

ಬೆಂಗಳೂರು: ದೇಶಾದ್ಯಂತ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ವಿದ್ಯಾರ್ಥಿ ವಿದ್ಯಾರ್ಥಿವೇತನಕ್ಕಾಗಿ ನಡೆಸುವ ನ್ಯಾಷನಲ್ ಮೀನ್ಸ್ ಕಮ್ ಮೆರಿಟ್ ಸ್ಕಾಲರ್‌ಶಿಪ್ (ಎನ್‌ಎಂಎಂಎಸ್) ಪರೀಕ್ಷೆಯನ್ನು ಮುಂದೂಡಲಾಗಿದೆ.
ಈ ಮೊದಲು ಜ.5ರಂದು ನಡೆಸಲು ಉದ್ದೇಶಿಸಲಾಗಿತ್ತು. ಅದನ್ನು ಕಾರಣಾಂತರಗಳಿಂದ ಜ.19ರಂದು ನಡೆಸಲು ನಿಗದಿ ಮಾಡಲಾಗಿದೆ. ಈ ಬಗ್ಗೆ ಜಿಲ್ಲೆ, ತಾಲ್ಲೂಕು, ಶಾಲಾ ಹಂತದಲ್ಲಿ ವ್ಯಾಪಕ ಪ್ರಚಾರ ನೀಡಿ ವಿದ್ಯಾರ್ಥಿಗಳು ಪರೀಕ್ಷೆಗೆ ಸಿದ್ಧತೆ ನಡೆಸಲು ಅಗತ್ಯ ಕ್ರಮ ವಹಿಸುವಂತೆ ಕರ್ನಾಟಕ ಶಾಲಾ ಗುಣಮಟ್ಟ ಮೌಲ್ಯಾಂಕನ ಮತ್ತು ಅಂಗೀಕರಣ ಪರಿಷತ್ತಿನ ಕಾರ್ಯನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.
ಈಗಾಗಲೇ ಪರೀಕ್ಷಾ ಕೇಂದ್ರಗಳ ಮಾಹಿತಿಯನ್ನು ನೀಡಲಾಗಿದ್ದು, ಅದರಲ್ಲಿ ಯಾವುದೇ ಬದಲಾವಣೆಗಳು ಇರುವುದಿಲ್ಲ. ಬದಲಾವಣೆಗಳಿದ್ದಲ್ಲಿ ಡಿ.26ರೊಳಗೆ ದೃಢೀಕರಿಸಿ ಮಾಹಿತಿಯನ್ನು ಕಡ್ಡಾಯವಾಗಿ ಸಲ್ಲಿಸಲು ಜಿಲ್ಲಾ ಉಪನಿರ್ದೇಶಕರಿಗೆ ಸೂಚಿಸಿದೆ. ನಿಗದಿತ ದಿನಾಂಕದೊಳಗೆ ಮಾಹಿತಿಯನ್ನು ಸಲ್ಲಿಸದಿದ್ದಲ್ಲಿ ಈಗಾಗಲೇ ಸಲ್ಲಿಸಿರುವ ಮಾಹಿತಿಯನ್ನೇ ಅಂತಿಮವೆಂದು ಪರಿಗಣಿಸಲಾಗುತ್ತದೆ ಎಂದು ತಿಳಿಸಿದ್ದಾರೆ.