ಪಾಕ್​ ಬೆಂಬಲಿತ ಘಜ್ವಾ-ಎ-ಹಿಂದ್ ಮಾದರಿ ಸಂಘಟನೆ ಪ್ರಕರಣ: ದೇಶದ ಹಲವೆಡೆ ಎನ್​ಐಎ ದಾಳಿ, ಅನುಮಾನಾಸ್ಪದ ವಸ್ತುಗಳು ವಶಕ್ಕೆ

NIA (1)
Published on

ದೆಹಲಿ: ಪಾಕಿಸ್ತಾನ ಮೂಲದ ಶಂಕಿತರು ನಡೆಸುತ್ತಿರುವ 'ಘಜ್ವಾ-ಎ-ಹಿಂದ್' ಎಂಬ ಮಾದರಿ ಸಂಘಟನೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಭಾನುವಾರ ಮೂರು ರಾಜ್ಯಗಳಲ್ಲಿ ದಾಳಿ ನಡೆಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 5 ಕಡೆಗಳಲ್ಲಿ ಎನ್​​​ಐಎ ದಾಳಿ ನಡೆಸಿದ್ದು, ಬಿಹಾರದ ಪಾಟ್ನಾ ಮತ್ತು ದರ್ಬಂಗಾದಲ್ಲಿ, ಗುಜರಾತ್​​​ನ ಸೂರತ್​​ನಲ್ಲಿ ಮತ್ತು ಉತ್ತರ ಪ್ರದೇಶದ ಬರೇಲಿಯಲ್ಲಿ ಎನ್​ಐಎ ದಾಳಿ ನಡೆಸಿದೆ. ಈ ಸಮಯದಲ್ಲಿ ಮೊಬೈಲ್ ಫೋನ್‌ಗಳು, ಮೆಮೊರಿ ಕಾರ್ಡ್‌ಗಳು, ಸಿಮ್ ಕಾರ್ಡ್‌ಗಳು ಮತ್ತೀತರ ಡಿಜಿಟಲ್ ಸಾಧನ ಸೇರಿದಂತೆ ಹಲವು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ: ನುಡಿದಂತೆ ನಡೆದ ಸಿಎಂ ಅಂದ್ರೆ ಅದು ಸಿದ್ದರಾಮಯ್ಯ: ಶಾಸಕ ಎಸ್.ಟಿ. ಸೋಮಶೇಖರ್

ಕಳೆದ ವರ್ಷ ಜುಲೈ 14 ರಂದು ಬಿಹಾರ ಪೊಲೀಸರು ಪಾಟ್ನಾದ ಫುಲ್ವಾರಿ ಷರೀಫ್ ಪ್ರದೇಶದ ಮಾರ್ಗೂಬ್ ಅಹ್ಮದ್ ದಾನಿಶ್ ಅಲಿಯಾಸ್ ತಾಹಿರ್​​ನನ್ನು ಬಂಧಿಸಿದ ನಂತರ ಈ ಕುರಿತು ಪ್ರಕರಣವನ್ನು ದಾಖಲಿಸಿದ್ದರು. ನಂತರ ಎನ್‌ಐಎ ಈ ಪ್ರಕರಣವನ್ನು ಕೈಗೆತ್ತಿಕೊಂಡು ಐಪಿಸಿ ಮತ್ತು ಯುಎ (ಪಿ) ಆಕ್ಟ್, 1967 ರ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಜನೇವರಿ 6ರಂದು ಆರೋಪಪಟ್ಟಿ ಸಲ್ಲಿಸಿತ್ತು.

ಆರೋಪಿಯು, ಪಾಕ್ ಮೂಲದ ಅನುಮಾನಾಸ್ಪದ ವ್ಯಕ್ತಿಗಳು ನಡೆಸುತ್ತಿದ್ದ ಘಜ್ವಾ-ಎ-ಹಿಂದ್ ಘಟಕದ ಸದಸ್ಯ ಎಂದು ತಿಳಿದುಬಂದಿದ್ದು, ಇದರ ಸ್ಥಾಪನೆಗಾಗಿ ಇತರ ಯುವಕರನ್ನು ಸೇರ್ಪಡೆಗೊಳಿಸುವ ಉದ್ದೇಶವನ್ನು ಹೊಂದಿದ್ದನು.

ಇದನ್ನೂ ಓದಿ: ಬೆಂಗಳೂರಲ್ಲಿ ರಾಷ್ಟ್ರೀಯ ರ‍್ಯಾಲಿ ಸ್ಪ್ರಿಂಟ್: ಭಾರತದ ಅಗ್ರ ಬೈಕರ್‌ಗಳು ಸೇರಿ120 ಮಂದಿ ಭಾಗಿ

ಅಲ್ಲದೆ, ಝೈನ್ ಎಂಬ ಪಾಕಿಸ್ತಾನಿ ಪ್ರಜೆ ರಚಿಸಿದ 'ಘಜ್ವಾ-ಎ-ಹಿಂದ್' ಎಂಬ ವಾಟ್ಸಾಪ್ ಗ್ರೂಪ್‌ನ ಅಡ್ಮಿನ್ ಮಾರ್ಗೂಬ್ ಎಂದು ತನಿಖೆಯಿಂದ ತಿಳಿದುಬಂದಿದ್ದು, ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ದೇಶದಲ್ಲಿ ಸ್ಲೀಪರ್ ಸೆಲ್‌ಗಳನ್ನು ಸ್ಥಾಪಿಸುವ ಉದ್ದೇಶದಿಂದ ಈ ದುಷ್ಕರ್ಮಿಗಳು ಅನೇಕ ಭಾರತೀಯರು, ಪಾಕಿಸ್ತಾನಿಗಳು, ಬಾಂಗ್ಲಾದೇಶಿಗಳು ಮತ್ತು ಯೆಮೆನ್ ಪ್ರಜೆಗಳನ್ನು ಈ ಗುಂಪಿಗೆ ಸೇರಿಸಿದ್ದರು.

ಆರೋಪಿಗಳು 'ಘಜ್ವಾ-ಎ-ಹಿಂದ್' ಎಂಬ ಗ್ರೂಪ್​ಗಳನ್ನು ವಾಟ್ಸಾಪ್, ಟೆಲಿಗ್ರಾಮ್ ಮತ್ತು ಬಿಪಿ ಮೆಸೆಂಜರ್‌ನಲ್ಲಿ ರಚಿಸಿದ್ದರು. ಜತೆಗೆ ‘ಬಿ.ಡಿ.ಘಜ್ವಾ ಇ ಹಿಂದ್ ಬಿ.ಡಿ.’ ಹೆಸರಿನಲ್ಲಿ ಮತ್ತೊಂದು ವಾಟ್ಸಾಪ್ ಗ್ರೂಪ್ ಕ್ರಿಯೇಟ್ ಮಾಡಿ ಅದಕ್ಕೆ ಬಾಂಗ್ಲಾದೇಶಿ ಪ್ರಜೆಗಳನ್ನು ಸೇರಿಸಿದ್ದರು.
ಪ್ರಕರಣದಲ್ಲಿ ಭಾಗಿಯಾಗಿರುವ ವಿವಿಧ ಶಂಕಿತರು ಪಾಕಿಸ್ತಾನ ಮೂಲದ ಹಲವರೊಂದಿಗೆ ಸಂಪರ್ಕದಲ್ಲಿದ್ದುಕೊಂಡು ಘಜ್ವಾ-ಎ-ಹಿಂದ್​​ನ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಕುರಿತಾದ ಎನ್‌ಐಎ ತನಿಖೆ ಪ್ರಗತಿಯಲ್ಲಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net