ದಯಾ ಅರ್ಜಿ ಸಲ್ಲಿಕೆಗೆ ತಿಹಾರ್​ ಜೈಲು ಅಧಿಕಾರಿಗಳು ವಿಳಂಬ: ಮತ್ತೆ ಕೋರ್ಟ್​ ಮೆಟ್ಟಿಲೇರಿದ ನಿರ್ಭಯಾ ಅಪರಾಧಿಗಳ ಪರ ವಕೀಲ

Nirbhaya 17 Jan 20
Published on

ನವದೆಹಲಿ: ದಯಾ ಅರ್ಜಿ ಸಲ್ಲಿಸಲು ತಿಹಾರ್​ ಜೈಲು ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ ಎಂದು ನಿರ್ಭಯಾ ಪ್ರಕರಣ ಅಪರಾಧಿಗಳ ಪರ ವಕೀಲ ಮತ್ತೆ ಕೋರ್ಟ್​ ಮೆಟ್ಟಿಲು ಹತ್ತಿದ್ದಾರೆ.

ಅಪರಾಧಿಗಳ ಪರ ವಕೀಲ ಎ.ಪಿ. ಸಿಂಗ್​ ಅವರು ಸಲ್ಲಿಸಿರುವ ಅರ್ಜಿ ವಿಚಾರಣೆಯು ಪಟಿಯಾಲ ಹೌಸ್​ ನ್ಯಾಯಾಲಯದಲ್ಲಿ ಶನಿವಾರ (ಜ.25ರಂದು) ವಿಚಾರಣೆಗೆ ಬರಲಿದೆ.

ಅಪರಾಧಿಗಳಾದ ಪವನ್​ ಮತ್ತು ಅಕ್ಷಯ್​ ಪರವಾಗಿ ಕ್ಯುರೇಟಿವ್​ ಮತ್ತು ದಯಾ ಅರ್ಜಿ ಸಲ್ಲಿಸಲು ಬೇಕಾದ ದಾಖಲೆ ನೀಡಲು ತಿಹಾರ್​ ಜೈಲು ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ ಎಂದು ವಕೀಲ ಎ.ಪಿ. ಸಿಂಗ್​ ಆರೋಪಿಸಿದ್ದಾರೆ. ಈ ಮೊದಲು ಇನ್ನುಳಿದ ಇಬ್ಬರು ಅಫರಾಧಿಗಳಾದ ವಿನಯ್​ ಕುಮಾರ್​ ಶರ್ಮಾ ಮತ್ತು ಮುಕೇಶ್​ ಸಿಂಗ್​ ಅವರ ಕ್ಯುರೇಟಿವ್​ ಅರ್ಜಿಯನ್ನು ಸುಪ್ರೀಂಕೋರ್ಟ್​ ತಿರಸ್ಕರಿಸಿತ್ತು.

ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಗಳನ್ನು ಫೆಬ್ರವರಿ 1 ರಂದು ಗಲ್ಲಿಗೇರಿಸಲು ನಿರ್ಧರಿಸಲಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರವು ನಾಲ್ವರು ಅಪರಾಧಿಗಳಿಗೆ ಮರಣದಂಡನೆ ವಿಧಿಸಲು ಏಳು ದಿನಗಳ ಗಡುವು ನಿಗದಿಪಡಿಸಲು ಬುಧವಾರ ಸುಪ್ರೀಂಕೋರ್ಟ್​ನ್ನು ಕೇಳಿಕೊಂಡಿತ್ತು.

ಈ ಮಧ್ಯೆ ಗೃಹ ಸಚಿವಾಲಯ ಸುಪ್ರೀಂಗೆ ಅರ್ಜಿ ಸಲ್ಲಿಸಿ, ಅಪರಾಧಿಗಳ ಅರ್ಜಿ ಸಲ್ಲಿಸುವ ಪ್ರಕ್ರಿಯೆಯಿಂದಾಗಿ ಮರಣದಂಡನೆ ಮುಂದೂಡಲಾಗುತ್ತಿದೆ. ಅವರು ದಯಾ ಅರ್ಜಿ ಸಲ್ಲಿಸಬೇಕು ಎಂದಾದಲ್ಲಿ ಮರಣದಂಡನೆ ನಿಗದಿ ಪಡಿಸಿದ ಏಳು ದಿನಗಳಲ್ಲಿ ಸಲ್ಲಿಸಲು ಸೂಚಿಸಬೇಕು ಎಂದು ಕೇಳಿಕೊಂಡಿತ್ತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net