

ಬೆಂಗಳೂರು:
ಮಾಜಿ ಸಿಎಂ ನಿಜಲಿಂಗಪ್ಪನವರು ಸ್ವಾತಂತ್ರ್ಯ ಹೋರಾಟಗಾರರು ಹಾಗೂ ದೇಶ ಕಂಡ ಅಪ್ರತಿಮ ನಾಯಕರು ಎಂದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ವಿಧಾನಸೌಧದ ಪಶ್ಚಿಮ ದಿಕ್ಕಿನಲ್ಲಿರುವ ಮಾಜಿ ಮುಖ್ಯಮಂತ್ರಿಯವರಾದ ದಿ.ಎಸ್.ನಿಜಲಿಂಗಪ್ಪ ಅವರ ಪುಣ್ಯತಿಥಿ ಅಂಗವಾಗಿ ಅವರ ಪ್ರತಿಮೆ ಗೆ ಮಾಲಾರ್ಪಣೆ ಮಾಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ನಿಜಲಿಂಗಪ್ಪ ಅವರು ದೇಶಕ್ಕೆ ಮಾಡಿದ ಸೇವೆ ನಮಗೆ ಆದರ್ಶ. ಅವರ ಆದರ್ಶಗಳನ್ನು ನಾವು ಮೈಗೂಡಿಸಿಕೊಂಡು ರಾಜ್ಯದ ಸೇವೆಯನ್ನು ಮಾಡುತ್ತೇವೆ ಎಂದರು.
ನಿಜಲಿಂಗಪ್ಪನವರು ಅವಿಭಜಿತ ಕಾಂಗ್ರೆಸ್‌ನ ಎಐಸಿಸಿ ಅಧ್ಯಕ್ಷರಾಗಿದ್ದವರು. ಪ್ರತಿ ವರ್ಷ ಅವರ ಜನ್ಮದಿನ ಹಾಗೂ ಪುಣ್ಯತಿಥಿಯಂದು ಅವರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಗೌರವವನ್ನು ಸರ್ಕಾರ ಸಲ್ಲಿಸುತ್ತಾ ಬಂದಿದೆ ಎಂದರು.
ನಿಜಲಿಂಗಪ್ಪನವರು ಸ್ವಾತಂತ್ರ್ಯ ಹೋರಾಟಗಾರರು ಹಾಗೂ ದೇಶ ಕಂಡ ಅಪ್ರತಿಮ ನಾಯಕರು. ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಗಳಾದರು. ಏಕೀಕರಣದ ಹೋರಾಟದಲ್ಲಿ ಭಾಗವಹಿಸಿ, ಕರ್ನಾಟಕದ ಏಕೀಕರಣದ ನಂತರ ಮೊದಲನೇ ಮುಖ್ಯ ಮಂತ್ರಿಗಳಾದರು. ಜನಪರ ಕಾಳಜಿ ಹೊಂದಿದ್ದರು. ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಿದರು. ಎಲ್ಲಕ್ಕಿಂತ ಮುಖ್ಯವಾಗಿ ಪ್ರಾಮಾಣಿಕ ರಾಜಕಾರಣಿ ಎಂದು ಮುಖ್ಯಮಂತ್ರಿಗಳು ಬಣ್ಣಿಸಿದರು.
ಗೃಹ ಸಚಿವ ಜಿ.ಪರಮೇಶ್ವರ್, ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಪ್ರಕಾಶ್ ರಾಥೋಡ್ ಮತ್ತಿತರರು ಇದ್ದರು.