ಉಪಚುನಾವಣೆ ಸೋಲಿನ ಬೆನ್ನಲ್ಲೆ ಕಾರ್ಯಕರ್ತರಿಗೆ ಪತ್ರ ಬರೆದ ನಿಖಿಲ್​.. ಪತ್ರದಲ್ಲೇನಿದೆ? | JDS

JDS
Published on

ಬೆಂಗಳೂರು: ಚನ್ನಪಟ್ಟಣ ಉಪಚುನಾವಣೆ ಸೋಲಿನ ಬೆನ್ನಲ್ಲೆ JDS ಕಾರ್ಯಕರ್ತರಿಗೆ ಪರಾಜಿತ ಆಭ್ಯರ್ಥಿ ನಿಖಿಲ್​ ಕುಮಾರಸ್ವಾಮಿ ಪತ್ರ ಬರೆದು ತಮ್ಮ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ನಿಖಿಲ್​ ಬರೆದ ಪತ್ರದಲ್ಲೇನಿದೆ?

ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ NDA ಅಭ್ಯರ್ಥಿಯಾಗಿದ್ದ ನನ್ನ ಸೋಲು ಅನಿರೀಕ್ಷಿತ. ಸೋಲು ಯಾಕಾಯಿತೆಂದು ಈಗಾಗಲೇ ಕಾರಣ ಕೊಟ್ಟಿದ್ದೇನೆ. ಹಾಗೆಂದು, ಸೋಲಿಗೆ ಹೆದರಿ ಸುಮ್ಮನೆ ಕೂರುವ ಜಾಯಮಾನ ನನ್ನದಲ್ಲ, ನಮ್ಮ ಪಕ್ಷದ್ದೂ ಅಲ್ಲ. ಇಂಥ ಅನೇಕ ಸೋಲುಗಳನ್ನು ಪಕ್ಷ ಜೀರ್ಣಿಸಿಕೊಂಡಿದೆ. ಸತತ ಹೋರಾಟಗಳ ಮೂಲಕ ಪಕ್ಷವು ಫೀನಿಕ್ಸ್‌ನಂತೆ ಎದ್ದು ಬಂದಿದೆ. ಪಕ್ಷದ ಇಂತಹ ಅನೇಕ ಏಳುಬೀಳಿನ ದಾರಿಯಲ್ಲಿ ನಾನೊಬ್ಬ ಸಣ್ಣ ಪಯಣಿಗ. ಅಷ್ಟಾಗಿಯೂ ಅನೇಕ ನಾಯಕರನ್ನು ಪಕ್ಷವು ರಾಜ್ಯಕ್ಕೆ ಧಾರೆಯೆರೆದು ಕೊಟ್ಟಿದೆ, ಅದು ಮಣ್ಣಿನಮಗ ಪೂಜ್ಯ ದೇವೇಗೌಡರ ಗರಡಿಯ ಫಲ ಎಂದಿದ್ದಾರೆ.

ಈ ಸೋಲು ನನಗೆ ನೋವುಂಟು ಮಾಡಿದೆ, ನಿಜ. ಇಲ್ಲ ಎಂದು ಹೇಳಿ ಆತ್ಮವಂಚನೆ ಮಾಡಿಕೊಳ್ಳುವುದಿಲ್ಲ. ಹಾಗಂತ, ಸೋಲುತ್ತೇನೆ ಎಂದು ನಾನು ಚುನಾವಣೆಗೆ ಸ್ಪರ್ಧಿಸಿರಲಿಲ್ಲ. ಗೆಲ್ಲಲು ಪ್ರಾಮಾಣಿಕವಾಗಿ ಹೋರಾಡಿದ್ದೇವೆ. ಕೆಲ ಅಂಶಗಳಿಂದ ಹಿನ್ನಡೆಯಾಗಿದೆಯಾದರೂ, ಮತ್ತೆ ಪುಟಿದೆದ್ದು ಬರುವ ಛಲ ನನಗಿದೆ. ನೋವು ಭರಿಸುವ ಶಕ್ತಿ ಹೇಗೆ ನನ್ನಲ್ಲಿ ತುಂಬಿದೆಯೋ.. ಹಾಗೆಯೇ ಛಲದಿಂದ ಎದ್ದು ಬರುವ ಕೆಚ್ಚನ್ನೂ ರಕ್ತಗತವಾಗಿ ರೂಢಿಸಿಕೊಂಡಿದ್ದೇನೆ. 'ನಿಖಿಲ್ ಬಚ್ಚಾ. ಪಾಪ ನಿಖಿಲ್.' ಎಂಬ ಅನುಕಂಪಕ್ಕೆ ತುತ್ತಾಗಿ ಕೈ ಚೆಲ್ಲುವ ಬಾಲಬುದ್ಧಿಯ ಮನಸ್ಥಿತಿಯವನಲ್ಲ ನಾನು. ಹಿಂದಿನ ಎರಡು ಸೋಲುಗಳು ನನಗೆ ಅಸಹಾಯಕತೆಯನ್ನು ಮೆಟ್ಟಿನಿಂತು ಅಪಮಾನ ಧಿಕ್ಕರಿಸಿ ಸೆಣಸುವ ಆತ್ಮಬಲ ಕೊಟ್ಟಿವೆ. ಚನ್ನಪಟ್ಟಣದಲ್ಲಿಯೂ ಆದೇ ಛಲ, ಆತ್ಮಬಲದಿಂದ ಜೆಡಿಎಸ್-ಬಿಜೆಪಿ ಕಾರ್ಯಕರ್ತರು, ಮುಖಂಡರ ಜತೆಗೂಡಿ ದಿಟ್ಟ ಹೋರಾಟ ನಡೆಸಿದ್ದೇನೆ ಎಂದು ಹೇಳಿದ್ದಾರೆ.

ಕಾರ್ಯಕರ್ತರಿಗೆ ಅತೀವ ನೋವುಂಟು ಮಾಡಿದೆ

ನನ್ನ ಸೋಲು ನನ್ನ ಕಾರ್ಯಕರ್ತರಿಗೆ ಅತೀವ ನೋವುಂಟು ಮಾಡಿದೆ, ಅದನ್ನು ನಾನು ಬಲ್ಲೆ. ಇಡೀ ರಾಜ್ಯದ ಕಾರ್ಯಕರ್ತರೆಲ್ಲರೂ ವೀರಯೋಧರಂತೆ ಚನ್ನಪಟ್ಟಣದಲ್ಲಿ ಹಗಲಿರಳೂ ದುಡಿದರು. ಮನೆಮನೆಯನ್ನೂ ತಲುಪಿ ನನ್ನ ಗೆಲುವಿಗಾಗಿ ಶ್ರಮಿಸಿದರು. ಅಂತಿಮವಾಗಿ ಸೋಲಾಯಿತು, "ಅದು ಜನತಾ ಜನಾರ್ದನನ ನಿರ್ಣಯ. ಅದನ್ನು ನಾನು ಶಿರಬಾಗಿ ಸ್ವೀಕರಿಸಿದ್ದೇನೆ. ವಿಪರ್ಯಾಸವೆಂದರೆ, ಗೆದ್ದವರಿಗೆ ನೆಮ್ಮದಿ ಇಲ್ಲ, ಕನಿಷ್ಠ ಗೆಲುವನ್ನು ಅರ್ಥಪೂರ್ಣವಾಗಿಸಿಕೊಳ್ಳುವ ಮನಃಸ್ಥಿತಿಯೂ ಇಲ್ಲ. ಆ ಮುಖಗಳಲ್ಲಿ ನಗುವೇ ಇಲ್ಲ. ಅವರ ಸಂಭ್ರಮ, ವಿಜೃಂಭಣೆಯಲ್ಲಿ ಪ್ರಾಮಾಣಿಕತೆಯೂ ಇಲ್ಲ. ಸೋತ ಅಭ್ಯರ್ಥಿಯನ್ನು ಹೀಗಳೆಯುವ, ಎದುರಾಳಿ ಪಕ್ಷ ಮತ್ತು ಅದರ ನಾಯಕರನ್ನು ನಿಂದಿಸುವುದರಲ್ಲಿ ಮಗ್ನರಾಗಿದ್ದಾರೆ. ಅವರ ನಿಂದನೆಯ ವೈಖರಿ ನೋಡಿದರೆ ಅವರೆಷ್ಟು ಅನ್ಯನಿಂದನಾ ವೇದನೆಯಲ್ಲಿ ಮುಳುಗಿದ್ದಾರೆಂದು ಅರ್ಥವಾಗುತ್ತದೆ. ಅವರದ್ದು ಸತ್ಯದ ಜಯವಲ್ಲ. ಆ ಪಾಪಪ್ರಜ್ಞೆ ಅವರನ್ನು ಕಾಡುತ್ತಿದೆ.

'ಪಕ್ಷ ನನಗೆ ಟಾಸ್ಕ್ ಕೊಡಲಿ, ಕೇವಲ ಹದಿನೈದೇ ದಿನದಲ್ಲಿ ಜೆಡಿಎಸ್ ಪಕ್ಷವನ್ನು ಖಾಲಿ ಮಾಡಿಬಿಡುತ್ತೇನೆ' ಎನ್ನುವ ದರ್ಪ, ಅಹಂಕಾರ ಆ ಗೆಲುವಿನಲ್ಲಿ ವ್ಯಕ್ತವಾದ ವಿಕೃತಿ. ಜನಾದೇಶವನ್ನು ದೈವ ನಿರ್ಣಯವೆಂದು ಭಾವಿಸಿ, ಕ್ಷೇತ್ರದ ಜನತೆಯ ಪದತಲಕ್ಕೆ ಅರ್ಪಣೆಯಾಗಬೇಕಿದ್ದ ಗೆಲುವು ವಿರೋಧ ಪಕ್ಷವನ್ನು ನಿರ್ನಾಮ ಮಾಡುವ, ಎದುರಾಳಿಯ ಸೋಲನ್ನು ಅವಹೇಳನ ಮಾಡುವ, ವಿರೋಧಿ ನಾಯಕರನ್ನು ಕೀಳಾಗಿ ನಿಂದಿಸುವ ವಿಕಾರಿ ಅವಸ್ಥೆಗೆ ಹೋಗಬಾರದಿತ್ತು. ಯಾಕೆಂದರೆ, ಆ ಗೆಲುವಿಗೆ ನಾನು ಶುಭ ಹಾರೈಸಿದ್ದೆ ಹಾಗೂ ಅದರಿಂದ ಚನ್ನಪಟ್ಟಣಕ್ಕೆ ಒಳ್ಳೆಯದಾಗಲಿ ಎಂದು ಆಶಿಸಿದ್ದೆ. ಸೋಲಿನ ಹತಾಶೆಯಲ್ಲಿ ಗೆದ್ದವರ ಮೇಲೆ ನಾನು ವಿಷ ಕಾರಿಕೊಳ್ಳಲಿಲ್ಲ. ಅಂಥ ವಿಕೃತಿ ನನ್ನ ನೆರಳಿಗೂ ಸುಳಿಯಲು ಬಿಡುವುದಿಲ್ಲ.

ಶಾಸಕರೇನು ಮಾರುಕಟ್ಟೆಯಲ್ಲಿ ಸಿಗುವ ಮಾರಾಟದ ವಸ್ತುಗಳೇ?

ನಾನು ಅವರನ್ನು ಕೇಳ ಬಯಸುತ್ತೇನೆ. ಜೆಡಿಎಸ್ ಪಕ್ಷದಿಂದ ಶಾಸಕರನ್ನು ಖಾಲಿ ಮಾಡಿಸುತ್ತೇನೆ ಎಂದರೆ ನಮ್ಮ ಶಾಸಕರೇನು ಮಾರುಕಟ್ಟೆಯಲ್ಲಿ ಸಿಗುವ ಮಾರಾಟದ ವಸ್ತುಗಳೇ? ಅಥವಾ ಸಂತೆಯಲ್ಲಿ ಕಸಾಯಿಖಾನೆಗೆ ಕೊಂಡೊಯ್ಯುವ ಕುರಿಗಳೇ? ಅಥವಾ ಹರಾಜಿಗಿಟ್ಟ ಸರಕೇ? ಜನರಿಂದ ಆಯ್ಕೆಯಾಗಿ ಬಂದ ಜನಪ್ರತಿನಿಧಿಗಳು ಇವರ ಪಾಲಿಗೆ ಬೀದಿಯಲ್ಲಿ ಬಿಕರಿ ಮಾಡುವ ಪದಾರ್ಥಗಳೇ? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕನೊಬ್ಬ ಇನ್ನೂ ವಿಧಾನಸಭಾಧ್ಯಕ್ಷರಿಂದ ಗೌಪ್ಯತೆಯ ಪ್ರಮಾಣ ವಚನ ಸ್ವೀಕರಿಸುವ ಮುನ್ನವೇ ಸಂವಿಧಾನಬಾಹಿರ, ಜನತಂತ್ರ ವಿರೋಧಿ ಕೃತ್ಯಕ್ಕೆ ಇಳಿದು ಒಬ್ಬ ಕ್ರಿಮಿನಲ್ ರೀತಿ ಮಾತನಾಡುತ್ತಾನೆ ಎಂದರೆ, ಅದು ಎಂತಹ ಸ್ಥಿತಿಯಲ್ಲಿದೆ ಕರ್ನಾಟಕ? ಅವರ ಪಕ್ಷದ ಸಂಸದರು ಲೋಕಸಭೆಯಲ್ಲಿ ಸಂವಿಧಾನದ ಪ್ರತಿ ಕೈಯ್ಯಲ್ಲಿಡಿದು ಪ್ರಮಾಣ ಸ್ವೀಕರಿಸುತ್ತಾರೆ, ನಿತ್ಯವೂ ಸಂವಿಧಾನ ಪೀಠಿಕೆ ಪಠಣ ಮಾಡುತ್ತಾರೆ!! ಯಾವ ಪುರುಷಾರ್ಥಕ್ಕೆ ಅದೆಲ್ಲಾ? ಅನ್ಯಪಕ್ಷಗಳ ಶಾಸಕರನ್ನು ಖರೀದಿ ಮಾಡುತ್ತೇವೆ ಅಥವಾ ಎಗರಿಸಿಕೊಂಡೇ ಹೋಗುತ್ತೇವೆ ಎಂದರೆ, ಇವರು ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನವನ್ನು ರಕ್ಷಣೆ ಮಾಡುತ್ತಾರೆಯೇ? ಗೆಲುವಿನ ಅಮಲು, ಅಧಿಕಾರದ ಅಹಂಕಾರ ನಾಲಿಗೆಯ ಗುಣವನ್ನು ನಿಕೃಷ್ಟಗೊಳಿಸಿದೆ. ಇದಕ್ಕೆ ತಕ್ಕ ಉತ್ತರ ಕೊಡುವ ಶಕ್ತಿ ನಮಗಿಲ್ಲ ಎಂದು ಅವರು ಭಾವಿಸಿದ್ದರೆ ಅದು ಮೂರ್ಖತನವಷ್ಟೇ ರಾಜಕಾರಣ ಎಂದರೆ ಖರೀದಿ ಅಥವಾ ಮಾರಾಟವಲ್ಲ. ವ್ಯಾಪಾರ ಅಲ್ಲವೇ ಅಲ್ಲ ಎಂದು ಕಿಡಿಕಾರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net