

ಪಾಟ್ನಾ: ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡಲು ಕೇಂದ್ರ ಸರ್ಕಾರ ನಿರಾಕರಿಸಿದೆ. ಬಿಹಾರ ವಿಶೇಷ ಸ್ಥಾನಮಾನದ ಮಾನದಂಡಕ್ಕೆ ಸರಿಹೊಂದುವುದಿಲ್ಲ ಎಂದು ಸ್ಪಷ್ಟನೆ ನೀಡಿದೆ. ಕೇಂದ್ರ ಸರ್ಕಾರದ ಅಂತಿಮ ನಿರ್ಣಯದ ಬಳಿಕ ಬಿಹಾರದ ರಾಜಕೀಯ ವಲಯ ರಂಗೇರಿದೆ.
ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ ಕುರಿತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮಂಗಳವಾರ (ಜುಲೈ 23) ಪ್ರತಿಕ್ರಿಯಿಸಿದ್ದಾರೆ. ನಗುನಗುತ್ತಲೇ ನಿಮಗೆ ಎಲ್ಲವೂ ಕ್ರಮೇಣ ತಿಳಿಯಲಿದೆ ಎಂದು ಹೇಳಿದ್ದಾರೆ. ಅಲ್ಲದೆ ಜೆಡಿಯು ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಸಿದ್ದು, ಬಿಹಾರಕ್ಕೆ ವಿಶೇಷ ಸ್ಥಾನಮಾನದ ಹೊಸ ಬೇಡಿಕೆಗೆ ಸಂಬಂಧಿಸಿದಂತೆ ನಿರ್ಣಯವನ್ನು ಅಂಗೀಕರಿಸಿದೆ ಎನ್ನಲಾಗಿದೆ.
ಕೇಂದ್ರ ಸರ್ಕಾರದಲ್ಲಿ ಇಬ್ಬರು ಸಚಿವರನ್ನು ಹೊಂದಿರುವ ಜನತಾ ದಳ (ಯು) ನಾಯಕರು, ಪ್ರಸ್ತಾವನೆಯು ವಿಶೇಷ ಪ್ಯಾಕೇಜ್‌ಗಳು ಮತ್ತು ಇತರ ರೀತಿಯ ನೆರವು ಕುರಿತು ಮಾತನಾಡಿದೆ. ಬಿಹಾರ ರಾಜ್ಯಕ್ಕೆ ಪ್ರಧಾನಿ ಮೋದಿ ಸರ್ಕಾರದಿಂದ ಇನ್ನೂ ಸಾಕಷ್ಟು ಬೆಂಬಲ ಸಿಗಲಿದೆ ಎಂದು ಹೇಳಿದರು. ಬಿಹಾರಕ್ಕೆ ಮೋಸ ಮಾಡಿದ್ದಾರೆ. ವಿಶೇಷ ಸ್ಥಾನಮಾನ ನೀಡಲು ಕೇಂದ್ರ ಸರ್ಕಾರ ನಿರಾಕರಿಸಿದ ನಂತರ ಜೆಡಿಯು ಮುಖ್ಯಸ್ಥರು ರಾಜೀನಾಮೆ ನೀಡಬೇಕು ಎಂದು ರಾಜ್ಯದ ವಿಪಕ್ಷ ನಾಯಕರು ಒತ್ತಾಯಿಸಿದ್ದಾರೆ.
ಕೇಂದ್ರ ಸರ್ಕಾರವು 2024ರ ಬಜೆಟ್‌ನಲ್ಲಿ ಬಿಹಾರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಲು ನಿರಾಕರಣೆ ನೀಡಿದೆ. ಆದರೆ ಬಿಹಾರದಲ್ಲಿನ ವಿವಿಧ ರಸ್ತೆ ಯೋಜನೆಗಳಿಗಾಗಿ ಸರ್ಕಾರವು 26,000 ಕೋಟಿ ರೂಪಾಯಿಗಳನ್ನು ಪ್ರಸ್ತಾಪಿಸಿದೆ. ಜತೆಗೆ ಬಹುಪಕ್ಷೀಯ ಅಭಿವೃದ್ಧಿ ಏಜೆನ್ಸಿಗಳ ಸಹಾಯದಿಂದ ಬಿಹಾರಕ್ಕೆ ಆರ್ಥಿಕ ನೆರವು ನೀಡಲಾಗುವುದು ಎಂದು ಹಣಕಾಸು ಸಚಿವರು ಹೇಳಿದ್ದಾರೆ.
ವಿಶೇಷ ಸ್ಥಾನಮಾನವು ಹಿಂದುಳಿದ ರಾಜ್ಯಕ್ಕೆ ಅದರ ಬೆಳವಣಿಗೆಯನ್ನು ವೇಗಗೊಳಿಸಲು ಹೆಚ್ಚಿನ ಕೇಂದ್ರ ಬೆಂಬಲವನ್ನು ಖಾತ್ರಿಗೊಳಿಸುತ್ತದೆ. ಸಂವಿಧಾನವು ಯಾವುದೇ ರಾಜ್ಯಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿಲ್ಲ. ಇದನ್ನು 1969ರಲ್ಲಿ ಐದನೇ ಹಣಕಾಸು ಆಯೋಗದ ಶಿಫಾರಸುಗಳ ಮೇಲೆ ಪರಿಚಯಿಸಲಾಯಿತು. ಇದುವರೆಗೆ ಜಮ್ಮು ಮತ್ತು ಕಾಶ್ಮೀರ (ಈಗ ಕೇಂದ್ರಾಡಳಿತ ಪ್ರದೇಶ), ಈಶಾನ್ಯ ರಾಜ್ಯಗಳು ಮತ್ತು ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಂತಹ ಗುಡ್ಡಗಾಡು ರಾಜ್ಯಗಳು ವಿಶೇಷ ಸ್ಥಾನಮಾನವನ್ನು ಪಡೆದಿರುವ ರಾಜ್ಯಗಳಾಗಿವೆ. (ಏಜೆನ್ಸೀಸ್)