

ಸದೇಶ್ ಕಾರ್ಮಾಡ್ ಮೈಸೂರು
ಮೈಸೂರನ್ನು ಸ್ವಚ್ಛ ನಗರಿಯಾಗಿ ರೂಪಿಸಲು ಪೌರ ಕಾರ್ಮಿಕರು ಹಗಲಿರುಳು ಶ್ರಮಿಸುತ್ತಿದ್ದಾರೆ. ಆದರೆ, ಈ ಪರಿಶ್ರಮವನ್ನು ಕೆಲವರು ವ್ಯರ್ಥಗೊಳಿಸುತ್ತಿದ್ದು, ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುತ್ತಿದ್ದಾರೆ. ಇಂತಹವರಿಗೆ ಬಿಸಿ ಮುಟ್ಟಿಸಲು ನಗರ ಪಾಲಿಕೆ ಅಧಿಕಾರಿಗಳು ‘ರಾತ್ರಿ ಗಸ್ತು’ ಪ್ರಾರಂಭಿಸಿದ್ದಾರೆ.
ಕೆಲವು ನಿರ್ದಿಷ್ಟ ಸ್ಥಳಗಳಲ್ಲಿ ಜನರು ಪ್ರತಿನಿತ್ಯ ತ್ಯಾಜ್ಯ ತಂದು ಎಸೆಯುತ್ತಿದ್ದು, ಅಂತಹ ಸ್ಥಳಗಳಿಗೆ ಸಂಜೆ ಹಾಗೂ ರಾತ್ರಿ ವೇಳೆ ನಗರ ಪಾಲಿಕೆ ಅಧಿಕಾರಿಗಳು ದಿಢೀರಾಗಿ ಭೇಟಿ ನೀಡಿ ದಂಡ ವಿಧಿಸುವ ಕಾರ್ಯ ಮಾಡುತ್ತಿದ್ದಾರೆ. ದಂಡ ವಿಧಿಸುವ ಭಯದಿಂದಾದರೂ ಜನರು ತ್ಯಾಜ್ಯ ಎಸೆಯುವುದನ್ನು ನಿಲ್ಲಿಸಲಿ ಎಂಬ ಕಾರಣಕ್ಕೆ ನಗರ ಪಾಲಿಕೆ ಅಧಿಕಾರಿಗಳು ಈ ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ.
ಸ್ವಚ್ಛತೆಗೆ ಸಹಕರಿಸುವಂತೆ ನಗರ ಪಾಲಿಕೆ ಪ್ರತಿನಿತ್ಯ ಜನರಲ್ಲಿ ಮನವಿ ಮಾಡುತ್ತಿದೆ. ಮನೆ ಮನೆಗಳಿಂದ ತ್ಯಾಜ್ಯ ಸಂಗ್ರಹಿಸುವ ವಾಹನದ ಮೈಕ್ ಮೂಲಕವೂ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುತ್ತಿದೆ. ಬಹುತೇಕ ಜನರು ಮನೆ ಬಳಿ ಬರುವ ವಾಹನಕ್ಕೆ ಹಸಿಕಸ ಹಾಗೂ ಒಣಕಸವನ್ನು ಬೇರ್ಪಡಿಸಿ ನೀಡುತ್ತಿದ್ದಾರೆ. ಆದರೆ, ಹಸಿಕಸ ಹಾಗೂ ಒಣಕಸ ಬೇರ್ಪಡಿಸಲು ಆಸಕ್ತಿ ತೋರದ ಜನರು ಎಲ್ಲ ಕಸವನ್ನು ಒಟ್ಟಿಗೆ ತಂದು ರಸ್ತೆ ಬದಿಯಲ್ಲಿ ಸುರಿಯುತ್ತಿದ್ದಾರೆ. ಇದರಿಂದ ನಗರದ ನೈರ್ಮಲ್ಯ ಹದಗೆಡುತ್ತಿದೆ.
ಸಾರ್ವಜನಿಕ ರಸ್ತೆ, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಹಾಗೂ ಇತರೆ ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವುದು, ಉಗುಳುವುದು, ಬಹಿರ್ದೆಸೆ ಮಾಡುವುದು, ಮೂತ್ರ ವಿಸರ್ಜಿಸುವುದು ಕಂಡು ಬಂದರೆ ಮೊದಲ ಬಾರಿ 500 ರೂ., ಪುನರಾವರ್ತನೆಗೆ 1,000 ರೂ. ದಂಡ ವಿಧಿಸಲಾಗುತ್ತಿದೆ. ಅದೇ ರೀತಿ ತ್ಯಾಜ್ಯವನ್ನು ಮೂಲದಲ್ಲಿಯೇ ಹಸಿಕಸ ಮತ್ತು ಒಣಕಸ, ಕೈತೋಟದ ತ್ಯಾಜ್ಯ ವೈದ್ಯಕೀಯ ತ್ಯಾಜ್ಯ, ವಿಷಕಾರಿ ತ್ಯಾಜ್ಯ ಹಾಗೂ ಇತರೆ ತ್ಯಾಜ್ಯವನ್ನು ಬೇರ್ಪಡಿಸಿ ನೀಡದೆ ಹೋದರೆ ನಿವಾಸಿಗಳಿಗೆ ಮೊದಲ ಬಾರಿ 200 ರೂ., ಪುನರಾವರ್ತನೆಯಾದರೆ 500 ರೂ., ವಾಣಿಜ್ಯ ಉದ್ದಿಮೆದಾರರಿಗೆ ಮೊದಲ ಬಾರಿ 500 ರೂ., ಪುನರಾವರ್ತನೆ ಮಾಡಿದರೆ 1,000 ರೂ. ದಂಡ ವಿಧಿಸಲಾಗುತ್ತಿದೆ.
ಪ್ರತಿ ಬಾರಿ ಸ್ವಚ್ಛ ಸರ್ವೇಕ್ಷಣೆಯಲ್ಲಿ ದೇಶದ ಟಾಪ್-10 ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆಯುತ್ತಿದ್ದ ಮೈಸೂರು ನಗರ ಕಳೆದ ಬಾರಿ 27ನೇ ಸ್ಥಾನಕ್ಕೆ ಕುಸಿತ ಕಂಡಿದೆ. ಈ ಹಿನ್ನೆಲೆಯಲ್ಲಿ ಸ್ವಚ್ಛತೆಯ ಕಡೆಗೆ ನಗರ ಪಾಲಿಕೆ ಹೆಚ್ಚಿನ ಗಮನ ಹರಿಸಲು ಪ್ರಾರಂಭಿಸಿದೆ. ರಸ್ತೆ ಬದಿಯಲ್ಲಿ ತ್ಯಾಜ್ಯ ಎಸೆಯುವವರಿಗೆ ದಂಡ ವಿಧಿಸಿದರೂ ಸಹ ಕೆಲವರು ಇನ್ನೂ ಸಹ ತ್ಯಾಜ್ಯವನ್ನು ಎಸೆಯುವುದನ್ನು ಮಾತ್ರ ನಿಲ್ಲಿಸಿಲ್ಲ. ಹೀಗಾಗಿ ನಿರಂತರ ವಾಗಿ ತ್ಯಾಜ್ಯ ಎಸೆಯುವವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಪಾಲಿಕೆ ಮುಂದಾಗುವ ಅವಶ್ಯಕತೆ ಇದೆ.
2024ರ ಸ್ವಚ್ಛ ಸರ್ವೇಕ್ಷಣೆಗೆ 9,500 ಅಂಕಗಳನ್ನು ನಿಗದಿ ಪಡಿಸಲಾಗಿದ್ದು, ಈ ಬಾರಿ ಸರ್ವಿಸ್ ಲೆವಲ್ ಪ್ರೋಗ್ರೆಸ್‌ಗೆ ಹೆಚ್ಚಿನ ಒತ್ತು ನೀಡಿರುವುದು ವಿಶೇಷ. ಈ ಹಿನ್ನೆಲೆಯಲ್ಲಿ ಸ್ವಚ್ಛತೆಗೆ ಆದ್ಯತೆ ನೀಡದೆ ಇದ್ದರೆ ನಗರ ದೇಶದ ಟಾಪ್-10 ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆಯಲು ಸಾಧ್ಯವೇ ಇಲ್ಲ.
2023ರ ಸ್ವಚ್ಛ ಸರ್ವೇಕ್ಷಣೆಯಲ್ಲಿ ಸರ್ವಿಸ್ ಲೆವಲ್ ಪ್ರೋಗ್ರೆಸ್‌ಗೆ 4,525, ಸರ್ಟಿಫಿಕೇಷನ್‌ಗೆ 2500, ಸಿಟಿಜನ್ ವಾಯ್ಸಗೆ 2,475 ಅಂಕಗಳನ್ನು ನಿಗದಿ ಪಡಿಸಲಾಗಿತ್ತು. ಈ ಬಾರಿ ಸರ್ವಿಸ್ ಲೆವಲ್ ಪ್ರೋಗ್ರೆಸ್‌ಗೆ ಬರೋಬ್ಬರಿ 5,705 ಅಂಕಗಳನ್ನು ನಿಗದಿಪಡಿಸಲಾಗಿದೆ. ಹೀಗಾಗಿ ಈ ವಿಭಾಗದಲ್ಲಿ ಎಡವಿದರೆ ಸ್ವಚ್ಛ ನಗರಿ ಪಟ್ಟ ಕೈತಪ್ಪುವುದು ನಿಶ್ಚಿತ. ಈ ಬಾರಿ ಸರ್ಟಿಫಿಕೇಷನ್‌ಗೆ 2,500 ಅಂಕಗಳನ್ನು ನಿಗದಿ ಪಡಿಸಲಾಗಿದೆ. ಸಿಟಿಜನ್ ವಾಯ್ಸ ವಿಭಾಗದ ಹೆಸರನ್ನು ಬದಲಾಯಿಸಲಾಗಿದ್ದು, ‘ಜನ ಆಂದೋಲನ’ ಎಂದು ಕರೆಯಲಾಗಿದೆ. ಜನ ಆಂದೋಲನಕ್ಕೆ 1,295 ಅಂಕಗಳನ್ನು ನಿಗದಿ ಪಡಿಸಲಾಗಿದೆ.
ಸರ್ವಿಸ್ ಲೆವಲ್ ಪ್ರೋಗ್ರೆಸ್ ವಿಭಾಗದಲ್ಲಿ ಅಂಕಗಳನ್ನು ನೀಡುವ ಸಂದರ್ಭ ಮನೆ ಮನೆಗಳಿಂದ ತ್ಯಾಜ್ಯವನ್ನು ಹಸಿ ಮತ್ತು ಒಣ ಕಸವಾಗಿ ವಿಂಗಡಿಸಿ ನೀಡಲಾಗುತ್ತಿದೆಯೇ?, ಸಂಗ್ರಹಿಸಿದ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡಿ ಸಂಸ್ಕರಣೆ ಮಾಡಲಾಗುತ್ತಿದೆಯೇ? ನಗರದಲ್ಲಿ ನೈರ್ಮಲ್ಯವನ್ನು ಸದಾ ಉತ್ತಮವಾಗಿ ಕಾಪಾಡಲಾಗುತ್ತಿದೆಯೇ?, ಒಳಚರಂಡಿ ಶುಚಿಗೊಳಿಸಲು ಯಂತ್ರೋ ಪಕರಣ ಬಳಕೆ ಮಾಡಲಾಗುತ್ತಿದೆಯೇ ಎಂಬ ಅಂಶಗಳನ್ನು ಪ್ರಮುಖವಾಗಿ ಗಮನಿಸಲಾಗುತ್ತದೆ.
ಹೀಗಾಗಿ ಈ ಬಾರಿ ಸ್ವಚ್ಛ ಸರ್ವೇಕ್ಷಣೆ ಸಂದರ್ಭ ಎಲ್ಲೆಂದರಲ್ಲಿ ತ್ಯಾಜ್ಯ ಹರಡಿಕೊಂಡಿರುವುದು ಕಂಡು ಬಂದರೆ ನಿರೀಕ್ಷಿತ ಮಟ್ಟದಲ್ಲಿ ಅಂಕ ಗಳಿಸುವಲ್ಲಿ ನಗರ ಹಿಂದೆ ಬೀಳಲಿದೆ. ಇದೀಗ ನಗರದ ಮನೆ ಮನೆಗಳಿಂದ ಹಸಿಕಸ ಹಾಗೂ ಒಣಕಸವನ್ನು ಪ್ರತ್ಯೇಕವಾಗಿ ಪಡೆಯುವ ಕಾರ್ಯ ಉತ್ತಮವಾಗಿ ನಡೆಯುತ್ತಿದ್ದು, ನಗರದ ರಸ್ತೆಗಳಲ್ಲಿ ತ್ಯಾಜ್ಯ ಎಸೆಯುವುದಕ್ಕೆ ಕಡಿವಾಣ ಬಿದ್ದರೆ ನಗರ ಈ ಬಾರಿಯ ಸ್ವಚ್ಛ ಸರ್ವೇಕ್ಷಣೆಯಲ್ಲಿ ಉತ್ತಮ ಸಾಧನೆ ತೋರುವ ನಿರೀಕ್ಷೆ ಹೊಂದಲಾಗಿದೆ. ಇದಕ್ಕೆ ನಗರದ ನಾಗರಿಕರ ಸಹಕಾರ ತುಂಬಾ ಅಗತ್ಯವಾಗಿದೆ.
ನಗರವನ್ನು ಸ್ವಚ್ಛವಾಗಿಡಲು ಎಲ್ಲ ರೀತಿಯ ಪ್ರಯತ್ನ ಮಾಡಲಾಗುತ್ತಿದೆ. ಆದರೆ, ಕೆಲವರು ತ್ಯಾಜ್ಯವನ್ನು ರಸ್ತೆ ಬದಿಯಲ್ಲಿ ಎಸೆಯುತ್ತಿರುವುದು ಕಂಡು ಬರುತ್ತಿದೆ. ಬೆಳಗ್ಗೆ ಕಸ ಎಸೆಯುತ್ತಿರುವವರಿಗೆ ದಂಡ ವಿಧಿಸುವ ವ್ಯವಸ್ಥೆ ಹಿಂದಿನಿಂದಲೂ ಇತ್ತು. ಆದರೆ, ಕೆಲವರು ರಾತ್ರಿ ವೇಳೆ ಕಸ ಎಸೆಯುತ್ತಿರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಅಂತಹವರಿಗೆ ದಂಡ ವಿಧಿಸಲು ಪಾಲಿಕೆ ಅಧಿಕಾರಿಗಳ ತಂಡ ರಾತ್ರಿ ವೇಳೆಯೂ ಗಸ್ತು ತಿರುಗುವ ಮೂಲಕ ದಂಡ ವಿಧಿಸುತ್ತಿದ್ದಾರೆ.
ಡಾ.ವೆಂಕಟೇಶ್, ನಗರ ಪಾಲಿಕೆ ಆರೋಗ್ಯಾಧಿಕಾರಿ