ಕೈಹಿಡಿದ ಪತ್ರಿಕಾ ಪ್ರಪಂಚ

Gandhi_Bazaar (1)
Published on

ಎಲ್ಲರೂ ಬೆಳಗಿನ ಜಾವದ ಸವಿನಿದ್ರೆಯಲ್ಲಿ ಇರುವಾಗ ತಾವು ಮಾತ್ರ ಚಳಿ-ಮಳೆ ಲೆಕ್ಕಿಸದೆ ಮನೆಮನೆಗೆ ದಿನಪತ್ರಿಕೆಗಳನ್ನು ತಲುಪಿಸುವ ಶ್ರಮಜೀವಿಗಳು ಪತ್ರಿಕಾ ವಿತರಕರು. ಜಗತ್ತಿಗೆಲ್ಲ ವಾರಾಂತ್ಯ, ಹಬ್ಬ, ಹರಿದಿನಗಳೆಂಬ ಹತ್ತು-ಹಲವು ರಜೆ ಸಿಕ್ಕರೂ, ಇವರದು ಮಾತ್ರ ವರ್ಷ ಪೂರ್ತಿ ಬಿಡುವೇ ಇಲ್ಲದ

ಕಾಯಕ. ವಿತರಕರಿಲ್ಲದೆ ದಿನಪತ್ರಿಕೆಗಳಿಲ್ಲ ಎಂಬಷ್ಟರ ಮಟ್ಟಿಗೆ ಪತ್ರಿಕಾ ವ್ಯವಸ್ಥೆಗೆ ಇವರು ಅನಿವಾರ್ಯ ಬೆನ್ನೆಲುಬು. ಏಕೆಂದರೆ, ಪತ್ರಿಕೆಗಳನ್ನು ಎಷ್ಟು ಒಪ್ಪ-ಓರಣವಾಗಿ ಸಿದ್ಧಪಡಿಸಿದ ಬಳಿಕವೂ ಅದನ್ನು ಓದುಗರ ಮನೆಬಾಗಿಲಿಗೆ ತಲುಪಿಸುವ ಆಪದ್ಬಾಂಧವರು ಇವರೇ. ಮನೆಯಲ್ಲಿ ಮದುವೆ ಇರಲಿ, ಸೂತಕವಿರಲಿ, ವಿತರಕರು ಯಾವತ್ತೂ ತಮ್ಮ ಕಾಯಕ ತಪ್ಪಿಸುವವರಲ್ಲ. ಕರೊನಾ ಸಂಕಷ್ಟದ ಸಂದರ್ಭ ಇಡೀ ದೇಶವೇ ಲಾಕ್​ಡೌನ್ ಆಗಿದ್ದಾಗಲೂ ಮನೆ-ಮನೆಗೆ ಪತ್ರಿಕೆ ತಲುಪಿಸಿದ ವಾರಿಯರ್ಸ್ ಇವರು. ಶುಕ್ರವಾರ (ಸೆ.4) ಪತ್ರಿಕಾ ವಿತರಕರ ದಿನ. ಈ ಹಿನ್ನೆಲೆಯಲ್ಲಿ ಪತ್ರಿಕಾ ವಿತರಣೆಗೇ ತಮ್ಮ ಜೀವನ ಸಮರ್ಪಿಸಿಕೊಂಡು, ಹತ್ತಾರು ಮಂದಿಗೆ ಉದ್ಯೋಗದಾತರಾಗಿರುವ, ಈ ವೃತ್ತಿಯಿಂದಲೇ ಉತ್ತಮ ಬದುಕು ಕಟ್ಟಿಕೊಂಡು ಮಾದರಿ ಆಗಿರುವ ವಿತರಕ ಬಂಧುಗಳ ಯಶೋಗಾಥೆಯನ್ನು ನಾಡಿಗೆ ಪರಿಚಯಿಸುವ ಕಿರು ಪ್ರಯತ್ನ ಇಲ್ಲಿದೆ. ವಿಜಯವಾಣಿಯ ಎಲ್ಲ ವಿತರಕ ಬಾಂಧವರಿಗೆ ಪತ್ರಿಕಾ ವಿತರಕರ ದಿನ ಶುಭಾಶಯಗಳು.
ದತ್ತಾತ್ರಿ ಶಿವಮೊಗ್ಗ

ಇವರ ಪೂರ್ತಿ ಹೆಸರು ಎಸ್.ಕೆ. ದತ್ತಾತ್ರಿ, ಪತ್ರಿಕಾ ವಲಯದಲ್ಲಿ ದತ್ತಣ್ಣ ಎಂದೇ ಚಿರಪರಿಚಿತರು. 1972ರಲ್ಲೇ ಬಿಎ ಪದವೀಧರರಾಗಿ, ಬಳ್ಳಾರಿಯಲ್ಲಿ ಪೊಲೀಸ್ ಪೇದೆಯಾಗಿ ಆಯ್ಕೆಯಾದರೂ ಅಲ್ಲಿಗೆ ಬಸ್​ನಲ್ಲಿ ತೆರಳಲು ಹಣವಿಲ್ಲದೆ ಅವಕಾಶ ಕೈಚೆಲ್ಲಿದರು. ಆದರೆ ಪತ್ರಿಕಾ ಪ್ರಪಂಚ ಕೈ ಹಿಡಿಯುತು. 42 ವರ್ಷಗಳಿಂದ ಪತ್ರಿಕೆಗಳನ್ನು ಓದುಗರಿಗೆ ತಲುಪಿಸುವಲ್ಲಿ ದತ್ತಣ್ಣರ ಶ್ರಮ ಅಪಾರ. ಈಗ ವಯಸ್ಸು 65, ಆದರೂ ದಣಿವರಿಯದ ವ್ಯಕ್ತಿ. ಪತ್ರಿಕೆಗಳನ್ನು ಸೂಕ್ತ ಸಮಯದಲ್ಲಿ ರವಾನಿಸುವ ಜವಾಬ್ದಾರಿಯಲ್ಲಿ ಎಂದೂ ಲೋಪವಾಗಿಲ್ಲ. ಯಾವ ಕೆಲಸವಾದರೂ ಶ್ರದ್ಧೆ-ಶ್ರಮವಿದ್ದರೆ ಯಶಸ್ಸು ಖಚಿತ ಎಂಬುದಕ್ಕೆ ದತ್ತಣ್ಣ ನಿದರ್ಶನ. ಮೂಲತಃ ಚಿಕ್ಕಮಗಳೂರಿನ ಎನ್.ಆರ್.ಪುರದ ದತ್ತಾತ್ರಿ, ಶಿವಮೊಗ್ಗಕ್ಕೆ ಬಂದು ದತ್ತಣ್ಣನಾದ ಕಥೆಯೇ ರೋಚಕ. ಬಿಎ ವ್ಯಾಸಂಗಕ್ಕೆಂದು ಶಿವಮೊಗ್ಗಕ್ಕೆ ಬಂದಾಗ ಕುಟುಂಬ ನಿರ್ವಹಣೆಗೆ ಪತ್ರಿಕೆಗಳ ಬಂಡಲ್ ಬಸ್​ಗೆ ಹಾಕುವ ಕಾಯಕ ಆಯ್ದುಕೊಂಡರು. ಬಳಿಕ ಸರ್ಕಾರಿ ವೃತ್ತಿಯ ಅವಕಾಶಗಳಿದ್ದರೂ ತಿರಸ್ಕರಿಸಿದರು. 25 ರೂ. ವೇತನದಿಂದ ಆರಂಭಿಸಿದ ಈ ವೃತ್ತಿಯೇ ಇಂದು ದತ್ತಣ್ಣನಿಗೆ ನೆಮ್ಮದಿ ಜೀವನ ನಡೆಸಲು ಸಾಧ್ಯವಾಗಿಸಿದೆ. ಒಬ್ಬ ಪುತ್ರ ಬೆಂಗಳೂರಿನಲ್ಲಿ ಲೆಕ್ಕಪರಿಶೋಧಕನಾಗುವ ಹಾದಿಯಲ್ಲಿದ್ದರೆ, ಇನ್ನೊಬ್ಬ ಪುತ್ರ ಕೆಲವೇ ದಿನಗಳಲ್ಲಿ ಇಂಜಿನಿಯರಿಂಗ್ ಪದವೀಧರನಾಗಲಿದ್ದಾನೆ. ವೃತ್ತಿ ಬದುಕಿನ ಎಲ್ಲ ಸವಾಲು ಎದುರಿಸಿ ಸಮರ್ಥವಾಗಿ ಬದುಕು ಕಟ್ಟಿಕೊಂಡ ದತ್ತಣ್ಣ ಹಲವರಿಗೆ ಮಾದರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net