ಇಂದಿನಿಂದ ನಿರ್ಮಲಾ ಅಮೆರಿಕ ಪ್ರವಾಸ

Nirmala Sitaraman
Published on

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಮೆರಿಕ ಮತ್ತು ಪೆರುವಿಗೆ 11 ದಿನಗಳ ಪ್ರವಾಸ ಕೈಗೊಳ್ಳಲಿದ್ದಾರೆ. ಈ ವೇಳೆ ಅವರು ಐಎಂಎಫ್- ವಿಶ್ವಬ್ಯಾಂಕ್ ಮತ್ತು ಜಿ-20 ರಾಷ್ಟ್ರಗಳ ಸಭೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಶನಿವಾರ ರಾತ್ರಿ ಪ್ರಯಾಣ ಆರಂಭಿಸಿದ್ದು, ಸ್ಯಾನ್​ಫ್ರಾನ್ಸಿಸ್ಕೊದಲ್ಲಿ ಪ್ರಮುಖ ಮಾಹಿತಿ ತಂತ್ರಜ್ಞಾನ ಕಂಪನಿಗಳ ಸಿಇಒಗಳ ಜತೆ ಸಭೆ ನಿಗದಿಯಾಗಿದೆ. ಸ್ಟ್ಯಾನ್​ಫೋರ್ಡ್ ವಿವಿಯಲ್ಲಿ ಉಪನ್ಯಾಸ ನೀಡಲಿದ್ದಾರೆ. ಅಲ್ಲಿ ನೆಲೆಸಿರುವ ಭಾರತೀಯರ ಜತೆಗೂ ಮಾತುಕತೆ ನಡೆಸಲಿದ್ದಾರೆ. ಏಪ್ರಿಲ್ 22, 23ರಂದು ವಾಷಿಂಗ್ಟನ್​ನಲ್ಲಿ ಐಎಂಎಫ್, ವಿಶ್ವಬ್ಯಾಂಕ್ ಸಭೆಗಳಲ್ಲಿ ಪಾಲ್ಗೊಳ್ಳುತ್ತಾರೆ. ಜೊತೆಗೆ, ಅರ್ಜೆಂಟೀನಾ, ಬಹ್ರೖೆನ್, ಜರ್ಮನಿ, ಫ್ರಾನ್ಸ್, ಲಕ್ಸೆಂಬರ್ಗ್, ಸೌದಿ, ಬ್ರಿಟನ್, ಅಮೆರಿಕ ಜತೆ ದ್ವಿಪಕ್ಷೀಯ ಚರ್ಚೆ ನಡೆಸುತ್ತಾರೆ. ಏ. 26ರಿಂದ 30ರವರೆಗೆ ಪೆರುವಿಗೆ ಭೇಟಿ ನೀಡಿ ಅಲ್ಲಿನ ಅಧ್ಯಕ್ಷರನ್ನು ಭೇಟಿ ಮಾಡಲಿದ್ದಾರಲ್ಲದೆ ಭಾರತ-ಪೆರು ವ್ಯಾಪಾರ ವೇದಿಕೆಯ ಸಭೆಯಲ್ಲಿಯೂ ಭಾಗವಹಿಸುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net