

ಜೈಪುರ: ರಾಜಸ್ಥಾನದಲ್ಲಿ ರಾಜಕೀಯ ಬಿಕ್ಕಟ್ಟು ಮುಂದುವರಿದಿದೆ. ಅಧಿಕಾರ ಉಳಿಸಿಕೊಳ್ಳಲು ಕಾಂಗ್ರೆಸ್ ಭಾರಿ ಕಸರತ್ತು ನಡೆಸಿದೆ. ಈವರೆಗೆ ಜೈಪುರ ಹೊರವಲಯದಲ್ಲಿದ್ದ ರೆಸಾರ್ಟ್ನಲ್ಲಿ ಬೀಡುಬಿಟ್ಟಿದ್ದ 100ಕ್ಕೂ ಅಧಿಕ ಶಾಸಕರನ್ನು ಈಗ ಬೇರೆಡೆಗೆ ಸ್ಥಳಾಂತರಿಸಿದೆ. ರಾಜಧಾನಿ ಜೈಪುರದಿಂದ 550 ಕಿ.ಮೀ. ದೂರದಲ್ಲಿರುವ ಜೈಸಲ್ಮೇರ್ನ ಐಷಾರಾಮಿ ಹೋಟೆಲ್ ಹಾಗೂ ರೆಸಾರ್ಟ್ನಲ್ಲಿ ಇರಿಸಲಾಗಿದೆ.
ಮಧ್ಯಾಹ್ನ ಮೂರು ಹಾಗೂ ಸಂಜೆ 2 ಸೇರಿ ಐದು ವಿಶೇಷ ವಿಮಾನಗಳಲ್ಲಿ ಶಾಸಕರನ್ನು ಇಲ್ಲಿಗೆ ಕರೆತರಲಾಗಿದೆ. ಸಂಜೆ ವಿಮಾನದಲ್ಲಿ ಸಿಎಂ ಅಶೋಕ್ ಗೆಹ್ಲೋಟ್ ಕೂಡ ಪ್ರಯಾಣಿಸಿದ್ದರು. ಈ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿ ಅಮಿತ್ ಷಾ ವಿರುದ್ಧ ಹರಿಹಾಯ್ದರು. ಬಿಜೆಪಿಯೇತರ ಸರ್ಕಾರಗಳನ್ನು ಉರುಳಿಸುವುದೇ ಬಿಜೆಪಿ ಕೆಲಸವಾಗಿದ್ದರೆ, ಪ್ರಜಾಪ್ರಭುತ್ವಕ್ಕೆ ಎಲ್ಲಿ ಅರ್ಥವಿದೆ. ಚುನಾವಣೆ ಏಕೆ ಬೇಕು ಎಂದು ಪ್ರಶ್ನಿಸಿದರು.
ವಿಧಾನಸಭಾ ಅಧಿವೇಶನ ಆರಂಭವಾಗಲಿರುವ ಆಗಸ್ಟ್ 14ರ ವರೆಗೆ ಶಾಸಕರೂ ಇಲ್ಲಿಯೇ ಇರಲಿದ್ದಾರೆ. ಸೂರ್ಯಗಢ್ ಹೋಟೆಲ್ನ ಎಲ್ಲ 70 ರೂಮ್ಗಳನ್ನು ಶಾಸಕರಿಗಾಗಿ ಬುಕ್ ಮಾಡಲಾಗಿದೆ. ಜೈಸಲ್ಮೇರ್ನಿಂದ 20 ಕಿ.ಮೀ ದೂರದಲ್ಲಿರುವ ರೆಸಾರ್ಟ್ಗೆ ಎಸ್ಪಿ ಖುದ್ದಾಗಿ ಭದ್ರತಾ ಹೊಣೆ ಹೊತ್ತು ಎಲ್ಲ ಶಾಸಕರನ್ನು ರೆಸಾರ್ಟ್ಗೆ ಕರೆದೊಯ್ದಿದ್ದಾರೆ.
ಜೈಸಲ್ಮೇರ್ ರೆಸಾಟ್ರ್ನಲ್ಲಿ ಕಾಂಗ್ರೆಸ್ ಶಾಸಕರನ್ನು ಇರಿಸಿರುವುದಕ್ಕೆ ಬಿಜೆಪಿ ವ್ಯಂಗ್ಯವಾಡಿದೆ. ಕಾಂಗ್ರೆಸ್ ಶಾಸಕರ ಮುಂದಿನ ನಿಲ್ದಾಣ ಪಾಕಿಸ್ತಾನ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಸತೀಶ್ ಪೂನಿಯಾ ಲೇವಡಿ ಮಾಡಿದ್ದಾರೆ. ಜೈಸಲ್ಮೇರ್ನಿಂದ ಪಾಕಿಸ್ತಾನ ಗಡಿ ಹತ್ತಿರದಲ್ಲಿದೆ.
ಇದನ್ನೂ ಓದಿ; ಸಚಿನ್ ಪೈಲಟ್ ತಲೆದಂಡಕ್ಕೆ ಕಾರಣವಾದ ಮೂರು ಬೇಡಿಕೆಗಳು
ಪ್ರಜಾಪ್ರಭುತ್ವದ ಮೌಲ್ಯಗಳ ಬಗ್ಗೆ ಮಾತನಾಡುವ ಸಿಎಂ ವಿಧಾನಸಭೆ ಕಾರ್ಯಾಯದಲ್ಲಿದ್ದು, ಸರ್ಕಾರ ನಡೆಸಬೇಕೆ ಹೊರತು, ರೆಸಾರ್ಟ್ನಿಂದಲ್ಲ. ರಾಜಸ್ಥಾನದಲ್ಲಿ ಕಾಂಗ್ರೆಸ್ ತನ್ನಿಂದ ತಾನೇ ನಾಶವಾಗಲಿದೆ ಎಂದು ಸತೀಶ್ ಹೇಳಿದ್ದಾರೆ.