ಕಿತ್ತಿನಾಮಂಗಲ ಕೆರೆಯ ಹಿನ್ನೀರಿನಲ್ಲಿ ನವವಿವಾಹಿತನ ಶವ ಪತ್ತೆ

04 huliyurudugrga
Published on

ಹುತ್ರಿದುರ್ಗ: ಕುಣಿಗಲ್ ತಾಲೂಕಿನ ಕಿತ್ತಿನಾಮಂಗಲ ಕೆರೆಯ ಹಿನ್ನೀರಿನಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಸೀನಪ್ಪನಹಳ್ಳಿಯ ಮಂಜುನಾಥ್ (26) ಶವ ಪತ್ತೆಯಾಗಿದೆ.

ಗ್ರಾಮದ ಸ್ನೇಹಿತರೊಂದಿಗೆ ಶುಕ್ರವಾರ ಕುಣಿಗಲ್ನಲ್ಲಿ ಕೇಕ್ ಕತ್ತರಿಸಿ ಜನ್ಮದಿನ ಆಚರಿಸಿಕೊಂಡು ಮನೆಗೆ ಬಂದಿದ್ದ ಮಂಜುನಾಥ್, ರಾತ್ರಿ 11 ಗಂಟೆ ಸಂದರ್ಭದಲ್ಲಿ ಮೊಬೈಲ್ ಕರೆ ಬಂದ ಕಾರಣ ಮನೆಯಿಂದ ಹೋರ ಹೋದವನು ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.

ಆತ ತೆಗೆದುಕೊಂಡು ಹೋದ ಬೈಕ್ ಕೂಡ ಕೆರೆಯಲ್ಲಿ ಪತ್ತೆಯಾಗಿದ್ದು, ಮೃತದೇಹದ ಮೇಲೆ ಗಾಯದ ಗುರುತು ಪತ್ತೆಯಾಗಿವೆ. ಮಂಜುನಾಥ್ ವೃತ್ತಿಯಲ್ಲಿ ಅಡುಗೆ ಭಟ್ಟನಾಗಿದ್ದ. ಮದುವೆಯಾಗಿ ವರ್ಷವೂ ತುಂಬಿಲ್ಲ. ಮೃತನಿಗೆ ತಾಯಿ, ಪತ್ನಿ ಇದ್ದಾರೆ.

ಕುಣಿಗಲ್ ಉಪವಿಭಾಗದ ಡಿವೈಎಸ್ಪಿ ಲಕ್ಷ್ಮಿಕಾಂತ ಹಾಗೂ ಸಿಪಿಐ ಗುರುಪ್ರಸಾದ್, ಅಪರಾಧ ವಿಭಾಗದ ಪೊಲೀಸರು ಪರಿಶೀಲಿಸಿದ್ದು, ಕುಣಿಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶ್ವಾನದಳ ಮೃತದೇಹ ಪತ್ತೆಯಾದ ಸ್ಥಳದಿಂದ ಸುಮಾರು ಎರಡುವರೆ ಕಿಲೋಮೀಟರ್ ದೂರದವರೆಗೆ ತೆರಳಿ ಪರಿಶೀಲಿಸಿದ್ದು, ಸ್ಥಳದಲ್ಲಿ ಮದ್ಯ ಸೇವಿಸಿರುವ ಹಾಗೂ ರಕ್ತದ ಗುರುತುಗಳು ಪತ್ತೆಯಾಗಿವೆ. ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದಿದ್ದು, ಕುಟುಂಬಸ್ಥರಿಗೆ ಶವ ಹಸ್ತಾಂತರ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net