ಇಳಿಮುಖವಾಗಿರುವ ಕರೊನಾ ಪ್ರಕರಣಗಳಲ್ಲಿ ಮತ್ತೆ ಏರಿಕೆ: ನಾಳೆಯಿಂದ ರಾತ್ರಿ ಕರ್ಫ್ಯೂ ಜಾರಿ!

Night Curpew
Published on

ಅಹಮದಾಬಾದ್​: ಕರೊನಾ ಕಣ್ಮರೆಯಾಗುತ್ತಿರುವ ಸುಸಂದರ್ಭದಲ್ಲಿಯೂ ಕೆಲ ರಾಜ್ಯಗಳಲ್ಲಿ ಮತ್ತೆ ಮಹಾಮಾರಿ ಕೋವಿಡ್​-19 ಪ್ರಕರಣಗಳು ಏರುತ್ತಿರುವ ಕಾರಣ ನಾಳೆಯಿಂದ ರಾತ್ರಿ ಕರ್ಫ್ಯೂ ಹೇರಲಾಗುತ್ತಿರುವುದು ಕಳವಳಕ್ಕೆ ಕಾರಣವಾಗಿದೆ.

ಮಧ್ಯಪ್ರದೇಶ ಹಾಗೂ ಗುಜರಾತಿನ ಕೆಲ ನಗರಗಳಲ್ಲಿ ಕರೊನಾ ಪ್ರಕರಣಗಳು ಮತ್ತೆ ಏರಿಕೆಯಾಗುತ್ತಿರುವುದರಿಂದ ರಾತ್ರಿ ಕರ್ಫ್ಯೂ ಹೇರಲಾಗಿದೆ. ಗುಜರಾತಿನ ರಾಜ್​ಕೋಟ್​, ಸೂರತ್​ ಮತ್ತು ವಡೋದರಾದಲ್ಲಿ ನಾಳೆಯಿಂದ ರಾತ್ರಿ 9 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ನೂತನ ನಿಯಮ ಜಾರಿಯಲ್ಲಿರಲಿದೆ ಎಂದು ಡಿಸಿಎಂ ನಿತಿನ್​ ಪಟೇಲ್​ ತಿಳಿಸಿದ್ದಾರೆ.

ಮಧ್ಯಪ್ರದೇಶದ ಇಂದೋರ್​, ಭೋಪಾಲ್​, ಗ್ವಾಲಿಯರ್​, ವಿಧಿಶಾ ಮತ್ತು ರಾಟ್ಲಮ್​ನಲ್ಲಿ ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಕರ್ಫ್ಯೂ ಜಾರಿಯಲ್ಲಿರಲಿದೆ. ಅಗತ್ಯ ಸೇವೆ ಮತ್ತು ಕಾರ್ಖಾನೆ ಕೆಲಸಗಾರರಿಗೆ ಕರ್ಫ್ಯೂನಿಂದ ವಿನಾಯಿತಿ ನೀಡಲಾಗಿದೆ ಎಂದು ಮುಖ್ಯಮಂತ್ರಿ ಶಿವರಾಜ್​ ಸಿಂಗ್​ ಚೌಹಾಣ್​ ಹೇಳಿದ್ದಾರೆ.

ಅಹಮದಾಬಾದ್​ನಲ್ಲಿ ನ. 23ರಂದು ನಿಷೇಧ ಹೇರಿದ ಬೆನಲ್ಲೇ ಉಳಿದ ಕೆಲ ನಗರಗಳಲ್ಲಿಯೂ ಕರ್ಫ್ಯೂ ಹೇರಲಾಗಿದೆ. ಗುಜರಾತಿನಲ್ಲಿ ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶ ನೀಡಲಾಗಿದ್ದು, ಈ ನಿರ್ಧಾರವನ್ನು ಸಿಎಂ ವಿಜಯ್​ ರೂಪಾಣಿ ನೇತೃತ್ವದಲ್ಲಿ ಗುರುವಾರ ನಡೆದ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ.

ಅಹಮದಾಬಾದ್​ನಲ್ಲಿ ದಿನವೊಂದಕ್ಕೆ 200ಕ್ಕೂ ಹೆಚ್ಚು ಕೋವಿಡ್​ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಒಂದು ತಿಂಗಳ ಮುಂಚೆ 140ಕ್ಕೂ ಕಡಿಮೆ ಕೇಸ್​ಗಳು ಬರುತ್ತಿದ್ದವು. ಗುರುವಾರ 230 ಪ್ರಕರಣಗಳು ವರದಿಯಾಗಿವೆ. ಕರ್ಫ್ಯೂ ಹೊರತಾಗಿ ಸೋಮವಾರದಿಂದ ಶಾಲಾ-ಕಾಲೇಜುಗಳನ್ನು ತೆರೆಯಲು ಗುಜರಾತ್​ ಸರ್ಕಾರ ನಿರ್ಧಾರ ಮಾಡಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net