

ಬೆಂಗಳೂರು: ಕಾಂಗ್ರೆಸ್ ಸರ್ಕಾರ ಅಧಿಕಾರ ಸೂತ್ರ ಹಿಡಿದ ಲಾಗಾಯ್ತು ಪ್ರತಿಪಕ್ಷಗಳು ಒಂದಲ್ಲ ಒಂದು ವಿಷಯ ಕೆದಕಿ ಮುಜುಗರ ಉಂಟು ಮಾಡುವ ಪ್ರಯತ್ನವನ್ನು ನಿರಂತರವಾಗಿ ಮಾಡುತ್ತಲೇ ಇವೆ. ಈ ನಿಟ್ಟಿನಲ್ಲಿ ಅಧಿಕೃತ ಬಿಜೆಪಿಗಿಂತ ಜೆಡಿಎಸ್ ಒಂದು ಕೈ ಮೇಲು. ಕಾಂಗ್ರೆಸ್ ೋಷಿಸಿದ ಗ್ಯಾರಂಟಿ, ವರ್ಗಾವಣೆ ದಂಧೆ, ವಿಧಾನಸಭೆಯಲ್ಲಿ ಸದಸ್ಯರನ್ನು ಅಮಾನತು ಮಾಡಿದ ಪ್ರಕರಣ, ಪ್ರತಿಪಕ್ಷಗಳ ಒಕ್ಕೂಟ ಸಮಾವೇಶಕ್ಕೆ ಶಿಷ್ಟಾಚಾರದ ಹೆಸರಿನಲ್ಲಿ ಐಎಎಸ್ ಅಧಿಕಾರಿಗಳ ಬಳಕೆ ಬಗ್ಗೆ ಪ್ರತಿಪಕ್ಷ ಬಿಜೆಪಿ ಹಾಗೂ ಜೆಡಿಎಸ್ ಬಹು ದೊಡ್ಡ ಸದ್ದು ಮಾಡಿದ್ದವು.
ಈಗ ನೈಸ್ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಲು ಹೋರಾಟಕ್ಕೆ ಭೂಮಿಕೆ ಸಿದ್ಧಪಡಿಸಿವೆ. ಅದಕ್ಕೆ ಪೂರ್ವ ಪೀಠಿಕೆಯಂತೆ ಜೆಡಿಎಸ್ ಕಚೇರಿಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಎಚ್.ಡಿ.ಕುಮಾರಸ್ವಾಮಿ ಜಂಟಿ ಸುದ್ದಿಗೋಷ್ಠಿ ನಡೆಸಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ರಣಕಹಳೆ ಮೊಳಗಿಸಿದ ದೇವೇಗೌಡ:
ಈ ಮಧ್ಯೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಕೂಡ ನೈಸ್ ವಿರುದ್ಧ ಹೋರಾಟದ ರಣಕಹಳೆ ಮೊಳಗಿಸಿದ್ದಾರೆ. 2016ರಲ್ಲೂ ದೇವೇಗೌಡರು ನೈಸ್ ವಿರುದ್ಧ ದೊಡ್ಡ ಮಟ್ಟದ ಹೋರಾಟ ಮಾಡಿ ಗಮನ ಸೆಳೆದಿದ್ದರು. ಈಗ ಮತ್ತೆ ನೈಸ್ ಹಿಂದೆ ಬಿದಿದ್ದಾರೆ. ಸುದ್ದಿಗೋಷ್ಠಿ ನಡೆಸಿ ಸರ್ಕಾರ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಗುಟುರು ಹಾಕಿದ್ದಾರೆ. ಈ ಯೋಜನೆಯಿಂದ ರೈತರಿಗೆ ಅನ್ಯಾಯವಾಗಿದ್ದು, ಹೆಚ್ಚುವರಿ ಭೂಮಿ ವಶಪಡಿಸಿಕೊಳ್ಳಬೇಕು. ಅದರಿಂದ ಬರುವ ಆದಾಯವನ್ನು ಸರ್ಕಾರ ತನ್ನ ಗ್ಯಾರಂಟಿಗಳಿಗೆ ಬಳಸಿಕೊಳ್ಳಬೇಕು ಎಂದು ಕಿವಿ ಮಾತು ಕೂಡ ಹೇಳಿದ್ದಾರೆ.
ನಾವೇನು ಕೈ ಕಟ್ಟಿ ಹಾಕಿದ್ದೇವಾ?:
ಪ್ರತಿಪಕ್ಷಗಳ ಆಗ್ರಹಕ್ಕೆ ಅಷ್ಟೇ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ನೈಸ್ ಯೋಜನೆ ದೇವೇಗೌಡರ ಕಾಲದಲ್ಲೇ ಆಗಿದ್ದು, ಬಳಿಕ ಕುಮಾರಸ್ವಾಮಿ ಸಿಎಂ ಆಗಿದ್ದರು. ಆಗ ಏಕೆ ಕ್ರಮ ಕೈಗೊಳ್ಳಲಿಲ್ಲ? ನಾವೇನು ತನಿಖೆ ಮಾಡಿಸಬೇಡಿ ಎಂದು ಕೈ ಕಟ್ಟಿ ಹಾಕಿದ್ದೇವಾ? ಎಂದು ಕುಟುಕಿದ್ದಾರೆ. ಇದು ಈಗ ದೇವೇಗೌಡರನ್ನು ಕೆರಳಿಸಿದೆ. ಅವರು ಈಗ ಈ ಹಗರಣವನ್ನು ಮುಂದಿಟ್ಟು ಹೋರಾಟಕ್ಕಿಳಿಯುವ ಮೂಲಕ ಸರ್ಕಾರವನ್ನು ಮುಜುಗರಕ್ಕೀಡು ಮಾಡಲು ಕಾರ್ಯತಂತ್ರ ರೂಪಿಸಿದ್ದಾರೆ.
ನೈಸ್ ಹಗರಣಕ್ಕೆ ಜೀವ ಬೆದರಿಕೆ:
ನೈಸ್ ಹಗರಣಕ್ಕೆ ಸಂಬಂಧಿಸಿದಂತೆ 2016ರಲ್ಲಿ ವರದಿ ನೀಡಿದ್ದ ಟಿ.ಬಿ.ಜಯಚಂದ್ರ ಈಗ ಮತ್ತೆ ಈ ವಿಷಯ ಕೆದಕಿದ್ದಾರೆ. ಅದಕ್ಕೆ ಅವರಿಗೆ ಜೀವ ಬೆದರಿಕೆ ಕರೆ ಬಂದಿವೆ. ಇದನ್ನೇ ಜೆಡಿಎಸ್, ಬಿಜೆಪಿ ಈಗ ಅಸ ಮಾಡಿಕೊಂಡು ಸರ್ಕಾರದ ವಿರುದ್ಧ ಮುಗಿ ಬೀಳಲು ತಂತ್ರಗಾರಿಕೆ ರೂಪಿಸುತ್ತಿವೆ.
ಮಾಜಿ ಸಿಎಂ ಕುಮಾರಸ್ವಾಮಿ ವಿದೇಶ ಪ್ರವಾಸದಿಂದ ಹಿಂದಿರುಗಿದ ಕೂಡಲೇ ದೇವೇಗೌಡರ ನೇತೃತ್ವದಲ್ಲಿ ಮತ್ತೊಂದು ಸುತ್ತಿನ ಸಮರಕ್ಕೆ ಜೆಡಿಎಸ್ ಸಿದ್ಧತೆ ನಡೆಸಿದೆ. ಸಿಬಿಐ ತನಿಖೆಗೆ ಆಗ್ರಹಿಸಿರುವ ಪ್ರತಿಪಕ್ಷಗಳು ಈ ವಿಷಯನ್ನು ಜನರ ಮುಂದೆ ಕೊಡೊಂಯ್ಯಲು ತಯಾರಿ ನಡೆಸಿವೆ. ಈ ಹೋರಾಟದ ಕ್ರೆಡಿಟ್ ಪಡೆದುಕೊಳ್ಳಲು ಬಿಜೆಪಿ ತಮ್ತು ಜೆಡಿಎಸ್ ಎರಡೂ ಪಕ್ಷಗಳು ತುದಿಗಾಲ ಮೇಲೆ ನಿಂತಿದ್ದು ಯಾರು ಯಾವ ತಂತ್ರ ಅನುಸರಿಸುತ್ತಾರೆ ಎಂಬುದು ಕುತೂಹಲಕಾರಿಯಾಗಿದೆ.