

ಬೆಂಗಳೂರು: ಹಿಂದು ಮುಖಂಡರ ಹತ್ಯೆ ಮತ್ತು ದಕ್ಷಿಣ ಭಾರತದಲ್ಲಿ ಐಸಿಸ್ ಉಗ್ರ ಸಂಘಟನೆ ಬಲಪಡಿಸುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಮೂವರು ಶಂಕಿತ ಉಗ್ರರನ್ನು ರಾಷ್ಟ್ರೀಯ ತನಿಖಾ ತಂಡ (ಎನ್ಐಎ) ಬೆಂಗಳೂರಿನಲ್ಲಿ ವಶಕ್ಕೆ ಪಡೆದಿದೆ. ದೇವರಜೀವನಹಳ್ಳಿಯ ಫಝೀವ್ ಉರ್ ರೆಹಮಾನ್, ಮತೀನ್ ಮತ್ತು ಫೈಜಲ್ ಇವರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿರುವುದಾಗಿ ಮೂಲಗಳು ತಿಳಿಸಿವೆ. ತಮಿಳುನಾಡು, ದೆಹಲಿ ಮತ್ತು ಸದ್ದುಗುಂಟೆಪಾಳ್ಯ ಠಾಣೆಯಲ್ಲಿ ದಾಖಲಾದ ಪ್ರತ್ಯೇಕ ಪ್ರಕರಣಗಳ ತನಿಖೆ ಹೊತ್ತ ಎನ್ಐಎ, ಫೆ.24ರಂದು ತಮಿಳುನಾಡು ಮತ್ತು ಬೆಂಗಳೂರಿನ 25 ಕಡೆ ದಾಳಿ ನಡೆಸಿತ್ತು. ಇದರ ಬೆನ್ನಲ್ಲೇ ದೇವರಜೀವನಹಳ್ಳಿ ಮತ್ತು ಸದ್ದುಗುಂಟೆಪಾಳ್ಯದಲ್ಲಿ ಮೂವರನ್ನು ವಶಕ್ಕೆ ಪಡೆದಿದೆ.
ಸದ್ದುಗುಂಟೆಪಾಳ್ಯದ ಪ್ರಕರಣದಲ್ಲಿ ಸೆರೆಸಿಕ್ಕಿರುವ ಜಿಹಾದಿ ಗ್ಯಾಂಗ್ನ ಬೆಂಗಳೂರು ಕಮಾಂಡರ್ ಮೆಹಬೂಬ್ ಪಾಷಾ ಜತೆ ಈ ಮೂವರು ಸಭೆ ನಡೆಸಿದ್ದರು. ಈ ಹಿಂದೆ ಸಿಸಿಬಿ ಪೊಲೀಸರು ಈ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಬಿಟ್ಟಿದ್ದರು. ಇದೀಗ ಎನ್ಐಎ ಅಧಿಕಾರಿಗಳು, ಹೆಚ್ಚಿನ ವಿಚಾರಣೆ ಸಲುವಾಗಿ ವಶಕ್ಕೆ ಪಡೆದಿದ್ದಾರೆ.
ಮೆಹಬೂಬ್ ಪಾಷಾ ಜತೆಗೆ ಸೇರಿ ಮಾರಕಾಸ್ತ್ರಗಳ ಸಾಗಾಟ, ಜಿಹಾದಿ ಗ್ಯಾಂಗ್ಗೆ ಕಾರ್ಯಕರ್ತರ ಸೇರ್ಪಡೆ ಕೆಲಸದಲ್ಲಿ ತೊಡಗಿರುವ ಶಂಕೆ ವ್ಯಕ್ತವಾಗಿದ್ದು, ಹೆಚ್ಚಿನ ವಿಚಾರಣೆಯಿಂದ ಮಾಹಿತಿ ತಿಳಿದು ಬರಬೇಕಾಗಿದೆ ಎಂದು ಎನ್ಐಎ ಮೂಲಗಳು ತಿಳಿಸಿವೆ.
ಫೆ.24ರಂದು ಬೆಂಗಳೂರು ಮತ್ತು ಕೋಲಾರ ಜಿಲ್ಲೆಯ ಶಂಕಿತರ ಮನೆ, ಅಲ್ ಹಿಂದ್ ಟ್ರಸ್ಟ್ ಮೇಲೆ ದಾಳಿ ನಡೆಸಿ ಕಂಪ್ಯೂಟರ್, 9 ಮೊಬೈಲ್, 5 ಸಿಮ್ ಕಾರ್ಡ್, 1 ಲ್ಯಾಪ್ಟಾಪ್, 2 ಹಾರ್ಡ್ ಡಿಸ್ಕ್, 4 ಸಿಎ, ಡಿವಿಆರ್, 18 ಬುಕ್, 1 ಆಟೋ, ಸಿಡಿ ಮದ್ದು ಮತ್ತು ದಾಖಲೆ ವಶಕ್ಕೆ ಪಡೆಯಲಾಗಿತ್ತು. ಇವುಗಳ ಪರಿಶೀಲನೆ ವೇಳೆ ಕೆಲ ಸಾಕ್ಷ್ಯಗಳು ಲಭ್ಯವಾಗಿದ್ದವು. ಈ ಆಧಾರದ ಮೇಲೆ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಾರ್ಯಾಚರಣೆ ವೇಳೆ ಹೈಡ್ರಾಮಾ
ದೇವರಜೀವನಹಳ್ಳಿ ಬಳಿಯ ಗ್ಯಾರೇಜ್ನಲ್ಲಿ ಕೆಲಸ ಮಾಡುತ್ತಿದ್ದ ರೆಹಮಾನ್ನನ್ನು ವಶಕ್ಕೆ ಪಡೆಯಲು ಎನ್ಐಎ ಅಧಿಕಾರಿಗಳು ಹೋದಾಗ ಹೈಡ್ರಾಮಾ ನಡೆದಿದೆ. ‘ತಪು್ಪ ಮಾಡಿಲ್ಲ’ ಎಂದು ಕೂಗುತ್ತ ತಪ್ಪಿಸಿಕೊಂಡು ಹೋದ ರೆಹಮಾನ್ ದುರ್ವಾಸನೆ ಮತ್ತು ಕತ್ತಲು ಇದ್ದ ಪ್ರಾಣಿಗಳ ಚರ್ಮ ಕೊಳೆಸುವ ಜಾಗದಲ್ಲಿ ಅಡಗಿಕೊಂಡಿದ್ದ. ಅಧಿಕಾರಿಗಳು ಒಂದೂವರೆ ತಾಸು ಹರಸಾಹಸಪಟ್ಟು ಆತನನ್ನು ಹಿಡಿದು ಜೀಪ್ ಹತ್ತಿಸಿಕೊಂಡು ತೆರಳಿದ್ದಾರೆ.
ರಾಜ್ಯದಲ್ಲಿ ಇನ್ನೂ ಇದ್ದಾರೆ ಜಿಹಾದಿಗಳು
ತಮಿಳುನಾಡು, ದೆಹಲಿ ಮತ್ತು ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಈವರೆಗೂ 17 ಮಂದಿಯನ್ನು ಬಂಧಿಸಿದ್ದಾರೆ. ಇವರ ಸಹಚರರು ತಮಿಳುನಾಡು ಮತ್ತು ಕರ್ನಾಟಕದಲ್ಲಿ ಅಡಗಿರುವ ಮಾಹಿತಿ ಲಭ್ಯವಾಗಿದೆ. ವಶಕ್ಕೆ ಪಡೆದಿರುವ ಮೊಬೈಲ್ಗಳಿಗೆ ಬಂದಿರುವ ಹೊರ-ಒಳ ಕರೆಗಳ ಸಂಖ್ಯೆಯನ್ನು ಪರಿಶೀಲಿಸಲಾಗುತ್ತಿದೆ ಎಂದು ಎನ್ಐಎ ಮೂಲಗಳು ತಿಳಿಸಿವೆ.