VIDEO| ತರಕಾರಿ ಖರೀದಿಸಲು ಸೈಕಲ್ ಏರಿ ಹೊರಟ ಸತೀಶ್ ನೀನಾಸಂ ಜನತೆಗೆ ನೀಡಿದ ಸಂದೇಶವೇನು ಗೊತ್ತಾ?

Satish ninasam
Published on

ಬೆಂಗಳೂರು: ಸೆಲೆಬ್ರಿಟಿಗಳು ಯಾರಿಗೂ ಗೊತ್ತಾಗದಂತೆ ಬೈಕ್, ಸೈಕಲ್ ಹತ್ತಿ ಜನರ ಮಧ್ಯೆಯೇ ಸವಾರಿ ಮಾಡುವುದು ಹೊಸದೇನಲ್ಲ. ಸುದೀಪ್ ಸೈಕಲ್ ಏರಿ `ಕೋಟಿಗೊಬ್ಬ 3' ಚಿತ್ರೀಕರಣಕ್ಕೆಂದು ಕಂಠೀರವ ಸ್ಟುಡಿಯೋಗೆ ಹೋಗಿದ್ದರು. ಇನ್ನು ಗಣೇಶ್ ತಮ್ಮ ಸ್ನೇಹಿತರೊಂದಿಗೆ ಕೆಲವು ವಾರಗಳ ಹಿಂದೆ ಸೈಕ್ಲಿಂಗ್ ಹೋಗಿದ್ದರು. ಬುಧವಾರ ಸತೀಶ್ ನೀನಾಸಂ ಸಹ ರಾಜರಾಜೇಶ್ವರಿ ನಗರದಲ್ಲಿ ಸೈಕಲ್ ಸವಾರಿ ಮಾಡಿದ್ದಾರೆ. ಯಾಕೆ ಗೊತ್ತಾ? ತರಕಾರಿ ಖರೀದಿಸುವುದಕ್ಕೆ.

ಹೌದು, ಸತೀಶ್ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಯಾರಿಗೂ ಗೊತ್ತಾಗದಂತೆ ರಾಜರಾಜೇಶ್ವರಿ ನಗರದಲ್ಲಿ ಇವತ್ತು ಸೈಕಲ್ ಸವಾರಿ ಮಾಡಿದ್ದಾರೆ. ಅಲ್ಲಿನ ಪರಿಸ್ಥಿತಿಯನ್ನು ವೀಡಿಯೋ ಮಾಡಿದ್ದಾರೆ. ಅಷ್ಟೇ ಅಲ್ಲ, ಆ ವೀಡಿಯೋ ಮೂಲಕ ಕನ್ನಡ ನಾಡಿನ ಜನತೆಗೆ ಯುಗಾದಿ ಹಬ್ಬದ ಶುಭಾಶಯಗಳನ್ನು ಹೇಳುವುದರ ಜತೆಗೆ ಜನರಿಗೆ ಮೆಸೇಜ್ ನೀಡಿದ್ದಾರೆ.

ಇಷ್ಟಕ್ಕೂ ಸತೀಶ್ ಏನು ಹೇಳಿದ್ದಾರೆ ಗೊತ್ತಾ? `ಜನರಿಗೆ ಥ್ಯಾಂಕ್ಸ್ ಹೇಳಬೇಕು. ಬೇರೆ ಕಡೆ ಜನ ಪೊಲೀಸ್‍ನವರ ಜತೆಗೆ ಜಗಳ ಮಾಡುತ್ತಿದ್ದಾರೆ. ಆದರೆ, ರಾಜರಾಜೇಶ್ವರಿ ನಗರ ಬಹಳ ಶಾಂತವಾಗಿದೆ. ತರಕಾರಿ ತರೋಣ ಅಂತ ಬಂದೆ. ನೀವು ಸಹ ಅಗತ್ಯ ವಸ್ತುಗಳನ್ನು ಖರೀದಿಸುವುದಕ್ಕೆ ಒಬ್ಬೊಬ್ಬರೇ ಬನ್ನಿ. ಎಷ್ಟು ಬೇಕೋ ಅಷ್ಟನ್ನು ಮಾತ್ರ ಖರೀದಿಸಿ. ಸುಮ್ಮನೆ ಪ್ಯಾನಿಕ್ ಆಗಬೇಡಿ. ಅಗತ್ಯಕ್ಕಿಂತ ಹೆಚ್ಚಾಗಿ ಖರೀದಿಸಬೇಡಿ. ಈ ಸಮಯದಲ್ಲಿ ನಿಮ್ಮ ಸಹಕಾರ ಬಹಳ ಮುಖ್ಯ. ಅದರರಲ್ಲೂ ಪೊಲೀಸರು, ವೈದ್ಯರಿಗೆ ಸಹಕಾರ ಕೊಡಿ. ಎಲ್ಲೆಲ್ಲಿ ಇದ್ದೀರೋ, ಸಾಧ್ಯವಾದಷ್ಟೂ ಅಲ್ಲಲ್ಲೇ ಇರಿ. ಎಲ್ಲಿಯವರೆಗೂ ಕರ್ಫ್ಯೂ ಇದೆಯೋ, ಅಲ್ಲಿಯವರೆಗೂ ಮನೆಯಲ್ಲೇ ಇರುತ್ತೇನೆ. ಈಗ ಸುರಕ್ಷಿತವಾಗಿದ್ದರೆ, ಮುಂದೆ ಅದ್ಭುತವಾದ ಜೀವನವನ್ನು ನಡೆಸಬಹುದು. ಎಲ್ಲರಿಗೂ ಒಳ್ಳೆಯದಾಗಲೀ. ಈ ವರ್ಷ ಯುಗಾದಿ ಆಚರಿಸುವುದಕ್ಕೆ ಸಾಧ್ಯವಾಗದಿರಬಹುದು. ಮುಂದಿನ ವರ್ಷ ಚೆನ್ನಾಗಿ ಮಾಡೋಣ' ಎಂದು ಸತೀಶ್ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net