ಚಂದ್ರನ ಸುತ್ತ ಒಂಬತ್ತು ಸಾವಿರ ಸುತ್ತು; ಇಸ್ರೋದಿಂದ ದತ್ತಾಂಶ ಬಿಡುಗಡೆ..

ISRO
Published on

ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಹತ್ವಾಕಾಂಕ್ಷಿ ಯೋಜನೆಯಾದ ಚಂದ್ರಯಾನ-2ಕ್ಕೆ ಈಗ ಎರಡು ವರ್ಷ. ಈ ಅವಧಿಯಲ್ಲಿ, ಕಕ್ಷೆಗಾಮಿಯು (ಆರ್ಬಿಟರ್) ಬರೋಬ್ಬರಿ 9 ಸಾವಿರ ಸುತ್ತು ಹಾಕಿದೆ. ಯೋಜನೆಗೆ ಎರಡು ವರ್ಷವಾದ ಹಿನ್ನೆಲೆಯಲ್ಲಿ ಆಯೋಜಿಸಿರುವ ಎರಡು ದಿನಗಳ ‘ಲೂನಾರ್ ಸೈನ್ಸ್ ವರ್ಕ್​ಶಾಪ್-2021’ ವರ್ಚುವಲ್ ಕಾರ್ಯಕ್ರಮ ಉದ್ಘಾಟಿಸಿ ಇಸ್ರೋ ಅಧ್ಯಕ್ಷ ಡಾ. ಕೆ. ಶಿವನ್ ಈ ಮಾಹಿತಿ ನೀಡಿದರು.

ಕಕ್ಷೆಗಾಮಿಯಿಂದ ಬೇರ್ಪಟ್ಟು ವಿಕ್ರಂ ಲ್ಯಾಂಡರ್ 2019ರ ಸೆ.6ರಂದು ಚಂದ್ರನ ಮೇಲೆ ಸ್ವಯಂಚಾಲಿತವಾಗಿ, ಸುರಕ್ಷಿತವಾಗಿ ಇಳಿಯಬೇಕಿತ್ತು. 30 ಕಿ.ಮೀ. ದೂರದಿಂದ ಚಂದ್ರನತ್ತ ಸಾಗಿದ ನೌಕೆ ಚಂದ್ರನ ಮೇಲ್ಮೈಯಿಂದ ಕೇವಲ 2.1 ಕಿ.ಮೀ. ಅಂತರದಲ್ಲಿರುವಾಗ ಸಂಪರ್ಕ ಕಡಿತಗೊಂಡಿತ್ತು. ಲ್ಯಾಂಡರ್ ಅಸುರಕ್ಷಿತವಾಗಿ ಲ್ಯಾಂಡ್ ಆಗಿದ್ದರಿಂದ, ಅದರೊಳಗಿನ ಪ್ರಜ್ಞಾನ್ ರೋವರ್ ಸೇರಿ ಎಲ್ಲ ಉಪಕರಣಗಳೂ ಸಂಪರ್ಕದಿಂದ ಕಡಿತಗೊಂಡಿದ್ದವು. ಆದರೆ ಚಂದ್ರನಿಂದ ಸುಮಾರು 100 ಕಿ.ಮೀ. ದೂರದ ಕಕ್ಷೆಯಲ್ಲಿರುವ ಕಕ್ಷೆಗಾಮಿಯು ಸುರಕ್ಷಿತವಾಗಿದ್ದು, ಹೈ ಡೆಫಿನಿಷನ್ ಕ್ಯಾಮರಾ ಸೇರಿ ಅದರಲ್ಲಿರುವ 8 ಉಪಕರಣಗಳೂ ಸಾಮಾನ್ಯ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. 2022ರ ಪ್ರಥಮ ತ್ರೖೆಮಾಸಿಕದಲ್ಲಿ ಬಹುಶಃ ಚಂದ್ರಯಾನ-3 ಯೋಜನೆ ಸಾಕಾರವಾಗಲಿದೆ. ಈ ಯೋಜನೆಯಲ್ಲಿ ಚಂದ್ರಯಾನ-2ರ ಎಲ್ಲ ಅಂಶಗಳೂ ಸಮಾನವಾಗಿರಲಿದ್ದು, ಕಕ್ಷೆಗಾಮಿಯನ್ನು ಹೊಂದಿರುವುದಿಲ್ಲ. ಚಂದ್ರಯಾನ-2 ಕಕ್ಷೆಗಾಮಿಯನ್ನೇ ಚಂದ್ರಯಾನ-3 ಬಳಸಿಕೊಳ್ಳಲಿದೆ. ಕಕ್ಷೆಗಾಮಿಯಿಂದ ದೊರೆತಿರುವ ದತ್ತಾಂಶಗಳು ಬಹಳಷ್ಟು ಭರವಸೆ ನೀಡಿವೆ. ಸಂಶೋಧಕರು ಹಾಗೂ ಸಂಸ್ಥೆಗಳ ಅನುಕೂಲಕ್ಕಾಗಿ ಬಹಳಷ್ಟು ದತ್ತಾಂಶಗಳನ್ನು ಬಿಡುಗಡೆ ಮಾಡಿದ್ದೇವೆ. ಈ ಅಂಶಗಳಿಂದಾಗಿ ಬಾಹ್ಯಾಕಾಶ ಸಂಶೋಧನೆಯಲ್ಲಿ ಮತ್ತಷ್ಟು ಮಹತ್ವವನ್ನು ಸಾಧಿಸಬಹುದು ಎಂಬ ಭರವಸೆಯನ್ನು ಶಿವನ್ ವ್ಯಕ್ತಪಡಿಸಿದರು.

ಮಹತ್ವದ ದತ್ತಾಂಶ ಬಿಡುಗಡೆ: ವರ್ಚುವಲ್ ಕಾರ್ಯಕ್ರಮದ ಮೂಲಕ ಶಿವನ್ ಅವರು ಚಂದ್ರಯಾನ-2ರ ಕಕ್ಷೆಗಾಮಿಯಿಂದ ದೊರೆತ ದತ್ತಾಂಶಗಳನ್ನು ಸಾರ್ವಜನಿಕ ಬಳಕೆಗೆ ಬಿಡುಗಡೆ ಮಾಡಿದರು.ಚಂದ್ರಯಾನ-2ರ ಉಪಕರಣಗಳ ದತ್ತಾಂಶ ಹಾಗೂ ವಿಜ್ಞಾನದ ಕೈಪಿಡಿ’, ‘ಚಂದ್ರಯಾನ-2 ಯೋಜನೆಯ ವಿಜ್ಞಾನ ಫಲಿತಾಂಶಗಳು’ ಹಾಗೂ ‘ಚಂದ್ರಯಾನ-2 ಕಕ್ಷೆಗಾಮಿಯ ಉಪಕರಣಗಳು ಹಾಗೂ ದತ್ತಾಂಶ ಉತ್ಪನ್ನಗಳು’ ಎಂಬ ಮೂರು ದತ್ತಾಂಶಗಳನ್ನು ಪ್ರತ್ಯೇಕವಾಗಿ ಬಿಡುಗಡೆ ಮಾಡಲಾಗಿದೆ. ಪ್ರತಿಯೊಂದರಲ್ಲು ನಿರ್ದಿಷ್ಟ ಕ್ಷೇತ್ರದಲ್ಲಿ ಉಪಕರಣಗಳು ಕೈಗೊಂಡ ಸಂಶೋಧನೆಗಳು, ಅವುಗಳಿಂದ ಲಭಿಸಿದ ದತ್ತಾಂಶಗಳ ಮಾಹಿತಿ ನೀಡಲಾಗಿದೆ.

ದತ್ತಾಂಶಗಳ ಕುರಿತು ವಿಶ್ಲೇಷಿಸುವ ಸಲುವಾಗಿ ಎರಡು ದಿನದ ವರ್ಚುವಲ್ ಉಪನ್ಯಾಸ ಕಾರ್ಯಕ್ರಮವನ್ನು ಇಸ್ರೋ ಆಯೋಜಿಸಿದೆ. ಚಂದ್ರಯಾನ-2ರ ಯೋಜನಾ ನಿರ್ದೇಶಕಿ ರಿತು ಕರಿದಾಲ್, ಐಐಆರ್​ಎಸ್ ನಿರ್ದೇಶಕ ಪ್ರಕಾಶ್ ಚೌಹಾನ್, ಬೆಂಗಳೂರು ಐಐಎಸ್​ಸಿಯ ರಮಾನಂದ ಚಕ್ರವರ್ತಿ ಸೇರಿ ಅನೇಕ ವಿಜ್ಞಾನಿಗಳು, ತಜ್ಞರು ವಿಚಾರ ಮಂಡನೆ ಮಾಡಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net