5 ತಿಂಗಳು ಸಂಪುಟ ಸರ್ಜರಿ ಇಲ್ಲ: ಈ ಬಗ್ಗೆ ಚರ್ಚೆಯೇ ಬೇಕಿಲ್ಲ, ಕಾಂಗ್ರೆಸ್ ಹೈಕಮಾಂಡ್ ಸೂಚನೆ

Congress
Published on

| ವಿಕ್ರಮ್ ನಂದೋಡಿ ನವದೆಹಲಿ

ಸಿಎಂ ಸಿದ್ದರಾಮಯ್ಯ ಅವರ ದಿಢೀರ್ ದೆಹಲಿ ಭೇಟಿಗೆ ಸಚಿವ ಸಂಪುಟ ವಿಸ್ತರಣೆ ಕಾರಣವಿರಬಹುದೆಂಬ ನಿರೀಕ್ಷೆ ಹುಸಿಯಾಗಿದೆ. ಸಂಪುಟ ಪುನಾರಚನೆ ವಿಚಾರದಲ್ಲಿ ಅಳೆದೂ ತೂಗಿ ಐದು ತಿಂಗಳ ಕಾಲಮಿತಿ ನಿಗದಿಪಡಿಸುವ ಮೂಲಕ ದೆಹಲಿ ನಾಯಕರು ಅಚ್ಚರಿ ನಡೆ ಇಟ್ಟಿದ್ದಾರೆ.

ಹೈಕಮಾಂಡ್ ಕರೆ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಮಂಗಳವಾರ ದೆಹಲಿಗೆ ತೆರಳಿದ ಬಳಿಕ ಹಾಲಿ ಸಚಿವರಿಗೆ ಸ್ಥಾನ ಕಳೆದುಕೊಳ್ಳುವ ಆತಂಕ ಕಾಡಿತ್ತು. ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಚಿವ ಸಂಪುಟ ವಿಚಾರವನ್ನು ರಾಜ್ಯ ನಾಯಕರು ಮುಂದಿಟ್ಟರಾದರೂ ಸರ್ಕಾರಕ್ಕೆ ಎರಡೂವರೆ ವರ್ಷ ಆಗುವವರೆಗೂ ಈ ವಿಚಾರ ಎತ್ತುವುದು ಬೇಡವೆಂದು ಸ್ಪಷ್ಟ ಸೂಚನೆ ನೀಡಿದ್ದಾಗಿ ತಿಳಿದು ಬಂದಿದೆ.

ರಾಜ್ಯ ಸರ್ಕಾರ ಎರಡು ವರ್ಷ ಅವಧಿ ಪೂರೈಸಿದ ಬೆನ್ನಲ್ಲೇ, ಸಚಿವ ಸಂಪುಟ ಪುನಾರಚನೆ ಅಥವಾ ಸಂಪುಟ ವಿಸ್ತರಣೆ ಆಗಲಿದೆ ಎಂಬ ಮಾತು ಕೇಳಿಬಂದಿತ್ತು. ಕೆಲಸ ಮಾಡದ ಸಚಿವರನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ಸಿಗಲಿದೆ ಎಂಬ ಚರ್ಚೆಯೂ ನಡೆದಿತ್ತು. ಈ ಭಯದಿಂದಲೇ ಹಲವು ಸಚಿವರು ದೆಹಲಿಗೆ ಆಗಮಿಸಿ ಹೈಕಮಾಂಡ್ ಭೇಟಿ ಮಾಡಿ ತಮ್ಮ 2 ವರ್ಷದ ಸಾಧನೆಗಳ ಬಗ್ಗೆ ವರದಿ ಸಲ್ಲಿಸಿದ್ದರು. ಇದರ ಜತೆಗೆ ಖಾತೆಯಲ್ಲೂ ಬದಲಾವಣೆ ಆಗಬಹುದೆಂಬ ನಿರೀಕ್ಷೆ ಹಾಲಿ ಸಚಿವರಿಗಿತ್ತು. ಎರಡೂವರೆ ಗಂಟೆ ನಡೆದ ಸಭೆಯಲ್ಲಿ ಸಚಿವ ಸಂಪುಟದ ವಿಚಾರ ಚರ್ಚೆಗೇ ಬರಲಿಲ್ಲ ಎಂದು ಸಭೆಯ ಬಳಿಕ ಸಿಎಂ ಸಿದ್ದರಾಮಯ್ಯ ಹೇಳಿದರು. ಈ ಎಲ್ಲ ಬೆಳವಣಿಗೆಗಳಿಂದಾಗಿ ಸಚಿವ ಸ್ಥಾನದ ಕನಸು ಕಂಡಿದ್ದ ಆಕಾಂಕ್ಷಿಗಳು ನವೆಂಬರ್ ಅಂತ್ಯ ಅಥವಾ ಡಿಸೆಂಬರ್​ವರೆಗೂ ಕಾಯುವುದು ಅನಿವಾರ್ಯವಾಗಿದೆ.

ಕಾಲ್ತುಳಿತ ಕೈಹಿಂಡಿದ ಕಾಂಗ್ರೆಸ್ ವರಿಷ್ಠರು

ಆರ್​ಸಿಬಿ ವಿಜಯೋತ್ಸವದ ವೇಳೆ ಬೆಂಗಳೂರಿನಲ್ಲಿ ನಡೆದ ಕಾಲ್ತುಳಿತ ದುರಂತ ಹಾಗೂ ಆ ನಂತರದ ಬೆಳವಣಿಗೆಗಳ ಕುರಿತು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ದೆಹಲಿ ವರಿಷ್ಠರಿಗೆ ಸಂಪೂರ್ಣ ಮಾಹಿತಿ ನೀಡಿದರು. ಸಂಭ್ರಮಾಚರಣೆಯಷ್ಟೇ ನಮ್ಮ ಉದ್ದೇಶವಾಗಿತ್ತು. ಆದರೆ ಮುನ್ನೆಚ್ಚರಿಕೆ ವಿಚಾರದಲ್ಲಿ ಪೊಲೀಸರು ಸರಿಯಾಗಿ ಮಾಹಿತಿ ನೀಡದಿರುವುದೇ ದುರ್ಘಟನೆಗೆ ಕಾರಣ ಎಂದು ಸ್ಪಷ್ಟನೆ ಕೊಟ್ಟರು. ಆದರೆ ಈ ವಿವರಣೆ ಒಪ್ಪದ ವರಿಷ್ಠರು, ಅಭಿನಂದನಾ ಸಮಾರಂಭ ಆತುರ ಹಾಗೂ ಅನಪೇಕ್ಷಿತವಾಗಿತ್ತು. ದೊಡ್ಡ ಸಂಖ್ಯೆಯಲ್ಲಿ ಜನ ಸೇರಿದಾಗ ಮೈಮರೆತಿದ್ದು ಸರಿಯಲ್ಲ, ಸರ್ಕಾರದಲ್ಲಿ ಹೊಂದಾಣಿಕೆ ಕೊರತೆ ಎದ್ದು ಕಾಣಿಸಿದೆ. ಗೃಹ ಇಲಾಖೆ ಕಾರ್ಯ ನಿರ್ವಹಣೆ ಬಗ್ಗೆ ಸಮಾಧಾನವಿಲ್ಲ. ಮುಂದೆ ಹೀಗಾಗದಂತೆ ಎಚ್ಚರ ವಹಿಸಬೇಕೆಂದು ಸೂಚಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net