

ಬೆಂಗಳೂರು : ಸಾಮಾಜಿಕ ಜಾಲತಾಣದಲ್ಲಿ ಕಿಡ್ನಿ ಮಾರಾಟ ಮತ್ತು ಖರೀದಿ ಸೋಗಿನಲ್ಲಿ ಅಮಾಯಕರಿಗೆ ವಂಚನೆ ಮಾಡುತ್ತಿದ್ದ ನೈಜೀರಿಯಾ ಪ್ರಜೆಯನ್ನು ಬಾಗಲೂರು ಪೊಲೀಸರು ಬಂಧಿಸಿದ್ದಾರೆ. ಬಾಗಲೂರು ಸಮೀಪದ ಮಾರೇನಹಳ್ಳಿಯ ದುರ್ಗಾನಾಥ ಸಿಟಿ ರೆಸಿಡೆನ್ಸಿಯಲ್ಲಿ ವಾಸವಾಗಿದ್ದ ಡ್ನೂಡಿಮ್ ಓಬಿನ್ನಾ ಕಿಂಗ್ಲ್ನೇ (30) ಬಂಧಿತ. ಪಾಸ್ಪೋರ್ಟ್ ಮತ್ತು ವೀಸಾ ಅವಧಿ ಮುಗಿದಿರುವ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿದ್ದು, ಪರಿಶೀಲನೆ ಸಲುವಾಗಿ ಮನೆಗೆ ಹೋದಾಗ ಆರೋಪಿಯ ನಿಜ ಬಣ್ಣ ಬಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನೈಜೀರಿಯಾ ಮೂಲದ ಆರೋಪಿಯು ವ್ಯಾಪಾರದ ವೀಸಾ ಪಡೆದು ಭಾರತಕ್ಕೆ ಬಂದು ಬೆಂಗಳೂರಿನಲ್ಲಿ ನೆಲೆಸಿದ್ದ. ಆದರೆ, ಕಳೆದ ಏಪ್ರಿಲ್ 18 ರಂದು ವೀಸಾ ಅವಧಿ ಮುಗಿದರೂ ಅಕ್ರಮವಾಗಿ ವಾಸವಾಗಿರುವ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಸಬ್ಇನ್ಸ್ಪೆಕ್ಟರ್ ಅಣ್ಣಪ್ಪ ಕಾಗವಾಡ ನೇತೃತ್ವದ ತಂಡ ಆರೋಪಿಯ ಮನೆ ಮೇಲೆ ದಾಳಿ ನಡೆಸಿದಾಗ ಆರೋಪಿ ಲ್ಯಾಪ್ಟಾಪ್ನಲ್ಲಿ ಏನೋ ಕೆಲಸ ಮಾಡುತ್ತಿದ್ದ. ಲ್ಯಾಪ್ಟಾಪ್ ಪರಿಶೀಲನೆ ನಡೆಸಿದಾಗ ಹಣದಾಸೆ ತೋರಿಸಿ ಕಿಡ್ನಿ ಮಾರಾಟ ಮತ್ತು ಕಿಡ್ನಿ ಖರೀದಿಸುವ ಇಮೇಲ್ಗಳನ್ನು ಸಾರ್ವಜನಿಕರಿಗೆ ಕಳುಹಿಸಿರುವುದು ಹಾಗೂ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುತ್ತಿರುವುದು ತಿಳಿದುಬಂತು.
ಈ ಬಗ್ಗೆ ಆರೋಪಿಯನ್ನು ಪ್ರಶ್ನೆ ಮಾಡಿದಾಗ ಕಿಡ್ನಿ ಖರೀದಿ ಮತ್ತು ಕಿಡ್ನಿ ಮಾರಾಟದ ಬಗ್ಗೆ ಜಾಹೀರಾತು ಪ್ರಕಟಿಸುತ್ತೇನೆ. ಕಿಡ್ನಿ ಅಗತ್ಯ ಇರುವವರು ಖರೀದಿಗೆ ಕರೆ ಮಾಡುತ್ತಾರೆ. ಹಣ ಬೇಕಾದವರು ಕಿಡ್ನಿ ಮಾರಾಟಕ್ಕೆ ಕರೆ ಮಾಡುತ್ತಾರೆ. ಒಂದೆಡೆ ಕಿಡ್ನಿ ಕೊಡುವುದಾಗಿ ಹೇಳಿ ಹಣ ಪಡೆದರೆ, ಇನ್ನು ಕಿಡ್ನಿ ದಾನಿಗಳಿಂದ ವೈದ್ಯಕೀಯ ಪರೀಕ್ಷೆ ನೆಪದಲ್ಲಿ ಹಣ ಪಡೆದು ವಂಚನೆ ಮಾಡುತ್ತಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಜೊತೆಗೆ, ವೀಸಾ ಮತ್ತು ಪಾಸ್ಪೋರ್ಟ್ ಪರಿಶೀಲಿಸಿದಾಗ ಅವಧಿ ಮುಗಿದಿರುವುದು ಬೆಳಕಿಗೆ ಬಂದಿದೆ.
ಮನೆಯನ್ನು ಪರಿಶೀಲನೆ ನಡೆಸಿದಾಗ ಕೃತ್ಯಕ್ಕೆ ಬಳಸುತ್ತಿದ್ದ 3 ಲ್ಯಾಪ್ಟಾಪ್, 10 ಮೊಬೈಲ್, 1 ವೈಫೈ ಕನೆಕ್ಟರ್, 1 ಹಾರ್ಡ್ ಡಿಸ್ಕ್, 1 ವೈರಲೆಸ್ ಮೌಸ್ ಪತ್ತೆಯಾಗಿದ್ದು, ಎಲ್ಲವನ್ನೂ ಜಪ್ತಿ ಮಾಡಿಕೊಳ್ಳಲಾಗಿದೆ. ವಂಚನೆ ಮತ್ತು ವಿದೇಶಾಂಗ ಇಲಾಖೆ ಕಾನೂನು ಉಲ್ಲಂಘನೆ ಆರೋಪದ ಮೇಲೆ ಎಫ್ಐಆರ್ ದಾಖಲಿಸಿ ತನಿಖೆ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಬ್ಯಾಂಕ್ ಖಾತೆ ಪರಿಶೀಲನೆ : ಆರೋಪಿ ಎಷ್ಟು ಮಂದಿಗೆ ಕಿಡ್ನಿ ಮತ್ತು ಹಣದಾಸೆ ತೋರಿಸಿ ವಂಚನೆ ಮಾಡಿದ್ದಾನೆ ಎಂಬುದರ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಬ್ಯಾಂಕ್ ಖಾತೆ, ಮೊಬೈಲ್ ಕರೆಗಳು ಮತ್ತು ಇಮೇಲ್ ಪರಿಶೀಲನೆ ನಡೆಸಲಾಗುತ್ತಿದೆ. ನೂರಾರು ಮಂದಿಗೆ ಮೋಸ ಮಾಡಿರುವ ಶಂಕೆ ಇರುವುದಾಗಿ ಪೊಲೀಸರು ತಿಳಿಸಿದ್ದಾರೆ.