

ಬೆಂಗಳೂರು: ಮಹಾಮಾರಿ ಕರೊನಾದಿಂದಾಗಿ ಜನರು ಸಂಕಷ್ಟ ಅನುಭವಿಸುತ್ತಿರುವ ನಡುವೆಯೇ ರಾಜ್ಯದಲ್ಲಿ ಅತಿವೃಷ್ಟಿಯೂ ಕಾಡಿದ್ದು, ರೈತರು ಬೆಳೆದಿರುವ ಬೆಳೆಗಳು ನೀರು ಪಾಲಾಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಆಗಿದೆ. ನಗರದಲ್ಲಿದ್ದ ಬಹಳಷ್ಟು ಕಾರ್ವಿುಕರು ಲಾಕ್ಡೌನ್ ಸಂದರ್ಭದಲ್ಲಿ ಊರಿಗೆ ವಾಪಸಾಗಿ ಕೃಷಿಯಲ್ಲಿ ತೊಡಗಿಕೊಂಡಿದ್ದರು. ಅಲ್ಲದೆ, ಉತ್ತಮ ಬೆಳೆಯೂ ಬಂದಿತ್ತು. ಆದರೆ ಸದ್ಯ ಸುರಿಯುತ್ತಿರುವ ಮಳೆಯಿಂದಾಗಿ ಕಟಾವಿಗೆ ಬಂದಿರುವ ಬೆಳೆಗಳು ನಾಶವಾಗಿವೆ. ಕಳೆದೊಂದು ವಾರದಲ್ಲಿ ರಾಜ್ಯದಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾದರೂ ರೈತರಿಗೆ ಉಪಯೋಗವಾಗಿಲ್ಲ. ಆದರೆ ಅಧಿಕ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದ್ದು ದಿಕ್ಕು ತೋಚದಂತಾಗಿದೆ.
ಹಾಳಾದ ಬೆಳೆ: ಮೆಕ್ಕೆಜೋಳ, ಕಬ್ಬು, ಭತ್ತ, ಈರಳ್ಳಿ, ಶೇಂಗಾ, ರಾಗಿ, ಆಲೂಗೆಡ್ಡೆ, ತೊಗರಿ, ಹತ್ತಿ ಮತ್ತಿತರರ ವಾಣಿಜ್ಯ ಬೆಳೆಗಳು, ಮೆಣಸಿನ ಕಾಯಿ, ಎಲೆಕೋಸು ಸೇರಿ ತರಕಾರಿ ಬೆಳೆಗಳು ಭಾರಿ ಮಳೆಗೆ ತುತ್ತಾಗಿವೆ.
ಶೇ.58 ಹೆಚ್ಚು ಮಳೆ: ಒಂದು ವಾರದಲ್ಲಿ ರಾಜ್ಯಾದ್ಯಂತ ವಾಡಿಕೆಗಿಂತ ಶೇ. 58 ಹೆಚ್ಚು ಮಳೆಯಾಗಿದೆ. ಅ.17ರಿಂದ 23ರವರೆಗೆ ವಾಡಿಕೆಯಂತೆ 25 ಮಿಮೀ ಮಳೆಯಾಗಬೇಕಿತ್ತು. ಆದರೆ, 39 ಮಿಮೀ ಸುರಿದಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮಾಹಿತಿ ನೀಡಿದೆ.
4 ಜಿಲ್ಲೆಗಳಲ್ಲಿ ಕೊರತೆ: ಚಾಮರಾಜನಗರದಲ್ಲಿ ಶೇ.48, ಮೈಸೂರು-16, ಕೊಡಗು ಮತ್ತು ಶಿವಮೊಗ್ಗದಲ್ಲಿ ತಲಾ ಶೇ.9 ವಾಡಿಕೆಗಿಂತ ಕಡಿಮೆ ಮಳೆಯಾದರೆ, ವಿಜಯಪುರದಲ್ಲಿ ವಾಡಿಕೆಯಷ್ಟೇ ಮಳೆ ಸುರಿದಿದೆ.
3 ದಿನ ಮಳೆ ಮುಂದುವರಿಕೆ: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ರಾಜ್ಯದಲ್ಲಿ ಹಲವೆಡೆ ಮಳೆಯಾಗುತ್ತಿದ್ದು, ಮುಂದಿನ 3 ದಿನ ಮುಂದುವರಿ ಯಲಿದೆ. ಕರಾವಳಿಯಲ್ಲಿ ಮುಂದಿನ 72 ಗಂಟೆ, ದಕ್ಷಿಣ ಒಳನಾಡಿನಲ್ಲಿ 48 ಗಂಟೆ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ.
28ರಿಂದ ಹಿಂಗಾರು ಶುರು: ಅ.28ರಿಂದ ಹಿಂಗಾರು ಮಳೆ ಆರಂಭವಾಗಲಿದ್ದು, ಡಿ.31ರವರೆಗೆ ಮುಂದುವರಿಯಲಿದೆ. ಡಿಸೆಂಬರ್ ಮೊದಲ ವಾರದಲ್ಲಿ ಚಂಡಮಾರುತ ಉಂಟಾಗುವ ಸಾಧ್ಯತೆ ಇದ್ದು, ಭಾರಿ ಮಳೆ ನಿರೀಕ್ಷೆ ಇದೆ. ಸಾಮಾನ್ಯ ವಾಗಿ ನವೆಂಬರ್ ಮೊದಲ ವಾರದಲ್ಲಿ ಹಿಂಗಾರು ಮಳೆ ಆರಂಭವಾಗುತ್ತಿತ್ತು. ಆದರೆ, ಈ ಬಾರಿ ಬೇಗನೆ ಆರಂಭವಾಗಲಿದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್.ಪಾಟೀಲ ಮಾಹಿತಿ ನೀಡಿದರು.
ಕಲಬುರಗಿ: ಅಬ್ಬರದ ಮಳೆ ಮತ್ತು ಪ್ರವಾಹಕ್ಕೆ ತೊಗರಿ ಕಣಜ ಅಕ್ಷರಶಃ ನಲುಗಿದ್ದು, ಜಿಲ್ಲೆಯ 10.70 ಲಕ್ಷ ಎಕರೆ (4.28 ಲಕ್ಷ ಹೆಕ್ಟೇರ್) ಭೂಮಿ ವರುಣಾಪೋಷನವಾಗಿದೆ. ಕೃಷಿ ಮತ್ತು ಕಂದಾಯ ಇಲಾಖೆ ಜಂಟಿಯಾಗಿ ಮೂರು ಹಂತದ ಸಮೀಕ್ಷೆ ಕೈಗೊಂಡಿದ್ದು, ಮೊದಲ ಹಂತದಲ್ಲಿ 89 ಸಾವಿರ ಹೆಕ್ಟೇರ್, 2ನೇ ಹಂತದಲ್ಲಿ 1.89 ಲಕ್ಷ ಮತ್ತು 3ನೇ ಹಂತದ ಸಮೀಕ್ಷೆಯಲ್ಲಿ 1.50 ಲಕ್ಷ ಹೆಕ್ಟೇರ್ ಬೆಳೆ ಸಂಪೂರ್ಣ ಹಾಳಾಗಿದೆ ಎಂದು ಅಂದಾಜಿಸಲಾಗಿದೆ. ಮೊದಲ ಹಂತದಲ್ಲಿ 89 ಸಾವಿರ ಹೆಕ್ಟೇರ್ನಿಂದ 61 ಕೋಟಿ ರೂ. ನಷ್ಟವಾಗಿದೆ ಎಂದು ಕೃಷಿ ಇಲಾಖೆಯೇ ಹೇಳಿತ್ತು. ಇದನ್ನೇ ಆಧಾರವಾಗಿ ಇಟ್ಟುಕೊಂಡರೂ 4.28 ಲಕ್ಷ ಹೆಕ್ಟೇರ್ನಿಂದ ಸುಮಾರು 350 ಕೋಟಿ ರೂ. ಹಾನಿಯಾಗಿದೆ. ಆದರೆ ಎಕರೆಗೆ ಕನಿಷ್ಠ 1000 ರೂ. ನಷ್ಟ ಎಂದುಕೊಂಡರೂ 1000 ಕೋಟಿ ರೂ.ಗೂ ಹೆಚ್ಚು ನಷ್ಟವಾಗಿರುವುದಂತೂ ಸ್ಪಷ್ಟ.
ನೆಲೋಗಿ ಪಿಎಸ್ಐ ಸಸ್ಪೆಂಡ್: ಭೀಮಾ ನದಿ ಪ್ರವಾಹದಲ್ಲಿ ಸಿಲುಕಿದ್ದ ಕುರಿ ಮರಿಗಳನ್ನು ರಕ್ಷಿಸಿದಂತೆ ನಕಲಿ ಕಾರ್ಯಾ ಚರಣೆ ಮಾಡಿದ ನೆಲೋಗಿ ಠಾಣೆ ಪಿಎಸ್ಐ ಮಲ್ಲಣ್ಣ ಯಲಗೋಡ ಅವರನ್ನು ಕರ್ತವ್ಯ ದಿಂದ ಅಮಾನತು ಮಾಡಿ ಎಸ್ಪಿ ಡಾ.ಸಿಮಿ ಮರಿಯಮ್ ಜಾರ್ಜ್ ಆದೇಶಿದ್ದಾರೆ.
ಬೆಂ.ಗ್ರಾಮಾಂತರದಲ್ಲಿ ಶೇ.114, ರಾಮನಗರ - 86, ಕೋಲಾರ -111, ಚಿಕ್ಕಬಳ್ಳಾಪುರ -61, ತುಮಕೂರು- 90, ಚಿತ್ರದುರ್ಗ -181, ದಾವಣಗೆರೆ -152, ಮಂಡ್ಯ -36, ಬಳ್ಳಾರಿ -105, ರಾಯಚೂರು -93, ಕಲಬುರಗಿ -.52, ಯಾದಗಿರಿ -35, ಬೀದರ್ -83, ಬೆಳಗಾವಿ -58, ಬಾಗಲಕೋಟೆ -41, ಗದಗ -60, ಹಾವೇರಿ -71, ಕೊಪ್ಪಳ-57, ಧಾರವಾಡ- 51, ಹಾಸನ -22. ಚಿಕ್ಕಮಗಳೂರು- 18, ದಕ್ಷಿಣ ಕನ್ನಡ - 38, ಉಡುಪಿ -41, ಉ.ಕ.ದಲ್ಲಿ ಶೇ.35 ವಾಡಿಕೆಗಿಂತ ಹೆಚ್ಚುವರಿ ಮಳೆಯಾಗಿದೆ.