

ನವದೆಹಲಿ: ತರಕಾರಿ, ಹಣ್ಣು, ದ್ವಿದಳ ಧಾನ್ಯ ಮುಂತಾದವುಗಳ ಬೆಲೆ ಇಳಿಕೆಯಿಂದಾಗಿ ಏಪ್ರಿಲ್ನಲ್ಲಿ ಚಿಲ್ಲರೆ ಹಣದುಬ್ಬರ ಶೇ. 3.16ರಷ್ಟಾಗಿದ್ದು ಇದು ಕಳೆದ ಆರು ವರ್ಷಗಳಲ್ಲೇ ಕನಿಷ್ಠ ಮಟ್ಟವಾಗಿದೆ.
ಇದರಿಂದ, ರಿಸರ್ವ್ ಬ್ಯಾಂಕ್ ಜೂನ್ನ ಹಣಕಾಸು ನೀತಿಯಲ್ಲಿ ಮತ್ತಷ್ಟು ಬಡ್ಡಿ ದರ ಇಳಿಸಲು ದಾರಿ ಸುಗಮವಾಗಿದೆ. ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧರಿತ ಹಣದುಬ್ಬರ ಮಾರ್ಚ್ ನಲ್ಲಿ ಶೇ. 3.34 ಮತ್ತು ಏಪ್ರಿಲ್ನಲ್ಲಿ ಶೇ. 4.83ರಷ್ಟಿತ್ತು. 2019ರ ಜುಲೈನಲ್ಲಿ ಇದು ಶೇ. 3.15ರಷ್ಟಿತ್ತು. 2025ರ ಮಾರ್ಚ್ಗೆ ಹೋಲಿಸಿದರೆ ಏಪ್ರಿಲ್ನಲ್ಲಿ ಆಹಾರ ಹಣದುಬ್ಬರ 91 ಮೂಲಾಂಶದಷ್ಟು ಕಡಿಮೆಯಾಗಿದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್ಎಸ್ಒ) ಮಂಗಳವಾರ ತಿಳಿಸಿದೆ.
ಆರ್ಬಿಐ ಈಗಾಗಲೇ ಫೆಬ್ರವರಿ ಮತ್ತು ಏಪ್ರಿಲ್ನಲ್ಲಿ ಒಟ್ಟು 50 ಮೂಲಾಂಶದಷ್ಟು ಬಡ್ಡಿ ದರ ಇಳಿಸಿದೆ. ಈಗ ಹಣದುಬ್ಬರ ಮತ್ತಷ್ಟು ಕಡಿಮೆ ಆಗಿರುವುದರಿಂದ ಬಡ್ಡಿ ದರ ಇನ್ನಷ್ಟು ಇಳಿಸುವ ಸಾಧ್ಯತೆ ಇದೆ.