿಷ್ಠರಿಗೆ ಆಹ್ವಾನ: ಹಾಸನದಲ್ಲಿ ಡಿ.5ರಂದು ಕಾಂಗ್ರೆಸ್ ಪಕ್ಷ ಹಾಗೂ ಹಿಂದುಳಿದ ವರ್ಗಗಳ ಒಕ್ಕೂಟದ ಆಶ್ರಯದಲ್ಲಿ ಸ್ವಾಭಿಮಾನಿ ಸಮಾವೇಶ ಅಯೋಜಿಸಲಾಗಿದೆ. ಸಮಾವೇಶಕ್ಕೆ ಕೆಪಿಸಿಸಿ ಅಧ್ಯಕ್ಷರು ಹಾಗೂ ರಾಜ್ಯ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಅವರನ್ನೂ ಸಂಘಟಕರು ಆಹ್ವಾನಿಸಿದ್ದಾರೆ. ಸಮಾವೇಶ ಕುರಿತಂತೆ ಹೈಕಮಾಂಡ್​ಗೆ ಅನಾಮಧೇಯ ಪತ್ರ ಬರೆದಿರುವ ಬಗ್ಗೆ ಮಾಹಿತಿ ಇಲ್ಲ. ಖರ್ಗೆ ಅವರೂ ಈ ಬಗ್ಗೆ ನನ್ನೊಂದಿಗೆ ಚರ್ಚೆ ಮಾಡಲಿಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರು. ಇನ್ನು ಇದೇ ವಿಚಾರವಾಗಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್ ‘ಸ್ವಾಭಿಮಾನಿ ಸಮಾವೇಶ ಕುರಿತು ಎಐಸಿಸಿಗೆ ಪತ್ರ ಬಂದಿದೆ ಎನ್ನುವ ವಿಚಾರ ನನಗೆ ತಿಳಿದಿಲ್ಲ. ಸಮಾವೇಶವನ್ನು ಏಕೆ ಮಾಡುತ್ತಿದ್ದಾರೆಂಬುದನ್ನು ಸಿಎಂ ನನಗೆ ತಿಳಿಸಿದ್ದಾರೆ. ಮಿಕ್ಕ ವಿಚಾರಗಳು ನನಗೆ ಗೊತ್ತಿಲ್ಲ. ಏಕೆಂದರೆ ಸಿಎಂ-ನಾನು ಭೇಟಿ ಮಾಡಿ ಮೂರು-ನಾಲ್ಕು ದಿನಗಳಾಗಿವೆ. ಸಮಾವೇಶಕ್ಕೆ ಪಕ್ಷದ ಭಾಗವಹಿಸುವಿಕೆ ಖಂಡಿತ ಇದ್ದೇ ಇರುತ್ತದೆ’ ಎಂದು ಬೆಂಬಲ ಸೂಚಿಸಿದರು.

ಜಾರಕಿಹೊಳಿ ಕುಟುಂಬದ ಶಕ್ತಿ ರಾಜ್ಯಕ್ಕೆ ಗೊತ್ತಿದೆ. ಅವರ ಕುಟುಂಬ ಸದಸ್ಯರು ಶೀಘ್ರ ಸಿಎಂ ಆಗಿ ಅಧಿಕಾರ ಸ್ವೀಕರಿಸಲಿ. ನನಗೆ ಕಾಂಗ್ರೆಸ್ ಹಾಗೂ ಬಿಜೆಪಿ ಮುಖಂಡರಿಂದಲೂ ಅನ್ಯಾಯವಾಗಿದೆ. ನನ್ನದು ಹೋರಾಟದ ಬದುಕು. ಹಿಂದುಳಿದ ಜನಾಂಗದವರು ಶೇ.70ಕ್ಕಿಂತ ಹೆಚ್ಚಿದ್ದರೂ ಸಮರ್ಪಕ ಮೀಸಲಾತಿ ಸಿಗುತ್ತಿಲ್ಲ. ಇದರ ಬಗ್ಗೆ ಈಗಾಗಲೇ ಶ್ರೀಗಳ ಜತೆ ರ್ಚಚಿಸಿದ್ದೇನೆ. ಅವರೆಲ್ಲರ ಮಾರ್ಗದರ್ಶನ ಪಡೆದು ಬೃಹತ್ ಹೋರಾಟ ಆಯೋಜಿಸಲಾಗುವುದು.

ರಮೇಶ್ ಜಾರಕಿಹೊಳಿ, ಮಾಜಿ ಸಚಿವ

 ನನಗೂ ಸಿಎಂ, ಕೆಪಿಸಿಸಿ ಅಧ್ಯಕ್ಷ ಆಗಬೇಕೆಂಬ ಆಸೆ ಇದೆ. ಆದರೆ ಆ ನಿರ್ಧಾರವನ್ನು ಹೈಕಮಾಂಡ್ ಮಾಡುತ್ತದೆ. ಹಿಂದೆ ಸತೀಶ ಜಾರಕಿಹೊಳಿ ಸಿಎಂ ಆಗ್ತಾರೆ ಅಂತ ಸುದ್ದಿ ಹರಿದಾಡಿತ್ತು. ಈಗ ಕೆಪಿಸಿಸಿ ಅಧ್ಯಕ್ಷ ಆಗ್ತಾರೆ ಅಂತ ಸುದ್ದಿ ಹರಿದಾಡುತ್ತಿದೆ. ಈ ವಿಚಾರವಾಗಿ ನಾನು ಯಾವುದೇ ಲಾಬಿನೂ ಮಾಡಿಲ್ಲ. ಒತ್ತಡವನ್ನೂ ಹಾಕಿಲ್ಲ. ಉಪ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸಿದ್ದೇವೆ, ಅದಕ್ಕೆ ಖುಷಿಯಿದೆ. ಮಂತ್ರಿಯಾಗಿದ್ದೇನೆ. ತೃಪ್ತಿಯಿದೆ.

ಸತೀಶ ಜಾರಕಿಹೊಳಿ, ಲೋಕೋಪಯೋಗಿ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net