ಚುನಾವಣೆ ನನ್ನ ಪಾಲಿಗೆ ಅನಿರೀಕ್ಷಿತ ಬೆಳವಣಿಗೆ, ನನ್ನ ಎರಡು ಸೋಲು...: Nikhil Kumaraswamy

Nikhil Kumaraswamy
Published on

ಚನ್ನಪಟ್ಟಣ: ಕೇಂದ್ರ ಸಚಿವ ಎಚ್​.ಡಿ. ಕುಮಾರಸ್ವಾಮಿ (HD Kumaraswamy) ಅವರ ರಾಜೀನಾಮೆಯಿಂದ ತೆರವಾಗಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ನಡೆಯುತ್ತಿರುವ ಉಪಚುನಾವಣೆ (ByElection) ಇಡೀ ರಾಜ್ಯದ ಗಮನ ಸೆಳೆಯುತ್ತಿದ್ದು, ಒಂದಿಲ್ಲೊಂದು ಕಾರಣಕ್ಕೆ ಸದ್ದು ಮಾಡುತ್ತಿದೆ. ಕಾಂಗ್ರೆಸ್​ ಅಭ್ಯರ್ಥಿ ಸಿಪಿ ಯೋಗೇಶ್ವರ್ (CP Yogeshwar)​, ಬಿಜೆಪಿ ಜೆಡಿಎಸ್​ ಮೈತ್ರಿ ಅಭ್ಯರ್ಥಿ ನಿಖಿಲ್​ ಕುಮಾರಸ್ವಾಮಿ (Nikhil Kumaraswamy)​ ಪರ ನಾಯಕರು ಭರ್ಜರಿ ಪ್ರಚಾರ ನಡೆಸುತ್ತಿದ್ದು, ಪ್ರಚಾರ ಕಾರ್ಯದ ವೇಳೆ ನಿಖಿಲ್​ ಕುಮಾರಸ್ವಾಮಿ (Nikhil Kumaraswamy)​ ಮತದಾರರಿಗೆ ಮಾಡಿರುವ ಮನವಿ ಎಲ್ಲರ ಗಮನ ಸೆಳೆಯುತ್ತಿದೆ.

ಕಾಂಗ್ರೆಸ್​ ಅಭ್ಯರ್ಥಿ ಸಿಪಪಿ ಯೋಗೇಶ್ವರ್​ ಅವರ ಸ್ವಗ್ರಾಮ ಚಕ್ಕೆರೆಯಲ್ಲಿ ಪ್ರಚಾರ ನಡೆಸಿ ಮಾತನಾಡಿದ ನಿಖಿಲ್ (Nikhil Kumaraswamy)​, ನಿಖಿಲ್ ಚುನಾವಣೆಗೆ ನಿಲ್ಲಬೇಕು ಎಂದು ಕ್ಷೇತ್ರದ ಜನರು ಮನವಿ ಮಾಡಿದ್ದರು. ಈ ಚುನಾವಣೆ ನನ್ನ ಪಾಲಿಗೆ ಅನಿರೀಕ್ಷಿತ ಬೆಳವಣಿಗೆ. ಸಿಎಂ, ಡಿಸಿಎಂ, ಎಲ್ಲಾ ಸಚಿವರು ಒಬ್ಬ ನಿಖಿಲ್ ಸೋಲಿಸೋಕೆ ಬಂದಿದ್ದಾರೆ. ಜನರು ತಮ್ಮ ಮನಸಿನಲ್ಲಿ ನನಗೆ ಜಾಗ ಕೊಟ್ಟಿದ್ದಾರೆ. ನನ್ನನ್ನು ಎರಡು ಬಾರಿ ಕುತಂತ್ರದಿಂದ ಸೋಲಿಸಿದರು.

ನಾನು ಶಾಸಕನಾಗಬೇಕೆಂದು ಚುನಾವಣೆಗೆ ನಿಂತಿಲ್ಲ. ನನಗೆ ನನ್ನ ಜವಾಬ್ದಾರಿಯ ಅರವಿದೆ. ಕುತಂತ್ರದಿಂದ ಎರಡು ಚುನಾವಣೆ ಸೋತೆ. ಬಳಿಕ ನಾನು ಚುನಾವಣೆಗೆ ಸ್ಪರ್ಧೆ ಮಾಡೋದು ಬೇಡ ಅಂತ ನಿರ್ಧಾರ ಮಾಡಿದ್ದೆ. ವಿರೋಧ ಪಕ್ಷಗಳು ನಿತ್ಯ ಟೀಕೆ ಮಾಡುತ್ತಿದ್ದಾರೆ. 2019 ಲೋಕಸಭೆ ಚುನಾವಣೆಯಲ್ಲಿ ಶಾಸಕರು, ಕಾರ್ಯಕರ್ತರ ಒತ್ತಾಯಕ್ಕೆ ಸ್ಪರ್ಧೆ ಮಾಡಿದ್ದೆ. ಜನ ಎಂದೂ ನನ್ನ ಕೈ ಬಿಡಲಿಲ್ಲ. ಆದರೆ ಕಾಂಗ್ರೆಸ್ ಪಕ್ಷ ಮೈತ್ರಿ ಧರ್ಮ ಪಾಲನೆ ಮಾಡಿಲ್ಲ. 5 ವರ್ಷ ಕುಮಾರಸ್ವಾಮಿ ಸಿಎಂ ಅಂತ ಕಾಂಗ್ರೆಸ್ ಅವರು ನಮ್ಮ ಮನೆ ಬಾಗಿಲಿಗೆ ಬಂದಿದ್ದರು. ಕುಮಾರಸ್ವಾಮಿ ರೈತರ ಸಾಲಮನ್ನಾ ಮಾಡೋ ಭರವಸೆ ಕೊಟ್ಟಿದ್ದರು. ಅದರಂತೆ ಕುಮಾರಸ್ವಾಮಿ ಸಾಲಮನ್ನಾ ಮಾಡಿದರು. 14 ತಿಂಗಳಲ್ಲಿ ಕುಮಾರಸ್ವಾಮಿ ಕೊಟ್ಟ ಮಾತು ಉಳಿಸಿಕೊಂಡಿದ್ದಾರೆ. ಚನ್ನಪಟ್ಟಣದಲ್ಲಿ 11 ಸಾವಿರ ರೈತರ ಸಾಲಮನ್ನಾ ಮಾಡಿದ್ದಾರೆ. ಕುಮಾರಸ್ವಾಮಿ ಯಾವುದೇ ಜಾತಿ, ಧರ್ಮ ನೋಡಿ ಸಾಲಮನ್ನಾ ಮಾಡಿಲ್ಲ. ಕುಮಾರಸ್ವಾಮಿ ಕೊಟ್ಟ ಮಾತು ಉಳಿಸಿಕೊಂಡಿದ್ದಾರೆ.

ಕುಮಾರಸ್ವಾಮಿ ಕೇಂದ್ರ ಸಚಿವರಾಗಿದ್ದಾರೆ. ರಾಮನಗರ-ಮಂಡ್ಯ ಮಧ್ಯೆ ಒಂದು ಕೈಗಾರಿಕಾ ಸ್ಥಾಪನೆಗೆ ಕುಮಾರಸ್ವಾಮಿ ನಿರ್ಧಾರ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಕೆಲಸ ಆಗುತ್ತಿದೆ. ಕುಮಾರಸ್ವಾಮಿ ಮಾತು ಕೊಟ್ಟಿದ್ದನ್ನ ಉಳಿಸಿಕೊಂಡಿದ್ದಾರೆ. ಈ ಭಾಗಕ್ಕೆ ಕೈಗಾರಿಕೆ ತರಲು ನಾವು ಕೆಲಸ ಮಾಡುತ್ತೇವೆ. ಯೋಗೇಶ್ವರ್ ನಾನು ಆಧುನಿಕ ಭಗೀರಥ ಅಂತ ಹೇಳಿಕೊಳ್ಳುತ್ತಾರೆ. ಆದರೆ ಇಲ್ಲಿ ಕೆರೆಗಳು ತುಂಬಲು ಕಾರಣ ಅಂದಿನ ಸಿಎಂ ಸದಾನಂದಗೌಡ. ಯೋಗೇಶ್ವರ್ ಅವರಿಗೆ ನಾವು ಜೆಡಿಎಸ್‌ನಿಂದ ಸ್ಪರ್ಧೆ ಮಾಡಿ ಅಂತ ಹೇಳಿದ್ದೆವು. ಬರುತ್ತೇನೆ ಎಂದು ಬರಲಿಲ್ಲ. ಬಿಜೆಪಿಯಿಂದಲೇ ನಿಂತುಕೊಳ್ಳಿ ಅಂದರೂ ಕಾಂಗ್ರೆಸ್‌ಗೆ ಹೋದರು. ಯೋಗೇಶ್ವರ್ 6 ವರ್ಷಕ್ಕಿಂತ ಹೆಚ್ಚು ಒಂದು ಪಕ್ಷದಲ್ಲಿ ಇರಲ್ಲ. ಇದಕ್ಕೆ ಮೊದಲು ಉತ್ತರ ಕೊಡಲಿ. ನಾವು ಆತ್ಮಸಾಕ್ಷಿಗೆ ಅನುಗುಣವಾಗಿ ಕೆಲಸ ಮಾಡುತ್ತಿದ್ಧೇವೆ ಎಂದು ಬಿಜೆಪಿ-ಜೆಡಿಎಸ್​ ಮೈತ್ರಿ ಅಭ್ಯರ್ಥಿ ನಿಖಿಲ್​ ಕುಮಾರಸ್ವಾಮಿ (Nikhil Kumaraswamy)​ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net