

ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನಿನ್ನೆ ನೀಡಿದ ವಿವಾದಾತ್ಮಕ ಹೇಳಿಕೆಗೆ ಕ್ಷಮೆಯಾಚಿಸಿದ್ದಾರೆ. ಮಹಿಳೆಯರ ಅಭ್ಯುದಯಕ್ಕಾಗಿ ಈ ಹೇಳಿಕೆ ನೀಡಿದ್ದೇನೆ ಎಂದು ಮಾಧ್ಯಮಗಳ ಮುಂದೆ ಹೇಳಿದ ಅವರು, ಯಾರನ್ನೂ ನೋಯಿಸುವುದು ನನ್ನ ಉದ್ದೇಶವಲ್ಲ. ಇದರಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಯಾಚಿಸುತ್ತೇನೆ. ನನ್ನ ಮಾತನ್ನು ವಾಪಸ್ ಪಡೆಯುತ್ತೇನೆ ಎಂದು ತಿಳಿಸಿದ್ದಾರೆ.
ಗದ್ದಲ ಸೃಷ್ಟಿಸಿದ ಬಿಜೆಪಿ, ವಿಧಾನಸಭೆಯಲ್ಲೂ ನಿತೀಶ್ ಕ್ಷಮೆಯಾಚನೆ
ಮುಖ್ಯಮಂತ್ರಿ ನಿತೀಶ್ ಕುಮಾರ್ ವಿಧಾನಸಭೆಯಲ್ಲಿ ಕೂಡ ಕ್ಷಮೆಯಾಚಿಸಿದ್ದಾರೆ. ಬಿಜೆಪಿ ಮತ್ತು ಇತರ ವಿರೋಧ ಪಕ್ಷಗಳು ಗದ್ದಲವನ್ನು ಸೃಷ್ಟಿಸಿ, ನಿತೀಶ್ ಕುಮಾರ್ ರಾಜೀನಾಮೆಗೆ ಒತ್ತಾಯಿಸಿದರು. ಆಗ ನಿತೀಶ್ ಕುಮಾರ್ ಕೂಡ ತುಂಬು ಸದನದಲ್ಲಿ ಕ್ಷಮೆ ಯಾಚಿಸಿದರು. ಅಂತಹ ಉದ್ದೇಶ ನನಗಿರಲಿಲ್ಲ ಎಂದು ಹೇಳಿದರು. ನಾವು ಯಾವಾಗಲೂ ಮಹಿಳೆಯರ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿದ್ದೇವೆ. ಉದ್ಯೋಗದಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಿದ್ದೇವೆ. ಆದರೂ ನನ್ನ ಮಾತುಗಳಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ. ನಾನು ನನ್ನ ಮಾತುಗಳನ್ನು ಹಿಂದಕ್ಕೆ ತೆಗೆದುಕೊಳ್ಳುತ್ತೇನೆ ಎಂದರು.
ನನ್ನನ್ನು ನಾನು ಖಂಡಿಸುತ್ತೇನೆ
ವಿಧಾನಸಭೆಯಲ್ಲಿ ಭಾರೀ ಗದ್ದಲದ ನಡುವೆಯೇ ಸಿಎಂ ನಿತೀಶ್ ಕುಮಾರ್ ಅವರು, ನನಗೆ ನಾಚಿಕೆಯಾಗುವುದು ಮಾತ್ರವಲ್ಲ, ನನ್ನನ್ನು ನಾನು ಖಂಡಿಸುತ್ತೇನೆ. ನನ್ನ ಮಾತನ್ನು ಹಿಂದಕ್ಕೆ ತೆಗೆದುಕೊಳ್ಳುತ್ತೇನೆ ಎಂದು ಹೇಳಿದರು. ಅಷ್ಟೇ ಅಲ್ಲ, ಯಾರಾದರೂ ನನ್ನನ್ನು ಟೀಕಿಸುತ್ತಿದ್ದರೆ, ನಾನು ಅವರನ್ನು ಅಭಿನಂದಿಸುತ್ತೇನೆ ಎಂದರು.
ಸಿಎಂ ನಿತೀಶ್ ಹೇಳಿದ್ದೇನು ?
ಮದುವೆಯ ನಂತರ ಪುರುಷರು ತಮ್ಮ ಪತ್ನಿಯರನ್ನು ಸಂ*ಭೋಗಿಸಲು ಕೇಳುತ್ತಾರೆ, ಆದರೆ ಬಿಹಾರದಲ್ಲಿ ವಿದ್ಯಾವಂತ ಮಹಿಳೆಯರು ತಮ್ಮ ಗಂಡಂದಿರನ್ನು ಸರಿಯಾದ ಸಮಯದಲ್ಲಿ ಹಾಗೆ ಮಾಡುವುದನ್ನು ನಿಲ್ಲಿಸುವಂತೆ ಕೇಳುತ್ತಾರೆ ಎಂದು ನಿತೀಶ್ ಕುಮಾರ್ ಹೇಳಿದರು. ಇದರಿಂದಾಗಿ ಬಿಹಾರದ ಜನಸಂಖ್ಯೆ ನಿಯಂತ್ರಣದಲ್ಲಿದೆ ಎಂದಾಗ ಹಿಂದೆ ಕುಳಿತಿದ್ದ ಕೆಲ ಶಾಸಕರು ನಗುತ್ತಿದ್ದರು.