

Nitish Kumar: ಬಿಹಾರ ಸರ್ಕಾರವು ಅತಿ ಶೀಘ್ರದಲ್ಲೇ ನೈರ್ಮಲ್ಯ ಕಾರ್ಮಿಕರ ಅಭಿವೃದ್ದಿಗಾಗಿ ಸಫಾಯಿ ಕರ್ಮಚಾರಿ ಆಯೋಗವನ್ನು ಸ್ಥಾಪಿಸಲಿದೆ ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಭಾನುವಾರ (ಜುಲೈ27) ಘೋಷಿಸಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಈ ಘೋಷಣೆ ಮಾಡಿರುವ ನಿತೀಶ್ ಕುಮಾರ್, ರಾಜ್ಯಾದ್ಯಂತ ನೈರ್ಮಲ್ಯ ಕಾರ್ಮಿಕರ ಹಕ್ಕುಗಳ ರಕ್ಷಣೆ, ಕಲ್ಯಾಣ, ಪುನರ್ವಸತಿ, ಕುಂದುಕೊರತೆ ಆಲಿಸಲು ಮತ್ತು ಅವರಿಗೆ ಸಂಬಂಧಪಟ್ಟ ಯೋಜನೆಗಳ ಅನುಷ್ಠಾನದ ಮೇಲೆ ಗಮನ ಕೇಂದ್ರೀಕರಿಸುವ ಸಲುವಾಗಿ ಆಯೋಗವನ್ನು ರಚಿಸಲು ಸಂಬಂಧಪಟ್ಟ ಇಲಾಖೆಗೆ ನಿರ್ದೇಶನ ನೀಡಿದ್ದೇನೆ ಎಂದು ಟ್ವೀಟ್ನಲ್ಲಿ ಬರೆದುಕೊಂಡಿದ್ದಾರೆ.
ಸ್ವಚ್ಛತೆಯ ಕಾರ್ಯದಲ್ಲಿ ತೊಡಗಿರುವ ವಂಚಿತ ವರ್ಗಗಳನ್ನು ಮುಖ್ಯವಾಹಿನಿಗೆ ತರುವಲ್ಲಿ ಮತ್ತು ಅವರ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಕೊಡುಗೆ ನೀಡುವಲ್ಲಿ ಆಯೋಗವು ಮಹತ್ವದ ಪಾತ್ರ ವಹಿಸುತ್ತದೆ. ಕಾರ್ಮಿಕರ ಹಕ್ಕುಗಳನ್ನು ರಕ್ಷಿಸುವ ಕುರಿತು ಆಯೋಗವು ಸರ್ಕಾರಕ್ಕೆ ಶಿಫಾರಸುಗಳನ್ನು ನೀಡುತ್ತದೆ ಮತ್ತು ಅವರ ಅಭಿವೃದ್ದಿ ಯೋಜನೆಗಳ ಅನುಷ್ಠಾನವನ್ನು ಮೇಲ್ವಿಚಾರಣೆ ಮಾಡುತ್ತದೆ ಎಂದು ಈ ವೇಳೆ ತಿಳಿಸಿದ್ದಾರೆ.
ಈ ಆಯೋಗವು ಒಬ್ಬ ಅಧ್ಯಕ್ಷರು, ಒಬ್ಬ ಉಪಾಧ್ಯಕ್ಷರು ಮತ್ತು ಒಬ್ಬ ಮಹಿಳೆ ಅಥವಾ ತೃತಿಯ ಲಿಂಗಿಗಳ ಪ್ರತಿನಿಧಿ ಸೇರಿದಂತೆ ಒಟ್ಟು ಐದು ಸದಸ್ಯರನ್ನು ಒಳಗೊಂಡಿರುತ್ತದೆ.
ವರ್ಷಾಂತ್ಯದಲ್ಲಿ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳುಗಳ ಉಳಿದಿರುವಾಗ ಈ ಆಯೋಗವನ್ನು ರಚಿಸಿದ್ದು, ಇದು ಚುನಾವಣೆಯ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದನ್ನು ಕಾದು ನೋಡಬೇಕಿದೆ. (ಏಜೆನ್ಸೀಸ್)