

ಬೆಂಗಳೂರು:
ಚನ್ನಪಟ್ಟಣದ ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಎಂದು ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ೋಷಿಸಿದರು.
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದ ಜೆಡಿಎಸ್ ಮುಖಂಡರು ಬಿ.ಎಸ್.ಯಡಿಯೂರಪ್ಪ ಅವರ ಜೊತೆಯಲ್ಲಿ ಸೌಹಾರ್ದಯುತವಾಗಿ ಚರ್ಚೆ ಮಾಡಿದ ಬಳಿಕ ಅಭ್ಯರ್ಥಿಯನ್ನು ಅಧಿಕೃತವಾಗಿ ಪ್ರಕಟ ಮಾಡಲಾಯಿತು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಿಎಸ್‌ವೈ, ಪ್ರಧಾನಿ ನರೇಂದ್ರ ಮೋದಿಯವರ ಆಶೀರ್ವಾದ ಇದೆ. ಮೋದಿ ಅವರ ಪಕ್ಷದಿಂದ ಬೆಂಬಲ ಇರುವ ಕಾರಣ ಗೆಲುವು ಖಚಿತ ಎಂದು ಹೇಳಿದರು.
ಸಚಿವ ಎಚ್.ಡಿ.ಕುಮಾರಸ್ವಾಮಿ, ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಮತ್ತು ಎಲ್ಲ ಮುಖಂಡರು ಒಟ್ಟಾಗಿ ಸೇರಿದ್ದೇವೆ. ಇದು ಚುನಾವಣೆಗೆ ಸ್ಪರ್ಧಿಸುವ ಪ್ರಶ್ನೆಯಲ್ಲ. ಚುನಾವಣೆಯಲ್ಲಿ ಗೆದ್ದು ಬಂದ ಬಳಿಕ ನಿಮ್ಮನ್ನು ಭೇಟಿ ಮಾಡುತ್ತೇವೆ ಎಂದು ವಿಶ್ವಾಸದಿಂದ ನುಡಿದರು.
ನಿಖಿಲ್ ಕುಮಾರಸ್ವಾಮಿ ಅವರು ನೂರಕ್ಕೆ ನೂರು ಗೆಲ್ಲುವ ವಿಶ್ವಾಸವಿದೆ. ಆ ನಿಟ್ಟಿನಲ್ಲಿ ಎನ್‌ಡಿಎ ಪಕ್ಷಗಳಾದ ಬಿಜೆಪಿ- ಜೆಡಿಎಸ್ ಪಕ್ಷಗಳ ಎಲ್ಲ ಪ್ರಮುಖರು ಒಟ್ಟಾಗಿ ಅಲ್ಲಿ ಪ್ರವಾಸ ಮಾಡುತ್ತೇವೆ ಎಂದರು.
ಪಕ್ಷಾಂತರ ಮಾಡಿದವರ ಬಗ್ಗೆ ಮಾತನಾಡುವ ಅಗತ್ಯ ಇಲ್ಲ. ನಾನು ಬೇರೆಯವರ ಬಗ್ಗೆ ಒಂದು ಶಬ್ದ ಮಾತನಾಡಲು ಇಷ್ಟ ಪಡುವುದಿಲ್ಲ ಎಂದು ತಿಳಿಸಿದರು.
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ವಿರೋಧ ಪಕ್ಷದ ನಾಯಕ ಆರ್.ಅಶೋಕ್, ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ್, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಮತ್ತು ಎರಡೂ ಪಕ್ಷದ ಪ್ರಮುಖರು ಇದ್ದರು.