

ನವದೆಹಲಿ: ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿ ತಮಿಳುನಾಡು ಮತ್ತು ಪುದುಚೆರಿ ಕರಾವಳಿಗೆ ಅಪ್ಪಳಿಸಿರುವ ನಿವಾರ್ ಚಂಡಮಾರುತ ಅಪಾರ ಹಾನಿ ಉಂಟುಮಾಡಿದೆ. 130 ಕಿ.ಮೀ. ವೇಗದಲ್ಲಿ ಚಂಡಮಾರುತ ಅಪ್ಪಳಿಸಿದ್ದು, ಗಾಳಿ-ಮಳೆಗೆ ಸಂಬಂಧಿಸಿದ ಅವಘಡದಲ್ಲಿ ಕನಿಷ್ಠ ಆರು ಜನರು ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ. ನೂರಾರು ಮರಗಳು, ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ. ತಗ್ಗು ಪ್ರದೇಶಗಳಲ್ಲಿರುವ ನೂರಾರು ಮನೆಗಳಿಗೆ ನೀರು ನುಗ್ಗಿದೆ. ಹತ್ತಾರು ಸಾವಿರ ಜನರು ನಿರಾಶ್ರಿತರ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ.
ಆಂಧ್ರ ಪ್ರದೇಶದ ಹಲವು ಭಾಗಗಳಲ್ಲೂ ಭಾರಿ ಮಳೆಯಾಗಿದೆ. ಓರ್ವ ವ್ಯಕ್ತಿ ಮೃತಪಟ್ಟಿದ್ದು, ಇನ್ನೊಬ್ಬ ನದಿಯಲ್ಲಿ ಕೊಚ್ಚಿ ಹೋಗಿ ದ್ದಾನೆ. ಇಬ್ಬರನ್ನು ಎನ್ಡಿಆರ್ಎಫ್ ತಂಡ ರಕ್ಷಣೆ ಮಾಡಿದೆ. ಗರಿಷ್ಠ 30 ಸೆಂಮೀ ಮಳೆಯಾಗಿದೆ. ನೂರಕ್ಕೂ ಅಧಿಕ ಆಶ್ರಯ ಕೇಂದ್ರಗಳನ್ನು ತೆರೆಯಲಾಗಿದೆ.
ರಾಜ್ಯದತ್ತ ನಿವಾರ್: ವಾಯವ್ಯ ದಿಕ್ಕಿನತ್ತ ಸಾಗುತ್ತಿರುವ ಚಂಡಮಾರುತ ಕರ್ನಾಟಕವನ್ನು ಹಾದುಹೋಗಲಿದ್ದು, ರಾಜ್ಯದ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಹೀಗಾಗಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಅಧಿಕಾರಿಗಳು ತಿಳಿಸಿದ್ದಾರೆ.
ನಿವಾರ್ ಚಂಡಮಾರುತ ದುರ್ಬಲಗೊಳ್ಳುತ್ತಿರುವುದ ರಿಂದ ರಾಜ್ಯದಲ್ಲಿ ಗಂಭೀರ ಸಮಸ್ಯೆ ಎದುರಾಗದು ಎಂದು ನಿರೀಕ್ಷಿಸಲಾಗಿದೆ. ಆದಾಗ್ಯೂ ಜಿಲ್ಲಾ ಆಡಳಿತಗಳು ಪೂರಕ ಸಿದ್ಧತೆಗಳನ್ನು ಮಾಡಿ ಕೊಂಡಿವೆ. ಗಂಭೀರ ಪರಿಸ್ಥಿತಿ ಎದುರಾದರೆ ಕಾಳಜಿ ಕೇಂದ್ರಗಳನ್ನು ತೆರೆಯಬೇಕು. ಸಂತ್ರಸ್ತರಿಗೆ ನಿತ್ಯ ಬಳಕೆ ವಸ್ತುಗಳನ್ನು ಪೂರೈಕೆ ಮಾಡಬೇಕು ಎಂದು ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.
ಕೋಲಾರದಲ್ಲಿ ಹಳೇ ಕಟ್ಟಡಗಳು ಜಡಿ ಮಳೆ ಯಿಂದ ಕುಸಿಯುವ ಸಾಧ್ಯತೆ ಇರುವುದರಿಂದ ಕಟ್ಟಡಗಳ ಮಾಲೀಕರು ಎಚ್ಚರವಹಿಸಬೇಕೆಂದು ನಗರಸಭೆ ಅಧಿಕಾರಿಗಳು ಹೇಳಿದ್ದಾರೆ. ತಗ್ಗು ಪ್ರದೇಶದಲ್ಲಿ ವಾಸವಾಗಿರುವ ಜನರಿಗೂ ಎಚ್ಚರದಿಂದ ಇರುವಂತೆ, ಸಮಸ್ಯೆಯಿದ್ದಲ್ಲಿ ನಗರಸಭೆ, ತಾಲೂಕು ಆಡಳಿತ ಇಲ್ಲವೇ ಜಿಲ್ಲಾಧಿಕಾರಿಗಳ ಕಚೇರಿಗೆ ಮಾಹಿತಿ ನೀಡಿ ರಕ್ಷಣೆ ಪಡೆಯುವಂತೆ ಸೂಚಿಸಲಾಗಿದೆ. ಅಗತ್ಯವಿದ್ದಲ್ಲಿ ಕಾಳಜಿ ಕೇಂದ್ರ ಹಾಗೂ ಇನ್ನಿತರ ವ್ಯವಸ್ಥೆ ಕಲ್ಪಿಸಲು ಸಿದ್ಧರಿದ್ದೇವೆ ಎಂದು ಕೋಲಾರ ಜಿಲ್ಲಾಧಿಕಾರಿ ಸಿ.ಸತ್ಯಭಾಮ ತಿಳಿಸಿದ್ದಾರೆ.