ನೆಲಕಚ್ಚಿದ ಹೆದ್ದಾರಿ 209 ಕಾಮಗಾರಿ: ಕೇರಳ, ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ

PHOTO-2021-10-01-15-25-42 (1)
Published on

ರಾಮನಗರ :  ಆರಾಮದಾಯಕ ಪ್ರಯಾಣಕ್ಕೆ ಸಹಕಾರಿಯಾಗಿಸುವ ನಿಟ್ಟಿನಲ್ಲಿ 4 ಪಥದ ರಸ್ತೆಯಾಗಿ ಮೇಲ್ದರ್ಜೆಗೆ ಏರಬೇಕಿದ್ದ ಬೆಂಗಳೂರು-ಚಾಮರಾಜನಗರ-ದಿಂಡಿಗಲ್ ನಡುವಿನ ರಾಷ್ಟ್ರೀಯ ಹೆದ್ದಾರಿ 209 ಕಾಮಗಾರಿ ಸಂಪೂರ್ಣ ನೆಲಕಚ್ಚಿದ್ದು, ಪ್ರಯಾಣಿಕರ ಪಾಡು ಹೇಳತೀರದಾಗಿದೆ.

ಬೆಂಗಳೂರಿನಿಂದ ಕನಕಪುರ ಮಾರ್ಗವಾಗಿ ಮೈಸೂರು, ಚಾಮರಾಜನಗರ ಹಾಗೂ ತಮಿಳುನಾಡು ಮತ್ತು ಕೇರಳ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ದ್ವಿಪಥದ ರಸ್ತೆಯನ್ನು ನಾಲ್ಕು ಪಥಕ್ಕೆ ಮೇಲ್ದರ್ಜೆಗೆ ಏರಿಸುವ ನಿಟ್ಟಿನಲ್ಲಿ ಸುಮಾರು 6 ವರ್ಷಗಳ ಹಿಂದೆಯೇ ಯೋಜನೆ ರೂಪಿಸಲಾಗಿತ್ತು. ಇದರ ಭಾಗವಾಗಿ ಕಾಮಗಾರಿ ಆರಂಭದಲ್ಲಿ ವೇಗವಾಗಿ ನಡೆದರೂ ನಂತರ ಯೋಜನೆ ಸಂಪೂರ್ಣವಾಗಿ ನಿಂತೇ ಹೋಗಿದ್ದು, ಪ್ರಯಾಣಿಕರು ಜೀವ ಪಣಕ್ಕೆ ಇಟ್ಟು ರಸ್ತೆಯಲ್ಲಿ ಓಡಾಡುವಂತೆ ಆಗಿದೆ.

ವಾಹನ ದಟ್ಟಣೆ ಹೆಚ್ಚು: ಬೆಂಗಳೂರಿನಿಂದ ಬನಶಂಕರಿ ಮಾರ್ಗವಾಗಿ ಕನಕಪುರ, ಮಳವಳ್ಳಿ-ಮೈಸೂರು, ಕೊಳ್ಳೇಗಾಲ-ಚಾಮರಾಜನಗರ ಹಾಗೂ ತಮಿಳುನಾಡಿನ ಕೊಯಮತ್ತೂರು, ದಿಂಡಿಗಲ್ ಹಾಗೂ ಕೇರಳ ರಾಜ್ಯದ ಸುಲ್ತಾನ್ ಬತೇರಿ, ಕೊಯಿಕೋಡ್‌ಗಳಿಗೆ ತೆರಳಲು ಇದೇ ಮಾರ್ಗವನ್ನು ಬಳಕೆ ಮಾಡಲಾಗುತ್ತದೆ. ರಜಾ ದಿನಗಳಲ್ಲಿ ಸಂಗಮ, ಮೇಕೆದಾಟು, ಮಹದೇಶ್ವರ ಬೆಟ್ಟ, ಬಿಳಿಗಿರಿರಂಗನ ಬೆಟ್ಟ ಮುಂತಾದ ಪ್ರದೇಶಗಳಿಗೆ ಈ ಮಾರ್ಗದ ಮೂಲಕವೇ ತೆರಳಬೇಕು. ಇದರಿಂದಾಗಿ ಬೆಂಗಳೂರು-ಕನಕಪುರ-ಮಳವಳ್ಳಿ ರಸ್ತೆ ವಾಹನಗಳಿಂದ ತುಂಬಿ ಹೋಗುತ್ತದೆ. ಇದೀಗ ರಸ್ತೆ ಕಾಮಗಾರಿ ನಿಂತಿರುವುದರಿಂದ ಸ್ಥಳೀಯರು ರಸ್ತೆ ದಾಟಲು ಪರದಾಡಬೇಕಾಗಿದೆ, ವಾಹನ ಸವಾರರು ಗುಂಡಿಯಲ್ಲಿ ಬಿದ್ದು ಪ್ರಾಣ ಕಳೆದುಕೊಳ್ಳುತ್ತೇವೋ ಎನ್ನುವ ಎಚ್ಚರಿಕೆಯಲ್ಲಿಯೇ ಪ್ರಯಾಣ ಮಾಡಬೇಕಿದೆ.

ಸಂಸದರೇ ಗಮನಹರಿಸಿ :  ಸಂಸದ ಡಿ.ಕೆ.ಸುರೇಶ್ ಬೆಂಗಳೂರಿನಿಂದ ಕನಕಪುರಕ್ಕೆ ಹೋಗಲು ಹೆಚ್ಚಾಗಿ ಇದೇ ಮಾರ್ಗ ಬಳಸುತ್ತಾರೆ. ಇಡೀ ರಸ್ತೆಯ ಹಾಗೂ ಯೋಜನೆ ಬಗ್ಗೆ ಅವರಿಗೆ ಹೆಚ್ಚಿನ ಅರಿವಿದೆ. ಯೋಜನೆ ಕುಂಟುತ್ತಾ ಸಾಗಿರುವುದಕ್ಕೆ ಕಾರಣ ಹುಡುಕಿ ಸರಿಪಡಿಸುವ ನಿಟ್ಟಿನಲ್ಲಿ ಗಮನಹರಿಸಬೇಕಿದೆ.

ಸಂಪರ್ಕಕ್ಕೆ ಸಿಗದ ಯೋಜನಾಧಿಕಾರಿ : ಕಾಮಗಾರಿ ವಿಳಂಬ ಸಂಬಂಧ ಸಾರ್ವಜನಿಕರು ಯಾರೇ ಮಾಹಿತಿ ನೀಡಿದರೂ ಸ್ಪಷ್ಟ ಉತ್ತರ ನೀಡಲು ನಿರಾಕರಿಸುವ ಯೋಜನಾ ನಿರ್ದೇಶಕ ಶ್ರೀಧರ್, ಈ ಬಗ್ಗೆ ವಿಜಯವಾಣಿ ಸಂಪರ್ಕ ಮಾಡಲು ಪ್ರಯತ್ನ ಮಾಡಿದಾಗಲೂ ಸಂಪರ್ಕಕ್ಕೆ ಸಿಗಲೇ ಇಲ್ಲ.

ಯೋಜನೆ ವಿವರ : ಬೆಂಗಳೂರಿನಿಂದ ತಮಿಳುನಾಡಿನ ದಿಂಡಿಗಲ್‌ವರೆಗೆ ಸಂಪರ್ಕ ಕಲ್ಪಿಸುವ ಎನ್‌ಎಚ್ 209ರ ರಸ್ತೆ ವಿಸ್ತರಣೆ ಕಾಮಗಾರಿಯನ್ನು ನಮ್ಮ ರಾಜ್ಯ ವ್ಯಾಪ್ತಿಯಲ್ಲಿ ಹಮ್ಮಿಕೊಳ್ಳಲಾಗಿದೆ. ಇದರ ಉದ್ದ 167 ಕಿ.ಮೀ. ಆಗಿದ್ದು, ಯೋಜನಾ ವೆಚ್ಚ ಒಟ್ಟು 1961 ಕೋಟಿ ರೂ.ಗಳು. ಇದರಲ್ಲಿ ಕಾಮಗಾರಿಗೆ 1007 ಕೋಟಿ ರೂ.ಗಳನ್ನು ಮೀಸಲಿಟ್ಟಿದ್ದರೆ, ಭೂ ಸ್ವಾಧೀನಕ್ಕಾಗಿ 954 ಕೋಟಿ ರೂ.ಗಳನ್ನು ನೀಡಲಾಗಿದೆ.

ಇದರಲ್ಲಿ ಬೆಂಗಳೂರಿನಿಂದ ಕನಕಪುರದವರೆಗೆ ಒಟ್ಟು 33 ಕಿ.ಮೀ. ಉದ್ದರ ರಸ್ತೆ 4 ಪಥದಲ್ಲಿ ನಿರ್ಮಾಣವಾಗುತ್ತಿದ್ದು, ತಮಿಳುನಾಡು ಗಡಿವರೆಗೆ 137 ಕಿ.ಮೀ. ಉದ್ದ ಮತ್ತಷ್ಟು ವಿಸ್ತರಣೆಗೊಂಡ 2 ಪಥದ ರಸ್ತೆ ಆಗಲಿದೆ. ಈ ಹೆದ್ದಾರಿಯಲ್ಲಿ ಹಾದು ಹೋಗುವ ಪ್ರಮುಖ 7 ಪಟ್ಟಣಗಳಾದ ರಾಮನಗರ ಜಿಲ್ಲೆಯ ಹಾರೋಹಳ್ಳಿ, ಕನಕಪುರ, ಸಾತನೂರು ಮಂಡ್ಯ ಜಿಲ್ಲೆಯ ಹಲಗೂರು, ಚಾಮರಾಜನಗರದ ಜಿಲ್ಲೆಯ ಕೊಳ್ಳೆಗಾಲ, ಸತ್ತೇಗಾಲ ಮತ್ತು ಚಾಮರಾಜನಗರ ಪಟ್ಟಣಗಳಲ್ಲಿ ಬೈಪಾಸ್ ನಿರ್ಮಾಣವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net