ಗುಜರಿಗೆ 9 ಲಕ್ಷ ಸರ್ಕಾರಿ ಗಾಡಿ: ಏ.1ರಿಂದ ರಸ್ತೆಗಿಳಿಯುವಂತಿಲ್ಲ; ನೋಂದಣಿ ನವೀಕರಣವೂ ರದ್ದು

Scrap policy
Published on

| ಕೀರ್ತಿನಾರಾಯಣ ಸಿ. ಬೆಂಗಳೂರು

ವಿಷಕಾರಿ ಹೊಗೆ ಸೂಸಿ ವಾಯುಮಾಲಿನ್ಯ ಉಂಟು ಮಾಡುವ, ಎಲ್ಲೆಂದರಲ್ಲಿ ರಸ್ತೆ ಮಧ್ಯೆ ನಿಂತು ಕಿರಿಕಿರಿ ಉಂಟು ಮಾಡುವ ಸರ್ಕಾರಿ ಬಸ್ಸುಗಳು, ಜೀಪುಗಳು ಸೇರಿದಂತೆ 15 ವರ್ಷ ಪೂರೈಸಿರುವ ಎಲ್ಲ ರೀತಿಯ ಹಳೇ ವಾಹನಗಳಿಗೆ ಏ.1ರಿಂದ ಮುಕ್ತಿ ದೊರೆಯಲಿದೆ. 15 ವರ್ಷ ಹಳೆಯದಾಗಿದ್ದರೂ ರಿಜಿಸ್ಟ್ರೇಷನ್ ನವೀಕರಣಗೊಂಡಿರುವ ವಾಹನಗಳ ನೋಂದಣಿಯೂ ಮುಲಾಜಿಲ್ಲದೆ ರದ್ದಾಗಲಿದೆ. ಇದೇ ವೇಳೆ ಕರ್ನಾಟಕದಲ್ಲಿ ಖಾಸಗಿ ಹಾಗೂ ವಾಣಿಜ್ಯ ಬಳಕೆಯ 15 ವರ್ಷ ಪೂರೈಸಿರುವ ವಾಹನಗಳನ್ನು ಕಡ್ಡಾಯವಾಗಿ ಗುಜರಿಗೆ ಹಾಕುವ ನಿಯಮ ಜಾರಿಗೊಳಿಸುವ ಬದಲು ಮಾಲೀಕರ ಆಯ್ಕೆಗೆ ಬಿಡಲು ಸಾರಿಗೆ ಇಲಾಖೆ ನಿರ್ಧರಿಸಿದೆ. ಸ್ಕ್ರಾ್ಯಂಗ್ ಕೇಂದ್ರಗಳನ್ನು ಸ್ಥಾಪಿಸಲು ಬುಧವಾರದಿಂದ (ಫೆ.1) ಅರ್ಜಿ ಆಹ್ವಾನಿಸಲಿದೆ.

ಕೇಂದ್ರ ಮೋಟಾರು ವಾಹನಗಳ (ಮೊದಲ ತಿದ್ದುಪಡಿ) ನಿಯಮ 2023 ಜಾರಿಗೆ ತರಲಾಗಿದೆ. ಗುಜರಿ ನೀತಿಯ ಭಾಗವಾಗಿ ತಿದ್ದುಪಡಿಗೊಳಿಸಿರುವ ಈ ನಿಯಮವನ್ನು ಇದೇ ಏ.1ರಿಂದ ದೇಶಾದ್ಯಂತ ಅನುಷ್ಠಾನಕ್ಕೆ ತರುವಂತೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಆದೇಶ ಹೊರಡಿಸಿದೆ. ನೋಂದಣಿಯಾಗಿ 15 ವರ್ಷ ಮುಗಿದಿರುವ ಸರ್ಕಾರಿ ವಾಹನಗಳ ನೋಂದಣಿ ನವೀಕರಣಕ್ಕೆ 2022ರ ನ.24ರಿಂದಲೇ ಕೇಂದ್ರ ಸರ್ಕಾರ ನಿರ್ಬಂಧ ವಿಧಿಸಿದೆ.

ಕೇಂದ್ರ, ರಾಜ್ಯ ಸರ್ಕಾರಗಳ ಅಧೀನದಲ್ಲಿರುವ 9 ಲಕ್ಷಕ್ಕೂ ಅಧಿಕ ವಾಹನಗಳು ಏ.1ರಿಂದ ರಸ್ತೆಗಿಳಿಯುವಂತಿಲ್ಲ. ಕರ್ನಾಟಕದಲ್ಲಿ ಅಂದಾಜು 40 ರಿಂದ 50 ಸಾವಿರ ಸರ್ಕಾರಿ ವಾಹನಗಳಿವೆ. ಗುಜರಿಗೆ ಹಾಕಲಾಗುವ ಹಳೇ ವಾಹನಗಳ ಬದಲಿಗೆ ವಾಯುಮಾಲಿನ್ಯ ಉಂಟು ಮಾಡದ ಪರ್ಯಾಯ ಇಂಧನ (ಸಿಎನ್​ಜಿ, ಬಯೋ ಎಲ್​ಎನ್​ಜಿ) ಹಾಗೂ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲು ಅವಕಾಶ ಕಲ್ಪಿಸಲಾಗಿದೆ.

ಕೇಂದ್ರ ಮೋಟಾರು ವಾಹನಗಳ ನಿಯಮ 1989ಕ್ಕೆ ತಿದ್ದುಪಡಿ ತಂದು ಹೊಸ ನಿಯಮಾವಳಿ 52ಎ ನಿಯಮ (ಸರ್ಕಾರಿ ವಾಹನಗಳ ನೋಂದಣಿ ಪ್ರಮಾಣಪತ್ರ ನವೀಕರಣ) ಸೇರ್ಪಡೆ ಮಾಡಲಾಗಿದೆ. ಏ.1ರಿಂದಲೇ ತಿದ್ದುಪಡಿ ನಿಯಮ ಪಾಲನೆ ಕಡ್ಡಾಯವಾಗಲಿದೆ. ಆರಂಭಿಕ ನೋಂದಣಿಯಾಗಿ 15 ವರ್ಷ ಪೂರ್ಣಗೊಳ್ಳುವ ಮುನ್ನವೇ ಕೆಲ ಇಲಾಖೆಗಳ ವಾಹನಗಳ ನೋಂದಣಿ ನವೀಕರಣ ಮಾಡಲಾಗಿದೆ. ಅಂತಹ ನೋಂದಣಿ ನವೀಕರಣ ಪ್ರಮಾಣಪತ್ರಗಳು ಕೂಡ 15 ವರ್ಷ ಪೂರ್ಣಗೊಂಡಿರುವ ಕಾರಣಕ್ಕೆ ಸ್ವಯಂಚಾಲಿತವಾಗಿ ರದ್ದಾಗಲಿದೆ ಎಂದು ನಿಯಮದಲ್ಲಿ ಉಲ್ಲೇಖಿಸಲಾಗಿದೆ. ಎಲ್ಲ ರಾಜ್ಯಗಳ ಸಾರಿಗೆ ಸಂಸ್ಥೆಗಳಲ್ಲಿ ಹಳೇ ಬಸ್​ಗಳು ಹೆಚ್ಚಾಗಿವೆ. ಉಳಿದಂತೆ ಪೊಲೀಸ್ ಇಲಾಖೆ, ಆರ್​ಟಿಒ ಕಚೇರಿಗಳು, ಅರಣ್ಯ ಇಲಾಖೆ, ಅಬಕಾರಿ ಇಲಾಖೆ, ಶಿಕ್ಷಣ ಇಲಾಖೆಗಳಲ್ಲಿ ಹಳೇ ವಾಹನಗಳು ಜಾಸ್ತಿ ಎಂದು ಅಧಿಕಾರಿಗಳು ಮಾಹಿತಿ ನೀಡುತ್ತಾರೆ.

ಗುಜರಿ ಬಸ್​ಗಳ ಆತಂಕ ದೂರ: ರಾಜ್ಯದಲ್ಲಿ ಕೆಎಸ್​ಆರ್​ಟಿಸಿ, ವಾಯವ್ಯ, ಈಶಾನ್ಯ ಸಾರಿಗೆ ಸಂಸ್ಥೆ ಹಾಗೂ ಬಿಎಂಟಿಸಿಯ ಹಳೇ ಬಸ್​ಗಳದ್ದೇ ದೊಡ್ಡ ಆತಂಕ. 10-15 ಲಕ್ಷ ಕಿ.ಮೀ ಓಡಿಸಿರುವ ಬಸ್​ಗಳು ಎಲ್ಲೆಂದರಲ್ಲಿ ಕೆಟ್ಟು ನಿಲ್ಲುತ್ತವೆ. ಸಂಚರಿಸುತ್ತಿದ್ದಾಗಲೇ ಬ್ರೇಕ್ ಫೇಲಾಗಿ ಅಪಘಾತ ಸಂಭವಿಸಿ ಹಲವರ ಜೀವ ತೆಗೆದಿರುವ ಉದಾಹರಣೆಗಳಿವೆ. ಕೆಎಸ್​ಆರ್​ಟಿಸಿ ವ್ಯಾಪ್ತಿಯಲ್ಲೇ 3 ಸಾವಿರಕ್ಕೂ ಅಧಿಕ ಗುಜರಿ ಬಸ್​ಗಳಿವೆ. ಬಿಎಂಟಿಸಿಯಲ್ಲೂ ಸಾವಿರಾರು ಹಳೇ ಬಸ್​ಗಳಿವೆ. ಹೊಸ ಬಸ್​ಗಳ ಖರೀದಿ ಹಿನ್ನೆಲೆಯಲ್ಲಿ ಹಳೇ ಬಸ್​ಗಳನ್ನು ಗ್ರಾಮೀಣ ಭಾಗದಲ್ಲಿ ಓಡಿಸಲು ಚಿಂತನೆ ನಡೆದಿದೆ. ಆದರೆ, 15 ವರ್ಷ ಪೂರೈಸಿರುವ ಬಸ್​ಗಳನ್ನು ಗುಜರಿಗೆ ಹಾಕುವುದರಿಂದ ಪ್ರಯಾಣಿಕರಿಗೂ ಅನುಕೂಲವಾಗಲಿದೆ.

ಯಾವ ವಾಹನಗಳಿಗೆ ವಿನಾಯ್ತಿ?

  • ವಿಶೇಷ ಉದ್ದೇಶಕ್ಕಾಗಿ ರೂಪಿಸಲಾದ ವಾಹನಗಳಿಗೆ ಗುಜರಿ ನೀತಿ ಅನ್ವಯಿಸಲ್ಲ
  • ರಕ್ಷಣಾ ಇಲಾಖೆ ಕಾರ್ಯಾಚರಣೆಯ ಶಸ್ತ್ರಸಜ್ಜಿತ ವಾಹನ, ಇತರ ವಿಶೇಷ ವಾಹನ
  • ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ರೂಪಿಸಿದ ವಾಹನಗಳು
  • ದೇಶ/ರಾಜ್ಯದ ಆಂತರಿಕ ಭದ್ರತಾ ಕಾರ್ಯಕ್ಕೆ ತಯಾರಿಸಲಾಗಿರುವ ವಾಹನಗಳು

ಹಳೇ ವಾಹನಗಳ ನಾಶ ಹೇಗೆ?: 15 ವರ್ಷ ಮೇಲ್ಪಟ್ಟ ವಾಹನಗಳನ್ನು ಗುಜರಿಗೆ ನೀಡುವುದು. ವ್ಯಕ್ತಿ, ಸಂಸ್ಥೆ, ಸೊಸೈಟಿಗಳಿಗೆ ಆಯಾ ರಾಜ್ಯಗಳು ಗುಜರಿ ಕೇಂದ್ರ ಸ್ಥಾಪಿಸಲು ಅನುಮತಿ ನೀಡಲಾಗುತ್ತದೆ. ಆ ಕೇಂದ್ರಗಳಲ್ಲಿ ಕಾನೂನುಬದ್ಧವಾಗಿ ವಾಹನಗಳನ್ನು ನಾಶಪಡಿಸಬೇಕು ಎಂದು ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚನೆ ಕೊಟ್ಟಿದೆ.

ಕರ್ನಾಟಕ ಗುಜರಿ ನೀತಿ-2022 ಯೋಜನೆ ಕರಡನ್ನು 2 ಅಥವಾ 3 ದಿನದಲ್ಲಿ ಇಲಾಖೆ ವೆಬ್​ಸೈಟ್​ನಲ್ಲಿ ಪ್ರಕಟಿಸಲಾಗುತ್ತದೆ. ಹಳೇ ವಾಹನ ಕೊಟ್ಟು ಯಾವ ರೀತಿ ಸ್ಕ್ರ್ಯಾಪ್​ ಮಾಡಬೇಕು ಎಂಬ ವಿವರ ಇರಲಿದೆ. ವಾರ್ಷಿಕ 10 ಕೋಟಿ ವಹಿವಾಟು ಹೊಂದಿರುವ ಕಂಪನಿಗಳಿಂದ ಸ್ಕ್ರ್ಯಾಪಿಂಗ್​ ಕೇಂದ್ರಗಳನ್ನು ಸ್ಥಾಪಿಸಲು ಅರ್ಜಿ ಆಹ್ವಾನಿಸಲಾಗುತ್ತದೆ. ಖಾಸಗಿ ವಾಹನಗಳನ್ನು ಗುಜರಿಗೆ ಹಾಕುವುದನ್ನು ಸದ್ಯ ಕಡ್ಡಾಯಗೊಳಿಸಲ್ಲ. ಮಾಲೀಕನ ಆಯ್ಕೆಗೆ ಬಿಡಲಾಗುತ್ತಿದೆ. ಆತ ಇಚ್ಛಿಸಿದರಷ್ಟೇ ಗುಜರಿಗೆ ಹಾಕಬಹುದು. ಆದರೆ, 15 ವರ್ಷ ಪೂರೈಸುವ ಎಲ್ಲ ಸರ್ಕಾರಿ ವಾಹನಗಳನ್ನು ಮಾತ್ರ ಏ.1ರಿಂದ ಸ್ಕ್ರಾ್ಯ್ ಮಾಡಲಾಗುತ್ತದೆ. | ಸಿ.ಮಲ್ಲಿಕಾರ್ಜುನ ಸಾರಿಗೆ ಇಲಾಖೆ ಹೆಚ್ಚುವರಿ ಆಯುಕ್ತ

ವಾಹನ ನೋಂದಣಿ ರದ್ದು ಏಕೆ?

  • ರಿಪೇರಿ ಹೆಸರಲ್ಲೇ ವಾರ್ಷಿಕ ಲಕ್ಷಾಂತರ ರೂ. ವ್ಯಯಿಸಲಾಗುತ್ತೆ
  • ಮಿತಿಮೀರುತ್ತಿರುವ ವಾಯುಮಾಲಿನ್ಯ ಪ್ರಮಾಣ ನಿಯಂತ್ರಣ
  • ರಸ್ತೆ, ಪ್ರಯಾಣಿಕರು ಹಾಗೂ ವಾಹನ ಸುರಕ್ಷತೆಗೆ ಹೆಚ್ಚು ಆದ್ಯತೆ
  • ಆಟೋಮೊಬೈಲ್ ಕ್ಷೇತ್ರ ಉತ್ತೇಜನದ ಜತೆ ಉದ್ಯೋಗ ಸೃಷ್ಟಿ
  • ಪರ್ಯಾಯ ಇಂಧನ, ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಆದ್ಯತೆ

ಯಾವ್ಯಾವ ವಾಹನ ಗುಜರಿಗೆ?

  • ಕೇಂದ್ರ, ರಾಜ್ಯ ಸರ್ಕಾರ, ಕೇಂದ್ರಾಡಳಿತ ಪ್ರದೇಶ ಒಡೆತನದ್ದು
  • ಮುನ್ಸಿಪಲ್ ಕಾಪೋರೇಷನ್/ಪುರಸಭೆ, ಪಂಚಾಯ್ತಿಗೆ ಸೇರಿದ್ದು
  • ರಸ್ತೆ ಸಾರಿಗೆ ನಿಗಮ 1950ರಡಿ ಸ್ಥಾಪಿತ ರಾಜ್ಯ ಸಾರಿಗೆ ಸಂಸ್ಥೆಯವು
  • ಕೇಂದ್ರ, ರಾಜ್ಯ ಸರ್ಕಾರ ಒಡೆತನದ ಅಥವಾ ಸ್ವಾಯತ್ತ ಸಂಸ್ಥೆಗಳದ್ದು
  • ಕೇಂದ್ರ, ರಾಜ್ಯ ಸರ್ಕಾರಗಳ ಅಧೀನದ ಸಾರ್ವಜನಿಕ ವಲಯದವು

ಖಾಸಗಿ ವಾಹನ ಗುಜರಿಗೆ ಹಾಕೋದು ಕಡ್ಡಾಯವಲ್ಲ

ಖಾಸಗಿ ವಾಹನಗಳನ್ನು ಗುಜರಿಗೆ ಹಾಕುವ ನಿರ್ಧಾರವನ್ನು ಆಯಾ ರಾಜ್ಯಗಳಿಗೆ ಕೊಡಲಾಗಿದೆ. 15 ವರ್ಷ ತುಂಬಿರುವ ವಾಹನಗಳನ್ನು ಗುಜರಿಗೆ ಹಾಕುವ ಬಗ್ಗೆ ರಾಜ್ಯ ಸರ್ಕಾರ 2022 ಡಿ.30ರಂದೇ ಅಧಿಸೂಚನೆ ಹೊರಡಿಸಿದೆ. ಮೊದಲ ಹಂತವಾಗಿ ಖಾಸಗಿ ವಾಹನವನ್ನು ಗುಜರಿಗೆ ಹಾಕುವ ಆಯ್ಕೆ ಮಾಲೀಕರಿಗೆ ಬಿಡಲಾಗಿದೆ. ಮಾಲೀಕ ಇಚ್ಛಿಸಿದರೆ ಮಾತ್ರ ತನ್ನ ವಾಹವನ್ನು ಗುಜರಿಗೆ ಹಾಕಬಹುದು. ಆದರೆ, ಮುಂದಿನ ದಿನಗಳಲ್ಲಿ ಕಡ್ಡಾಯಗೊಳಿಸಲು ಇಲಾಖೆ ತೀರ್ವನಿಸಿದೆ. ಗುಜರಿಗೆ ಹಾಕಲಾಗುವ ವಾಹನದಲ್ಲಿರುವ ಸ್ಟೀಲ್​ಗೆ ಕೆ.ಜಿ ಲೆಕ್ಕದಲ್ಲಿ ಹಣ ಪಾವತಿಸಲಾಗುತ್ತದೆ. ಜತೆಗೆ ವಾಹನ ಮಾಲೀಕರಿಗೆ ಠೇವಣಿ ಪ್ರಮಾಣಪತ್ರ (ಸಿಒಡಿ) ವಿತರಿಸಲಾಗುತ್ತದೆ. ಹೊಸ ವಾಹನ ಖರೀದಿಸುವಾಗ ಈ ಪ್ರಮಾಣಪತ್ರ ಆಧರಿಸಿ ಸಾರಿಗೇತರ ವಾಹನಕ್ಕೆ ಶೇ.25 ಹಾಗೂ ಸಾರಿಗೆ ವಾಹನಕ್ಕೆ ಶೇ.15 ತೆರಿಗೆ ವಿನಾಯಿತಿ ಇರಲಿದೆ. ಈ ವಿನಾಯಿತಿ ಸಾರಿಗೇತರ ವಾಹನಕ್ಕೆ 15 ವರ್ಷದವರೆಗೆ ಹಾಗೂ ಸಾರಿಗೆ ವಾಹನಕ್ಕೆ 8 ವರ್ಷದವರೆಗೆ ಲಭ್ಯವಿರುತ್ತದೆ. ಈ ಅವಧಿಯಲ್ಲಿ ಯಾವಾಗ ಬೇಕಾದರೆ ತೆರಿಗೆ ವಿನಾಯಿತಿ ಪಡೆಯಬಹುದು. ದೇಶದಲ್ಲಿ ಸೂಕ್ತ ನೋಂದಣಿಪತ್ರ ಮತ್ತು ಫಿಟ್​ನೆಸ್ ಸರ್ಟಿಫಿಕೇಟ್ ಇಲ್ಲದೆ ಗುಜರಿಗೆ ಹೋಗಲು ಅರ್ಹವಾಗಿರುವ 1.2 ಕೋಟಿ ವಾಹನಗಳಿವೆ. ಈ ಪೈಕಿ ಕರ್ನಾಟಕದಲ್ಲಿ ಅಂದಾಜು 14.3 ಲಕ್ಷ ವಾಹನಗಳಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net