

ನವದೆಹಲಿ: ಬಿಹಾರ ವಿಧಾನಸಭೆಗೆ ವರ್ಷಾಂತ್ಯ ನಡೆಯಲಿರುವ ಚುನಾವಣೆಯಲ್ಲಿ ಹಾಲಿ ಮುಖ್ಯಮಂತ್ರಿ ನಿತೀಶ್ಕುಮಾರ್ ಅವರನ್ನೇ ಎನ್ಡಿಎ ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಮಾಡುವ ಪ್ರಸ್ತಾವನೆಗೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹಸಿರು ನಿಶಾನೆ ತೋರಿದ್ದಾರೆ. ಈ ಮೂಲಕ ಯಾರು ಸಿಎಂ ಅಭ್ಯರ್ಥಿ ಆಗಲಿದ್ದಾರೆ ಎಂಬ ಗೊಂದಲಕ್ಕೆ ತೆರೆಬಿದ್ದಿದೆ.
ಬಿಹಾರದ ಪೆಟ್ರೋಲಿಯಂ ಕ್ಷೇತ್ರಕ್ಕೆ ಸಂಬಂಧಿಸಿದ ಮೂರು ಪ್ರಮುಖ ಯೋಜನೆಗಳನ್ನು ವಿಡಿಯೋ ಕಾನ್ಪರೆನ್ಸ್ ಮೂಲಕ ಲೋಕಾರ್ಪಣೆ ಮಾಡಿ ಮಾತನಾಡಿದ ಮೋದಿ, ‘ನವಭಾರತ ಮತ್ತು ಹೊಸ ಬಿಹಾರದಲ್ಲಿ ನಿತೀಶ್ ದೊಡ್ಡ ಪಾತ್ರ ವಹಿಸಿದ್ದಾರೆ’ ಎಂದು ಶ್ಲಾಘಿಸಿದರು. ಅಭಿವೃಧಿಯಲ್ಲಿ ಬಿಹಾರ ಅನೇಕ ವರ್ಷಗಳಿಂದ ಹಿಂದುಳಿದಿತ್ತು. ರಾಜಕೀಯ, ಇಚ್ಛಾಶಕ್ತಿ ಕೊರತೆ ಅದಕ್ಕೆ ಕಾರಣಗಳು ಎಂದು ಪ್ರಧಾನಿ ವಿಶ್ಲೇಷಿಸಿದರು. ಇದನ್ನೂ ಓದಿ: ಗಾಲ್ವಾನ್ ಸಂಘರ್ಷದಲ್ಲಿ ಹತ್ಯೆಯಾದ ಚೀನಾ ಯೋಧರ ಸಂಖ್ಯೆ 60ಕ್ಕೂ ಹೆಚ್ಚು; ಅಮೆರಿಕ ಮೂಲದಿಂದ ಸತ್ಯ ಬಯಲು…!
ಬಿಹಾರ ಎನ್ಡಿಎಯಲ್ಲಿ ಭಿನ್ನಾಭಿಪ್ರಾಯಗಳು ತಲೆದೋರಿರುವುದರ ನಡುವೆಯೇ ನಿತೀಶ್ರನ್ನು ಸಿಎಂ ಅಭ್ಯರ್ಥಿ ಎಂದು ಪ್ರಧಾನಿಯೇ ಬಿಂಬಿಸಿರುವುದು ಮಹತ್ವದ ವಿದ್ಯಮಾನವಾಗಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಕೂಡ ಕೆಲ ದಿನಗಳ ಹಿಂದೆ ನಿತೀಶ್ಕುಮಾರ್ ಹೆಸರನ್ನು ಅಂಗೀಕರಿಸಿದ್ದರು. ಕೆಲವು ಬಿಜೆಪಿ ನಾಯಕರೇ ನಿತೀಶ್ ಕುರಿತು ಗೊಣಗುತ್ತಿದ್ದರೆ ಎನ್ಡಿಎ ಭಾಗವಾಗಿರುವ ರಾಮ್ ವಿಲಾಸ್ ಪಾಸ್ವಾನ್ರ ಲೋಕ ಜನಶಕ್ತಿ ಪಕ್ಷ (ಎಲ್ಜೆಪಿ), ಸಂಯುಕ್ತ ಜನತಾ ದಳದ ವಿರುದ್ಧವೇ ಸ್ಪರ್ಧಿಸುವ ಸುಳಿವು ನೀಡಿದ್ದು ಆಂತರಿಕ ಕಲಹವನ್ನು ಬೀದಿಗೆ ತಂದಿದೆ. ಒಂದು ಕಾಲದಲ್ಲಿ ಮೋದಿಯವರ ಕಡು ಎದುರಾಳಿಯಾಗಿದ್ದ ನಿತೀಶ್ಕುಮಾರ್, 2013ರಲ್ಲಿ ಬಿಜೆಪಿ ಜೊತೆಗಿನ ನಂಟನ್ನು ಕಡಿದು ಕೊಂಡಿದ್ದರು. ಆಗ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಮೋದಿಯವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಲಾಗಿತ್ತು.
ಪಾರಾದೀಪ್-ಹಾಲ್ಡಿಯಾ-ದುರ್ಗಾಪುರ ತೈಲ ಕೊಳವೆ ಮಾರ್ಗದ ದುರ್ಗಾಪುರ-ಬಂಕಾ ವಿಭಾಗ ಮತ್ತು 2 ಎಲ್ಪಿಜಿ ಬಾಟ್ಲಿಂಗ್ ಘಟಕಗಳನ್ನು ಪ್ರಧಾನಿ ಉದ್ಘಾಟಿಸಿದರು. ರಾಜ್ಯದಲ್ಲಿ ಹೆಚ್ಚುತ್ತಿರುವ ಎಲ್ಪಿಜಿ ಬೇಡಿಕೆಯನ್ನು ಪೂರೈಸಲು ಬಾಟ್ಲಿಂಗ್ ಘಟಕಗಳು ನೆರವಾಗಲಿವೆ. ಬಿಹಾರದ ಸ್ವಾವಲಂಬನೆಗೆ ಅದು ಪೂರಕವಾಗಲಿದೆ.