

ರಾಷ್ಟ್ರೀಯ ತನಿಖಾ ದಳವು (ಎನ್ಐಎ) ದಕ್ಷಿಣ ಕನ್ನಡ ಜಿಲ್ಲೆಯ 16 ಕಡೆಗಳಲ್ಲಿ ಬುಧವಾರ ದಾಳಿ ನಡೆಸಿದ ಬೆನ್ನಲ್ಲೇ, ನಿಷೇಧಿತ ಪಿಎಫ್ಐ ಸಂಘಟನೆ ಜತೆ ಸಂಪರ್ಕ ಹೊಂದಿರುವ ವ್ಯಕ್ತಿಗಳು ಸೋಷಿಯಲ್ ಮೀಡಿಯಾದಲ್ಲಿ ಪ್ರತ್ಯೇಕ ಚಾನಲ್ಗಳನ್ನು ನಡೆಸುತ್ತಿರುವ ವಿಚಾರ ತನಿಖೆಯಲ್ಲಿ ಬಹಿರಂಗವಾಗಿದೆ. ಕೋಮು ಸಂಘರ್ಷಕ್ಕೆ ಪ್ರಚೋದನೆ ನೀಡುವಂತಹ ವಿಡಿಯೋಗಳನ್ನು ಹರಿಬಿಡುತ್ತಿದ್ದ ವಿಚಾರ ಬಯಲಾಗಿದೆ. ಕೋಮು ದಳ್ಳುರಿ ಹುಟ್ಟಿಹಾಕುವ ಮೂಲಕ ಭಯೋತ್ಪಾದನೆ ಚಟುವಟಿಕೆಗಳನ್ನು ಹರಡಲು ಸಾಮಾಜಿಕ ಮಾಧ್ಯಮ ದುರ್ಬಳಕೆ ಆಗುವುದನ್ನು ನಿಯಂತ್ರಿಸಲು ನಿರಂತರ ಕಣ್ಗಾವಲು ಇಡುವಂತಹ ವ್ಯವಸ್ಥೆಯ ಅಗತ್ಯವನ್ನು ಈ ಪ್ರಕರಣ ಸೂಚಿಸುತ್ತದೆ.
2022ರ ಜುಲೈನಲ್ಲಿ ಬಿಹಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮದ ವೇಳೆ ಅವರ ಹತ್ಯೆಗೆ ಸಂಚು ರೂಪಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಎನ್ಐಎ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಬಿಹಾರದ ಫುಲ್ವಾರಿ ಶರೀಫ್ಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ನಿಷೇಧಿತ ಪಿಎಫ್ಐ ನಡೆಸುತ್ತಿದ್ದ ಹಲವು ಕೃತ್ಯಗಳಿಗೆ ಸಂಬಂಧಿಸಿದಂತೆ ಎನ್ಐಎ ಕಳೆದ ವರ್ಷದಿಂದಲೇ ವಿಚಾರಣೆ ನಡೆಸುತ್ತಿತ್ತು. ಇದರ ಮುಂದುವರಿದ ಭಾಗವಾಗಿ ಈ ದಾಳಿ ನಡೆದಿದ್ದು, ಪುತ್ತೂರಿನ ನಾಲ್ವರನ್ನು ಬಂಧಿಸಿರುವ ಮಾಹಿತಿ ಇದೆ.
ಭಯೋತ್ಪಾದಕ ಕೃತ್ಯಕ್ಕೆ ಗಲ್ಪ್ ರಾಷ್ಟ್ರಗಳಿಂದ ಹವಾಲಾ ಮೂಲಕ ರವಾನೆಯಾದ ಹಣ ಬಳಕೆ ಸಂಶಯವೂ ವ್ಯಕ್ತವಾಗಿದೆ. ಡಿಜಿಟಲ್ ರೂಪದಲ್ಲಿ ಹಣ ವರ್ಗಾವಣೆ ಮಾಡಿದ್ದಕ್ಕೆ ಸಂಬಂಧಿಸಿದ ಉಪಕರಣಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಕರ್ನಾಟಕ, ಕೇರಳ ಹಾಗೂ ಬಿಹಾರ ಸೇರಿದಂತೆ 85 ಸ್ಥಳಗಳಲ್ಲಿ ಎನ್ಐಎ ಪರಿಶೀಲನೆ ನಡೆಸಿದೆ. ಪಿಎಫ್ಐ ಜತೆ ನಂಟಿರುವುದಕ್ಕೆ ಡಿಜಿಟಲ್ ಸಾಕ್ಷ್ಯಗಳು ಕೂಡ ಲಭ್ಯವಾಗಿವೆ. ಈ ಎಲ್ಲ ಸಂಗತಿಗಳನ್ನು ಅವಲೋಕಿಸಿದಾಗ, ಕರ್ನಾಟಕ ಕರಾವಳಿ ತೀರ ಪ್ರದೇಶದಲ್ಲಿ ಭಯೋತ್ಪಾದನೆ ಚಟುವಟಿಕೆಗಳು ಹೆಚ್ಚುತ್ತಿವೆಯೇ ಎಂಬ ಅನುಮಾನ ಸಹಜವಾಗಿಯೇ ಮೂಡುತ್ತದೆ.
ಪಾಟ್ನಾದಲ್ಲಿ ಕಳೆದ ವರ್ಷ ಜುಲೈ ತಿಂಗಳಿನಲ್ಲಿ ಪುಲ್ವಾರಿ ಶರೀಫ್ಗೆ ಸಂಬಂಧಿಸಿದ ಪ್ರಕರಣ ಪತ್ತೆಯಾದ ನಂತರ ಎನ್ಐಎ ಅಧಿಕಾರಿಗಳ ತಂಡವು ಕಳೆದ ಮಾರ್ಚ್ 6ರಂದು ಕೂಡ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ನಂದಾವರದಲ್ಲಿ ದಾಳಿ ನಡೆಸಿತ್ತು. ಈ ಸಂದರ್ಭ ವಶಕ್ಕೆ ಪಡೆದುಕೊಂಡ ಮೂವರು ಸೇರಿ ಐವರನ್ನು ಪಿಎಫ್ಐಗೆ ಹವಾಲಾ ಫಂಡಿಂಗ್ ನಡೆಸುತ್ತಿದ್ದ ಆರೋಪದಲ್ಲಿ ಬಂಧಿಸಲಾಗಿತ್ತು. ಮಂಗಳೂರಿನಲ್ಲಿ ಕಳೆದ ನವೆಂಬರ್ನಲ್ಲಿ ಆಟೋ ರಿಕ್ಷಾದಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಮೂಲದ ಶಂಕಿತ ಉಗ್ರ ಶಾರಿಕ್ ಎಂಬಾತನನ್ನು ಬಂಧಿಸಲಾಗಿತ್ತು. ಕಳೆದ ವರ್ಷ ಕೊಯಮತ್ತೂರು ಮತ್ತು ಮಂಗಳೂರಿನಲ್ಲಿ ನಡೆದ ಸ್ಪೋಟಗಳ ಹೊಣೆಯನ್ನು ಖೊರಾಸಾನ್ ಪ್ರಾಂತ್ಯದ ಇಸ್ಲಾಮಿಕ್ ಸ್ಟೇಟ್(ಐಎಸ್ಕೆಪಿ) ಭಯೋತ್ಪಾದಕ ಸಂಘಟನೆ ಹೊತ್ತುಕೊಂಡಿತ್ತು.
ಈ ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಕರಾವಳಿ ಪ್ರದೇಶಗಳಲ್ಲಿ ಭಯೋತ್ಪಾದನೆ ಚಟುವಟಿಕೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ಹೇಳಿದ್ದರು. ನೂತನ ಸರ್ಕಾರವು ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವ ಅಗತ್ಯವನ್ನು ಪ್ರಸ್ತುತ ಬೆಳವಣಿಗೆಗಳು ಸೂಚಿಸುತ್ತವೆ. ಇದರೊಟ್ಟಿಗೆ, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಡ್ಡಿಯಾಗದ ರೀತಿಯಲ್ಲಿ, ಸಾಮಾಜಿಕ ಮಾಧ್ಯಮಗಳಲ್ಲಿನ ಇತರ ಪೋಸ್ಟ್ಗಳ ಬಗ್ಗೆಯೂ ನಿಗಾ ಅಗತ್ಯ.