

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಆಪ್ತ ಕಾರ್ಯದರ್ಶಿಯಾಗಿ ಐಎಫ್‌ಎಸ್ ಅಧಿಕಾರಿ ನಿಧಿ ತಿವಾರಿ ಅವರನ್ನ ನೇಮಕ ಮಾಡಿ ಸಂಪುಟದ ನೇಮಕಾತಿ ಸಮಿತಿ ಅನುಮೋದನೆ ನೀಡಿದೆ.
ನಿಧಿ ತಿವಾರಿ ಅವರು 2014 ರ ಬ್ಯಾಚ್‌ನ ಭಾರತೀಯ ವಿದೇಶಾಂಗ ಸೇವೆ (ಐಎಫ್‌ಎಸ್) ಅಧಿಕಾರಿಯಾಗಿದ್ದು, ಇದೀಗ ಮೋದಿ ಅವರ 'ಪ್ರೈವೇಟ್ ಸೆಕ್ರೇಟರಿ' ಆಗಿ ನೇಮಕಗೊಂಡಿದ್ದಾರೆ. ಈ ಹಿಂದೆ ಪ್ರಧಾನ ಮಂತ್ರಿ ಕಚೇರಿಯಲ್ಲಿ (ಪಿಎಂಒ) ಉಪ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ಸೂಚನೆಯ ಪ್ರಕಾರ, ಅವರ ನೇಮಕಾತಿಗೆ ಸಂಪುಟದ ನೇಮಕಾತಿ ಸಮಿತಿ ಅನುಮೋದನೆ ನೀಡಿದೆ.
ನಿಧಿ ತಿವಾರಿ ಅವರು 2013 ರ ನಾಗರಿಕ ಸೇವಾ ಪರೀಕ್ಷೆಯಲ್ಲಿ 96 ನೇ ರ‍್ಯಾಂಕ್ ಗಳಿಸಿದ್ದಾರೆ. ಅವರು ವಾರಣಾಸಿಯ ಮೆಹಮುರ್ಗಂಜ್ ಮೂಲದವರಾಗಿದ್ದು, ತಿವಾರಿ ಅವರು ಪ್ರಧಾನಿ ಕಚೇರಿಗೆ ಸೇರುವ ಮೊದಲು ವಿದೇಶಾಂಗ ಸಚಿವಾಲಯದಲ್ಲಿ ಕೆಲ ಕಾಲ ಸೇವೆ ಸಲ್ಲಿಸಿದ್ದರು. ಅವರು ನಿಶ್ಯಸ್ತ್ರೀಕರಣ ಮತ್ತು ಅಂತರರಾಷ್ಟ್ರೀಯ ಭದ್ರತಾ ವ್ಯವಹಾರಗಳ ವಿಭಾಗದಲ್ಲಿ ಸೇವೆ ಪೂರೈಸಿದ್ದಾರೆ.
2013 ರಲ್ಲಿ ನಾಗರಿಕ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೊದಲು, ಅವರು ವಾರಣಾಸಿಯಲ್ಲಿ ಸಹಾಯಕ ಆಯುಕ್ತರಾಗಿ (ವಾಣಿಜ್ಯ ತೆರಿಗೆ) ಕೆಲಸ ಮಾಡುತ್ತಿದ್ದರು ಮತ್ತು ಅದೇ ಸಮಯದಲ್ಲಿ ತಮ್ಮ ಕೆಲಸದ ಜೊತೆಗೆ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು ಎನ್ನಲಾಗಿದೆ.