ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಎಫ್‌ಐಆರ್ ದಾಖಲಿಸಿದ ಎನ್‌ಐಎ

NIA symbol
Published on

ಮಂಗಳೂರು: ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಬಗ್ಗೆ ರಾಷ್ಟ್ರೀಯ ತನಿಖಾ ಏಜೆನ್ಸಿ (ಎನ್‌ಐಎ) ನವದೆಹಲಿಯಲ್ಲಿ ಎಫ್‌ಐಆರ್ ದಾಖಲಿಸಿದೆ. ಈ ಪ್ರಕರಣದ ತನಿಖೆಗೆ ಎನ್‌ಐಎ ಬೆಂಗಳೂರು ಇನ್‌ಸ್ಪೆಕ್ಟರ್ ಷಣ್ಮುಗಂ ಅವರನ್ನು ತನಿಖಾಧಿಕಾರಿಯಾಗಿ ನೇಮಕ ಮಾಡಿದೆ.


ಬೆಳ್ಳಾರೆಯಲ್ಲಿ ಚಿಕನ್ ಶಾಪ್ ಹೊಂದಿದ್ದ ಪ್ರವೀಣ್ ನೆಟ್ಟಾರನ್ನು ಜು.26ರ ರಾತ್ರಿ ವೇಳೆ ಬೈಕ್‌ನಲ್ಲಿ ಬಂದ ಮೂವರು ದುಷ್ಕರ್ಮಿಗಳು ತಲವಾರು ದಾಳಿ ನಡೆಸಿ ಪರಾರಿಯಾಗಿದ್ದರು. ಗಂಭೀರ ಸ್ಥಿತಿಯಲ್ಲಿದ್ದ ಪ್ರವೀಣ್ ನೆಟ್ಟಾರು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿದ್ದರು. ರಾಜ್ಯ ಸರ್ಕಾರಕ್ಕೆ ಸವಾಲಾದ ಈ ಪ್ರಕರಣದಲ್ಲಿ ಮತೀಯ ಶಕ್ತಿಗಳ ಕೈವಾಡ ಶಂಕೆ ಮೇರೆಗೆ ಇದನ್ನು ಎನ್‌ಐಎ ತನಿಖೆಗೆ ವಹಿಸುವಂತೆ ಬಿಜೆಪಿ ಕಾರ್ಯಕರ್ತರು ಹಾಗೂ ಹಿಂದೂ ಸಂಘಟನೆಗಳಿಂದ ಬಲವಾದ ಆಗ್ರಹ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಎನ್‌ಐಎ ತನಿಖೆ ನಡೆಸುವಂತೆ ಕೇಂದ್ರ ಗೃಹ ಇಲಾಖೆಗೆ ಶಿಫಾರಸು ಮಾಡಿತ್ತು.


ರಾಜ್ಯ ಸರ್ಕಾರ ಶಿಫಾರಸು ಮಾಡಿದ ಎರಡನೇ ದಿನದಲ್ಲಿ ಎನ್‌ಐಎ ಅಧಿಕಾರಿಗಳ ತಂಡ ಬೆಳ್ಳಾರೆಗೆ ಆಗಮಿಸಿ ಪ್ರಾಥಮಿಕ ತನಿಖೆ ಕೈಗೆತ್ತಿಕೊಂಡಿತ್ತು. ಇದೇ ವೇಳೆ ದ.ಕ.ಪೊಲೀಸರು ಪ್ರವೀಣ್ ಹತ್ಯೆಗೆ ಸಂಚು ರೂಪಿಸಿದ ಆರೋಪದಲ್ಲಿ ಏಳು ಮಂದಿಯನ್ನು ಬಂಧಿಸಿದ್ದರು. 15 ದಿನಗಳ ಕಾರ್ಯಾಚರಣೆ ಬಳಿಕ ಪ್ರಮುಖ ಆರೋಪಿಗಳಾದ ಸುಳ್ಯದ ಶಿಹಾಬುದ್ದೀನ್, ರಿಯಾಜ್ ಅಂಕತ್ತಡ್ಕ ಮತ್ತು ಬಶೀರ್ ಎಲಿಮಲೆ ಎಂಬವರನ್ನು ಬಂಧಿಸಲಾಗಿತ್ತು. ಪ್ರಕರಣದಲ್ಲಿ ಒಟ್ಟು 10 ಮಂದಿಯ ಬಂಧನವಾಗಿದೆ.


ಕೇಂದ್ರ ಗೃಹ ಇಲಾಖೆ ಆ.3ರಂದು ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಅಧಿಕೃತವಾಗಿ ಪ್ರವೀಣ್ ಹತ್ಯೆ ಕೇಸಿನ ತನಿಖೆ ಎನ್‌ಐಎ ಗೆ ಹಸ್ತಾಂತರವಾಗಲಿದೆ. ಸುಮಾರು ಎರಡು ವಾರಗಳ ಕಾಲ ದ.ಕ.ಜಿಲ್ಲೆಯಲ್ಲಿ ಪ್ರಾಥಮಿಕ ತನಿಖೆ ಕೈಗೆತ್ತಿಕೊಂಡ ಎನ್‌ಐಎ ತಂಡ ಇನ್ನು ಕೂಲಂಕಷವಾಗಿ ತನಿಖೆ ನಡೆಸಲಿದೆ. ಜಿಲ್ಲೆಯ ಪೊಲೀಸರು ಪೂರಕ ಸಹಕಾರ ನೀಡಲಿದ್ದಾರೆ. ಘಟನೆಗೆ ಸಂಬಂಧಿಸಿ ಜು.27ರಂದು ಬೆಳ್ಳಾರೆ ಪೊಲೀಸರು ದಾಖಲಿಸಿದ ಪ್ರಾಥಮಿಕ ಎಫ್‌ಐಆರ್(ಐಪಿಸಿ 1860ರಂತೆ ಸೆಕ್ಷನ್ 120 ಬಿ, 302, ಆರ್/ಡಬ್ಲೂೃ 34 ಹಾಗೂ ಕಾನೂನು ಬಾಹಿರ ಚಟುವಟಿಕೆ ಕಾಯ್ದೆ 1967ರನ್ವಯ ಸೆಕ್ಷನ್ 16 ಮತ್ತು 18) ಮುಂದಿಟ್ಟುಕೊಂಡು ಎನ್‌ಐಎ ದೆಹಲಿ ಎಸ್ಪಿ ಅವರು ಎನ್‌ಐಎ ಕಾಯ್ದೆ 2008ರ ಪ್ರಕಾರ ಆ.4ರಂದೇ ಪ್ರತ್ಯೇಕ ಕೇಸು(ಆರ್‌ಸಿ-36/2022/ಎನ್‌ಐಎ/ಡಿಎಲ್‌ಐ) ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net