ಯಾರಿಗೂ ಸಿಗದ ತವರು ಜಿಲ್ಲಾ ಉಸ್ತುವರಿ: ಮುಖ್ಯಮಂತ್ರಿ ಬಳಿಯೇ ಬೆಂಗಳೂರು ನಗರ; ಅಶೋಕ್, ಮಾಧುಸ್ವಾಮಿಗೆ ಉಸ್ತುವಾರಿ ಇಲ್ಲ

Vidhana Soudha vvani
Published on

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಅಧಿಕಾರಕ್ಕೆ ಆರು ತಿಂಗಳು ತುಂಬುವ ಸಂದರ್ಭದಲ್ಲಿ ಕೊನೆಗೂ ಹೈಕಮಾಂಡ್ ಸೂಚನೆಯಂತೆ ಉಸ್ತುವಾರಿ ಸಚಿವರನ್ನು ನೇಮಕ ಮಾಡಿದ್ದಾರೆ. ಆದರೆ, ಯಾವುದೇ ಸಚಿವರಿಗೆ ತವರು ಜಿಲ್ಲೆಯ ಉಸ್ತುವಾರಿ ನೀಡಿಲ್ಲ.

ಆರು ತಿಂಗಳಿನಿಂದ ಉಸ್ತುವಾರಿ ಸಚಿವರು ನೇಮಕವಾಗದೆ ತಳಹಂತದಲ್ಲಿ ಆಡಳಿತ ಯಂತ್ರ ನಿಷ್ಕ್ರಿಯವಾಗಿತ್ತು. ಪ್ರತಿ ಮೂರು ತಿಂಗಳಿಗೊಮ್ಮೆ ನಡೆಯಬೇಕಾಗಿದ್ದ ಕೆಡಿಪಿ ಸಭೆಗಳು ನಡೆಯದೆ ಅಭಿವೃದ್ಧಿ ಹಾಗೂ ಸರ್ಕಾರದ ಯೋಜನೆಗಳ ಪ್ರಗತಿಯ ವೇಗ ಸಾಕಷ್ಟು ಹಿಂದುಳಿದಿತ್ತು. ಈ ಬಗ್ಗೆ ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಬಸವರಾಜ ಬೊಮ್ಮಾಯಿ ಆಡಳಿತಕ್ಕೆ 6 ತಿಂಗಳು ಪೂರ್ಣವಾಗುವ 3 ದಿನಗಳ ಮುನ್ನ ಉಸ್ತುವಾರಿಗಳನ್ನು ನೇಮಕ ಮಾಡಲಾಗಿದೆ. ಬೊಮ್ಮಾಯಿ ಅಧಿಕಾರಕ್ಕೆ ಬರುತ್ತಿದ್ದಂತೆ ಕೋವಿಡ್, ಸ್ವಾತಂತ್ರೊ್ಯೕತ್ಸವ ಧ್ವಜಾರೋಹಣಕ್ಕೆ ಸಂಬಂಧಿಸಿದಂತೆ ಮಾತ್ರ ಉಸ್ತುವಾರಿ ಸೀಮಿತವಾಗಿತ್ತು.

ವರಿಷ್ಠರ ಗಮನಕ್ಕೆ: ರಾಜ್ಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಆರು ತಿಂಗಳಿನಿಂದ ನೇಮಕವಾಗಿಲ್ಲ ಎಂಬ ಮಾಹಿತಿ ವರಿಷ್ಠರ ಗಮನಕ್ಕೂ ಬಂದಿತ್ತು. ಪಕ್ಷದ ಕೆಲ ಮುಖಂಡರೇ ಈ ಬಗ್ಗೆ ವರಿಷ್ಠರ ಗಮನಕ್ಕೆ ತಂದಿದ್ದರು. ವರಿಷ್ಠರು ಕೂಡಲೇ ಉಸ್ತುವಾರಿ ಸಚಿವರನ್ನು ನೇಮಕ ಮಾಡಿ ಆಡಳಿತ ಯಂತ್ರ ಚುರುಕು ಮಾಡಬೇಕು. ಚುನಾವಣೆಗೆ ಇನ್ನೊಂದು ವರ್ಷ ಮಾತ್ರ ಇರುವುದರಿಂದ ಈ ನಿಟ್ಟಿನಲ್ಲಿ ಗಮನ ಹರಿಸಬೇಕೆಂದು ಸೂಚನೆ ನೀಡಿದ್ದರು. ಆನಂತರ ಪಟ್ಟಿ ಮಾಡಿ ಹೈಕಮಾಂಡ್​ಗೆ ಕಳುಹಿಸಲಾಗಿತ್ತು. ವರಿಷ್ಠರು ಭಾನುವಾರ ಒಪ್ಪಿಗೆ ನೀಡಿದರೆಂದು ಮೂಲಗಳು ತಿಳಿಸಿವೆ.

ಸಿಎಂ ಬಳಿ ಬೆಂಗಳೂರು: ಬೆಂಗಳೂರು ನಗರ ಜಿಲ್ಲೆಯ ಉಸ್ತುವಾರಿಗೆ ಸಾಕಷ್ಟು ಪೈಪೋಟಿ ಇತ್ತು. ಯಾರಿಗೆ ನೀಡಿದರೂ ಇತರರಿಗೆ ಅಸಮಧಾನ ಸಹಜವಾಗಿರುತ್ತದೆ ಎಂಬ ಕಾರಣಕ್ಕೆ ಬೊಮ್ಮಾಯಿ ಬೆಂಗಳೂರು ನಗರವನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ. ಯಾವುದೇ ಸಚಿವರಿಗೆ ತವರು ಜಿಲ್ಲೆಯ ಉಸ್ತುವಾರಿ ನೀಡಿಲ್ಲದಿರುವುದು ವಿಶೇಷ. ಇದೇ ಮೊದಲ ಬಾರಿಗೆ ಈ ಕ್ರಮ ಕೈಗೊಳ್ಳಲಾಗಿದೆ.

ಮೂವರಿಗೆ ತಲಾ ಎರಡು ಜಿಲ್ಲೆ: ಮೂವರು ಸಚಿವರಿಗೆ ತಲಾ ಎರಡು ಜಿಲ್ಲೆಯ ಉಸ್ತುವಾರಿ ನೀಡಲಾಗಿದೆ. ಕೃಷಿ ಸಚಿವ ಬಿ.ಸಿ.ಪಾಟೀಲ್​ಗೆ ಗದಗ ಹಾಗೂ ಚಿತ್ರದುರ್ಗ, ಅಬಕಾರಿ ಸಚಿವ ಕೆ.ಗೋಪಾಲಯ್ಯ ಅವರಿಗೆ ಹಾಸನ ಹಾಗೂ ಮಂಡ್ಯ, ಸಕ್ಕರೆ ಮತ್ತು ಜವಳಿ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಅವರಿಗೆ ರಾಯಚೂರು ಮತ್ತು ಬೀದರ್ ಜಿಲ್ಲೆಯ ಉಸ್ತುವಾರಿ ನೀಡಲಾಗಿದೆ.

ಇಬ್ಬರಿಗೆ ಯಾವುದೇ ಜಿಲ್ಲೆ ಇಲ್ಲ: ಕಂದಾಯ ಸಚಿವ ಆರ್.ಅಶೋಕ್, ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಅವರಿಗೆ ಯಾವುದೇ ಜಿಲ್ಲೆಯ ಉಸ್ತುವಾರಿ ನೀಡಿಲ್ಲ. ಅಶೋಕ್ ತಮಗೆ ಯಾವುದೇ ಜಿಲ್ಲೆಯ ಉಸ್ತುವಾರಿ ಬೇಡವೆಂದು ಮೊದಲೇ ಹೇಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net