ಅಮರಾವತಿ ವ್ಯಾಪಾರಿ ಹತ್ಯೆ ಪ್ರಕರಣದ ಮಾಸ್ಟರ್​ ಮೈಂಡ್​ ಬಂಧನ: ಎನ್​ಐಎ ತನಿಖೆ ಮತ್ತಷ್ಟು ಚುರುಕು

Amaravtimastermind
Published on

‌ಮುಂಬೈ: ನೂಪುರ್ ಶರ್ಮಾ ಹೇಳಿಕೆಯನ್ನು ಬೆಂಬಲಿಸಿ ಪೋಸ್ಟ್​ ಹಾಕಿ ಹತ್ಯೆಯಾದ ಔಷಧ ವ್ಯಾಪಾರಿ ಉಮೇಶ್​ ಕೊಲ್ಹೆ ಪ್ರಕರಣದ ಪ್ರಮುಖ ಆರೋಪಿಯನ್ನು ಬಂಧಿಸಲಾಗಿದೆ.ತಲೆಮರೆಸಿಕೊಂಡಿದ್ದ ಸ್ಥಳೀಯ ನಿವಾಸಿಯಾಗಿರುವ ಪ್ರಮುಖ ಆರೋಪಿ ಇರ್ಫಾನ್​ ಖಾನ್​ (32) ನನ್ನು ನಾಗ್ಪುರದಲ್ಲಿ ಅಮರಾವತಿ ನಗರ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ಪ್ರಕರಣದಲ್ಲಿ ಇದು 7ನೇ ಬಂಧನವಾಗಿದೆ. ಟೈಲರ್ ಕನ್ಹಯ್ಯ ಲಾಲ್ ಹತ್ಯೆಗೂ ಮುನ್ನವೇ ಈ ಕೊಲೆ ನಡೆದಿದ್ದು, ಇಬ್ಬರಿಗೂ ಒಂದೇ ಮಾದರಿಯಲ್ಲಿ ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ. ಸದ್ಯ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಕೇಂದ್ರ ಗೃಹ ಸಚಿವರು ತನಿಖೆಗಾಗಿ ಎನ್​ಐಎಗೆ ಒಪ್ಪಿಸಿದ್ದಾರೆ.

ಪೂರ್ವ ಮಹಾರಾಷ್ಟ್ರದ ಅಮರಾವತಿಯಲ್ಲಿ ಔಷಧ ವ್ಯಾಪಾರಿ ಉಮೇಶ್‌ ಕೊಲ್ಹೆ ಅವರು ನೂಪುರ್ ಶರ್ಮಾ ಅವರನ್ನು ಬೆಂಬಲಿಸಿದ ಸಾಮಾಜಿಕ ಮಾಧ್ಯಮ ಪೋಸ್ಟ್‌ ಹಾಕಿದ್ದರು. ಇದೇ ಕಾರಣಕ್ಕೆ ಅಮರಾವತಿಯ ಶ್ಯಾಮ್ ಚೌಕ್ ಪ್ರದೇಶದ ಘಂಟಾಘರ್ ಬಳಿ ಜೂನ್ 21 ರಂದು ರಾತ್ರಿ 10.30 ರ ಸುಮಾರಿಗೆ ಕೊಲ್ಹೆ ಅವರನ್ನು ಇರಿದು ಹತ್ಯೆ ಮಾಡಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮುದಸ್ಸರ್ ಅಹಮದ್ ಅಲಿಯಾಸ್ ಸೋನು ರಜಾ ಶೇಖ್ ಇಬ್ರಾಹಿಂ (22), ಶಾರುಖ್ ಪಠಾಣ್ ಅಲಿಯಾಸ್ ಬಾದಶಾ ಹಿದಾಯತ್ ಖಾನ್ (25), ಅಬ್ದುಲ್ ತೌಫಿಕ್ ಅಲಿಯಾಸ್ ನಾನು ಶೇಖ್ ತಸ್ಲೀಂ (24), ಶೋಬ್ ಖಾನ್ ಅಲಿಯಾಸ್ ಭೂರ್ಯ ಸಬೀರ್ ಖಾನ್ (22), ಅತೀಬ್ ರಶೀದ್ ಆದಿಲ್ ರಶೀದ್ (22) ಮತ್ತು ಯೂಸುಫ್ ಖಾನ್ ಬಹದ್ದೂರ್ ಖಾನ್ (44) ಎಂಬುವವರನ್ನು ಬಂಧಿಸಿದ್ದರು. ಹತ್ಯೆಗೂ ಮೂರು ದಿನಗಳ ಮೊದಲು ಆರೋಪಿಗಳು ಕೊಲ್ಹೆಯವರ ಚಲನವಲನಗಳನ್ನು ಗಮನಿಸಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net