ಸಾಹಿತ್ಯ ಎಲ್ಲ ಓದುಗರ ಗಮನ ಸೆಳೆಯಲಿ; ಆನಂದ ಪಾಟೀಲ

21-RNR-05
Published on

ಹಾವೇರಿ: ಮಕ್ಕಳ ಸಾಹಿತ್ಯ ಕೇವಲ ಮಕ್ಕಳಿಗಷ್ಟೇ ಸೀಮಿತಗೊಳಿಸುವ ಪರದೆಯಿಂದ ಓದುಗರು ಹೊರಬರಬೇಕಿದೆ ಎಂದು ಸಾಹಿತಿ ಆನಂದ ಪಾಟೀಲ ಹೇಳಿದರು.
ನಗರದ ನೈಸ್ ಅಕಾಡೆಮಿಯಲ್ಲಿ ಭಾನುವಾರ ಸಾಹಿತಿ ಕಲಾವಿದರ ಬಳಗ ಹಾಗೂ ಕಸ್ತೂರಿ ಪ್ರಕಾಶನ ತಂಗೋಡ ಸಹಯೋಗದಲ್ಲಿ ಏರ್ಪಡಿಸಿದ್ದ ಮಕ್ಕಳ ಕಾದಂಬರಿ ಬೆರಗು ಎಂಬ ಕಾದಂಬರಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಮಕ್ಕಳ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಚರ್ಚೆ, ಸಂವಾದಗಳು ಗಾಂಭೀರ್ಯತೆ ಪಡೆಯಬೇಕಿದೆ. ಮಕ್ಕಳ ಸಾಹಿತ್ಯ ಕ್ಷೀಣಿಸುತ್ತಿರುವ ಸಂದರ್ಭದಲ್ಲಿ ಲೇಖಕ ನಾಗರಾಜ ಹುಡೇದ ಬಾಲ್ಯಕ್ಕೆ ತನ್ನನ್ನು ಅರ್ಪಿಸಿಕೊಂಡು ಅನುಭವ ಕಥನ ರೂಪದಲ್ಲಿ ಬರೆದ ಬೆರಗು ಮಕ್ಕಳ ಕಾದಂಬರಿ ಸಾಹಿತ್ಯ ವಲಯದಲ್ಲಿ ವಿನೂತನ ಆಶಯಗಳನ್ನು ಸೃಜಿಸಿದೆ ಎಂದರು.
ಮಕ್ಕಳು ಕಾಡು ಮೇಡು ಸುತ್ತುತ್ತ ಹಿರಿಯರ ಜತೆಗೆ ಬೆರೆಯುವ ಆಪ್ತತೆ ನಿರೂಪಣೆ ಶೈಲಿಯಲ್ಲಿ ಸೊಗಸಾಗಿ ಮೂಡಿ ಬಂದಿದೆ. ಸಾಹಿತ್ಯ ರಚಿಸಿ ಪ್ರಕಟಿಸುವುದು ಕಷ್ಟದ ಕೆಲಸ. ಮಾರುಕಟ್ಟೆಯ ಪೈಪೋಟಿ ಸಂದರ್ಭದಲ್ಲಿ ಬೆರಗು ಮಕ್ಕಳ ಕಾದಂಬರಿ ಆಪ್ತ ಭಾವ ಮೂಡಿಸುತ್ತದೆ ಎಂದರು.
ಹಿರಿಯ ಸಾಹಿತಿ ಸತೀಶ ಕುಲಕರ್ಣಿ ಮಾತನಾಡಿ, ಸಾಹಿತಿಗಳಾದ ಪಿ. ಲಂಕೇಶ್, ಯು.ಆರ್. ಅನಂತಮೂರ್ತಿ, ಶಿವರಾಂ ಕಾರಂತ ಅವರು ಕನ್ನಡ ಸಾಹಿತ್ಯದಲ್ಲಿ ತಮ್ಮದೆ ಬಾಲ್ಯವನ್ನು ನೆನಪಿಸುವ ಸಂಗತಿಗಳನ್ನು ಕಟ್ಟಿಕೊಟ್ಟಿದ್ದಾರೆ. ಅಂಥ ಮೇರು ಹಿನ್ನೆಲೆ ಇರುವ ಮಕ್ಕಳ ಸಾಹಿತ್ಯಕ್ಕೆ ಹೊಸತನ ಮತ್ತು ಆಧುನಿಕತೆ ಮೂಡಿಸುವ ಮನೋಭಾವಕ್ಕೆ ಇಳಿದು ಬರೆಯುವುದು ಸವಾಲಿನ ಕೆಲಸ. ಆದರೆ, ಲೇಖಕ ನಾಗರಾಜ ಹುಡೇದ ಅವರು ತಮ್ಮ ಬಾಲ್ಯದ ಅನುಭವಗಳನ್ನು ಗಟ್ಟಿಗೊಳಿಸಿ ಬೆರಗು ರೂಪದಲ್ಲಿ ಕಟ್ಟಿಕೊಡುವ ಮೂಲಕ ಮಕ್ಕಳ ಸಾಹಿತ್ಯಕ್ಕೆ ಮಾದರಿಯಾಗಿದ್ದಾರೆ ಎಂದರು.
ನಿಂಗರಾಜು ಸುಳ್ಳಳ್ಳಿ ಅಧ್ಯಕ್ಷತೆ ವಹಿಸಿದ್ದರು. ಲೇಖಕಿ ಅನಿತಾ ಹರನಗಿರಿ ಕೃತಿ ವಿಶೇಷ ಕುರಿತು ವಿವರಿಸಿದರು.
ಸಾಕ್ಷ್ಯಚಿತ್ರ ನಿರ್ದೇಶಕ ಗೂಳಪ್ಪ ಅರಳಿಕಟ್ಟಿ, ಎಸ್.ಆರ್. ಹಿರೇಮಠ, ಚಂದ್ರಶೇಖರ ಮಾಳಗಿ, ಈರಣ್ಣ ಬೆಳವಡಿ, ರೇಣುಕಾ ಗುಡಿಮನಿ, ಜುಬೇದಾ ನಾಯಕ್, ನೇತ್ರಾವತಿ ಅಂಗಡಿ, ಅಕ್ಕಮಹಾದೇವಿ ಹಾನಗಲ್ಲ, ಗೀತಾ ಸುತ್ತಕೋಟಿ, ಬಿ.ಎಂ. ಅಂಗಡಿ, ಟಿ.ಜೆ. ಬಡಪ್ಪನವರ, ಎಸ್.ಬಿ. ಬೆಳ್ಳಟ್ಟಿಮಠ ಮತ್ತಿತರರಿದ್ದರು.
ಶಂಕರ ಬಡಿಗೇರ ಸ್ವಾಗತಿಸಿದರು. ಪೃಥ್ವಿರಾಜ ಬೆಟಗೇರಿ ಹಾಗೂ ಕಲವೀರೇಶ ಸೊರಬದ ನಿರೂಪಿಸಿದರು. ಸೋಮನಾಥ ಡಿ. ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net