ನಿಖಿಲ್-ರೇವತಿ ಮದುವೆಗಾಗಿ ಕೇತಿಗಾನಹಳ್ಳಿಯ ತೋಟದ ಮನೆಯಲ್ಲಿ ನಡೆದಿದೆ ಭರದ ಸಿದ್ಧತೆ

15 bidadi photo 3
Published on

ಬಿಡದಿ: ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರ ಪುತ್ರ, ನಟ ನಿಖಿಲ್ ಮತ್ತು ರೇವತಿ ಮದುವೆಯನ್ನು ರಾಮನಗರದ ಕೇತಿಗಾನಹಳ್ಳಿ ತೋಟದ ಮನೆಯಲ್ಲಿ ಎರಡೂ ಕುಟುಂಬಸ್ಥರ ಸಮ್ಮುಖದಲ್ಲಿ ಏ.17ರಂದು ನಡೆಸಲು ನಿರ್ಧರಿಸಲಾಗಿದ್ದು ಅದಕ್ಕಾಗಿ ಭರದ ಸಿದ್ಧತೆ ನಡೆಯುತ್ತಿದೆ.

ಬೆಂಗಳೂರು-ಮೈಸೂರು ಹೆದ್ದಾರಿಯಿಂದ ಕೇತಿಗಾನಹಳ್ಳಿಗೆ ಹೋಗುವ ರಸ್ತೆಯಲ್ಲಿ ಸಾರ್ವಜನಿಕರ ಕಣ್ಣಿಗೆ ಬೀಳದಂತೆ ತೋಟದ ೆನ್ಸಿಂಗ್‌ಗೆ ಶಾಮಿಯಾನದಲ್ಲಿ ಸೈಡ್‌ವಾಲ್ ನಿರ್ಮಿಸಿ ಒಳಗೆ ಮೂರು ದಿನಗಳಿಂದ ಚಪ್ಪರ ಹಾಕುವ ಕಾರ್ಯ ಭರದಿಂದ ಸಾಗಿದೆ. ನೂರು ಮೀಟರ್‌ಗೂ ಹೆಚ್ಚು ದೂರ ತೋಟದ ಮನೆ ಮುಂಭಾಗದವರೆಗೂ ಚಪ್ಪರ ನಿರ್ಮಾಣವಾಗುತ್ತಿದೆ. ಚಪ್ಪರದ ಎರಡೂ ಬದಿ ಇರುವ ತೆಂಗಿನ ಮರಗಳಿಗೆ ಸುಣ್ಣಬಣ್ಣದ ಲೇಪನ ಮಾಡಲಾಗಿದೆ. ಹಿಂದು ಸಂಪ್ರದಾಯದಂತೆ ಮನೆ ಗೇಟ್ ಮುಂಭಾಗದಲ್ಲಿ ಕಂಬಗಳಿಗೆ ತೆಂಗಿನ ಗರಿಗಳಿಂದ ಸಿಂಗರಿಸಲಾಗುತ್ತಿದ್ದು, ತೋಟದ ಮನೆ ಮದುವಣಗಿತ್ತಿಯಂತೆ ಆಕರ್ಷಿಸುತ್ತಿದೆ.

ಹಸಿರು ಪ್ರಕೃತಿ ನಡುವೆ ಇರುವ ತೋಟದ ಮನೆ ಮುಂಭಾಗ ಚಿಕ್ಕದಾದ ಚೊಕ್ಕ ಮಂಟಪ ನಿರ್ಮಾಣವಾಗುತ್ತಿದೆ. ಚಿಕ್ಕದಾದ ವೇದಿಕೆ ಮಾಡಲಾಗಿದ್ದು, ಅದರಲ್ಲಿ ಬೆರಳೆಣಿಕೆ ಜನರು ಸೇರುವಷ್ಟು ವ್ಯವಸ್ಥೆ ಮಾಡಲಾಗುತ್ತಿದೆ. ಎಲ್ಲ ಸಿದ್ಧತೆಗೆ ಕೆಲಸಗಾರರು ಅಂತಿಮ ಸ್ಪರ್ಶ ನೀಡುತ್ತಿದ್ದಾರೆ.

ಬುಧವಾರ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಮತ್ತು ಕುಮಾರಸ್ವಾಮಿ ಅವರು ಮದುವೆ ಸಿದ್ಧತೆಯನ್ನು ಪರಿಶೀಲಿಸಿದರು.

‘‘ನನ್ನ ಅದೃಷ್ಟಕ್ಕೆ ರಾಮನಗರ ಜಿಲ್ಲೆಯಲ್ಲಿ ಕರೊನಾ ಸೋಂಕಿತರಿಲ್ಲ. ದೇವರ ದಯೆಯಿಂದ ನಮ್ಮ ಆಸೆಯಂತೆ ರಾಮನಗರ ನೆಲದಲ್ಲೇ ಸರಳವಾಗಿ ನಿಖಿಲ್ ಮದುವೆ ನಡೆಸಲಾಗುವುದು. ಇದಕ್ಕೆ ಸರ್ಕಾರದಿಂದ ಅನುಮತಿ ಪಡೆಯಲಾಗಿದೆ’’ ಎಂದು ಕುಮಾರಸ್ವಾಮಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net