

ನವದೆಹಲಿ: ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಈ ವರ್ಷದ ನ್ಯಾಷನಲ್ ಇನ್ಸ್ಟಿಟ್ಯೂಷನಲ್ ರ‍್ಯಾಂಕಿಂಗ್ ಫ್ರೇಮ್ವರ್ಕ್ (ಎನ್ಐಆರ್ಎಫ್) ಶ್ರೇಣಿ ಪ್ರಕ್ರಿಯೆಯನ್ನು ಮುಂದೂಡಿದೆ.
ದೇಶದಲ್ಲಿ ಕರೊನಾ ಸೋಂಕು ವ್ಯಾಪಿಸುವುದನ್ನು ತಡೆಗಟ್ಟಲು ಶಾಲಾ-ಕಾಲೇಜು ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ. ಏಪ್ರಿಲ್ 14ರವರೆಗೆ ಲಾಕ್ಡೌನ್ ಜಾರಿಯಲ್ಲಿದೆ. ಕಾರಣದಿಂದಾಗಿ ಎನ್ಐಆರ್ಎಫ್ ಶ್ರೇಣಿ ನೀಡುವಿಕೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ ಎಂದು ಸಂಸ್ಥೆ ತಿಳಿಸಿದೆ.
ಕಳೆದ ವರ್ಷ ಏಪ್ರಿಲ್ನಲ್ಲಿ ಎನ್ಐಆರ್ಎಫ್ ರ‍್ಯಾಂಕಿಂಗ್ ಘೋಷಿಸಲಾಗಿತ್ತು. ಉನ್ನತ ಶಿಕ್ಷಣ ಸಂಸ್ಥೆಗಳ ಪೈಕಿ ಮದ್ರಾಸ್ ಐಐಟಿ ಮೊದಲ ಸ್ಥಾನದಲ್ಲಿತ್ತು. ಎರಡನೇ ಸ್ಥಾನದಲ್ಲಿ ಬೆಂಗಳೂರಿನ ಐಐಎಸ್ಸಿ ಇದ್ದರೆ, ಮೂರನೇ ಸ್ಥಾನವನ್ನು ದೆಹಲಿ ಐಐಟಿ ಪಡೆದುಕೊಂಡಿತ್ತು.
ವ್ಯವಹಾರ ನಿರ್ವಹಣಾ ಸಂಸ್ಥೆಗಳ ಪೈಕಿ ಬೆಂಗಳೂರಿನ ಐಐಎಂ ಅಗ್ರಸ್ಥಾನದಲ್ಲಿತ್ತು. ಐಐಎಂ ಅಹಮದಾಬಾದ್, ಐಐಎಂ ಕೋಲ್ಕತ್ತ ಕ್ರಮವಾಗಿ ಎರಡನೇ ಹಾಗೂ ಮೂರನೇ ಸ್ಥಾನ ಪಡೆದುಕೊಂಡಿದ್ದವು.
ದೇಶದಲ್ಲಿರುವ ಖಾಸಗಿ, ಅನುದಾನಿತ ಹಾಗೂ ಖಾಸಗಿ ವಿಶ್ವವಿದ್ಯಾಲಯಗಳು, ಉನ್ನತ ಶಿಕ್ಷಣ ಸಂಸ್ಥೆಗಳ ಸಾಧನೆಯನ್ನು ಗುರುತಿಸಿ ಪ್ರತಿವರ್ಷ ಎನ್ಐಆರ್ಎಫ್ ಅನ್ವಯ ಶ್ರೇಣಿಯನ್ನು ನೀಡಲಾಗುತ್ತದೆ.