

ಗದಗ: ಜಿಲ್ಲೆಯ ದಾವಲಖಾನವರ ಕುಟುಂಬಕ್ಕೆ 9 ವರ್ಷದ ಕಂಟಕ ಕಾಡುತ್ತಿದೆ. ಇದು ಕಾಕತಾಳಿಯವೋ? ಆಕಸ್ಮಿಕವೋ? ಅಥವಾ ಮಾಯೆಯೋ? ತಿಳಿಯುತ್ತಿಲ್ಲ. ಆದರೆ, ದಾವಲಖಾನವರ ಕುಟುಂಬ ಮಾತ್ರ 9 ಅಂದರೆ ತುಂಬಾ ಹೆದರುತ್ತಿದೆ.
ಅಷ್ಟಕ್ಕೂ ದಾವಲಖಾನವರ ಕುಟುಂಬಕ್ಕೆ ಏನಾಯಿತು ಅಂತಾ ನೋಡುವುದಾದರೆ, ಅವರ ಕುಟುಂಬದಲ್ಲಿ ಮಕ್ಕಳಿಗೆ 9 ವರ್ಷ ಆದರೆ ಹೆತ್ತವರಲ್ಲಿ ಆತಂಕ ಶುರುವಾಗುತ್ತದೆಯಂತೆ. ಏಕೆಂದರೆ, ಒಂಬತ್ತು ವರ್ಷವಾದರೆ ಮಕ್ಕಳು ಇದ್ದಕ್ಕಿದ್ದಂತೆ ನಾಪತ್ತೆ ಆಗ್ತಾರಂತೆ. ಕಣ್ಣಲ್ಲಿ ಕಣ್ಣಿಟ್ಟು ಕಾದರೂ ಕೂಡ ಪ್ರಯೋಜನ ಆಗುವುದಿಲ್ಲವಂತೆ.
13 ವರ್ಷಗಳ ಹಿಂದೆ ಅಂದರೆ, 2010ರ ಅಕ್ಟೋಬರ್ 10ರಂದು ಒಂಬತ್ತು ವರ್ಷದ ಇಲಿಯಾಸ್ ದಾವಲಖಾನವರ ಹೆಸರಿನ ಬಾಲಕ ಸಂಜೆ 6 ಗಂಟೆಗೆ ನಾಪತ್ತೆಯಾಗಿದ್ದ. ಇದೀಗ ಅದೇ ಕುಟುಂಬದ ಒಂಬತ್ತು ವರ್ಷದ ಮತ್ತೋರ್ವ ಬಾಲಕ ಅಬ್ಜಲ್ ದಾವಲಖಾನವರ ಮೊನ್ನೆ (ಮೇ. 30) ಸಂಜೆ 6 ಗಂಟೆಗೆ ನಾಪತ್ತೆಯಾಗಿದ್ದಾನೆ.
13 ವರ್ಷದ ಹಿಂದೆ ನಾಪತ್ತೆಯಾಗಿರುವ ಬಾಲಕ ಈವರೆಗೂ ಪತ್ತೆಯಾಗಿಲ್ಲ. ಇದೀಗ ಮತ್ತೊಬ್ಬ ಬಾಲಕ ದಿಢೀರ್ ನಾಪತ್ತೆಯಾಗಿರುವುದು ಕುಟುಂಬಸ್ಥರನ್ನು ಕಂಗಾಲು ಮಾಡಿದೆ. ಮುದ್ದಿನ ಮಗನಿಗಾಗಿ ಹೆತ್ತತಾಯಿ ಮತ್ತು ಅಜ್ಜಿಯ ಆಕ್ರಂದನ ಮುಗಿಲು ಮುಟ್ಟಿದೆ.
ದಾವಲಖಾನವರ ಕುಟುಂಬ ಗದಗ ನಗರದ ಹೊಂಬಳ ನಾಕಾ ಬಳಿ ವಾಸವಿದೆ. ಇದೀಗ ಮಗನ ಫೋಟೋ ಹಿಡಿದು ಕುಟುಂಬಸ್ಥರು ಅಲೆದಾಡುತ್ತಿದ್ದಾರೆ. ಈ ಸಂಬಂಧ ಗದಗ ಶಹರ ಪೊಲೀಸ ಠಾಣೆಯಲ್ಲಿ ಅಪಹರಣ ದೂರು ದಾಖಲಾಗಿದ್ದು, ಪೊಲೀಸರಿಂದಲೂ ಪತ್ತೆಕಾರ್ಯ ನಡೆಯುತ್ತಿದೆ. ಸದ್ಯ ಈ ಪ್ರಕರಣ ನಿಗೂಢವಾಗಿಯೇ ಉಳಿದುಕೊಂಡಿದೆ. (ದಿಗ್ವಿಜಯ ನ್ಯೂಸ್)