ಭಾರತೀಯ ಸ್ತ್ರೀಯರ ಅವಹೇಳನ ಮಾಡಿದ್ದ ನಿಕ್ಸನ್

Nixon
Published on

ವಾಷಿಂಗ್ಟನ್: ವಾಟರ್​ಗೇಟ್ ಹಗರಣಕ್ಕೆ ಸಿಲುಕಿ 1974ರಲ್ಲಿ ರಾಜೀನಾಮೆ ನೀಡಿದ್ದ ಅಮೆರಿಕದ ಅಧ್ಯಕ್ಷ ರಿಚರ್ಡ್ ನಿಕ್ಸನ್, ಭಾರತೀಯ ಮಹಿಳೆಯರನ್ನು ಅವಹೇಳನ ಮಾಡಿದ್ದ ಟೇಪ್​ಗಳು ಈಗ ಬಹಿರಂಗವಾಗಿವೆ. ಅವರ ಈ ನಿಲುವು ಅಂದಿನ ದಿನಗಳಲ್ಲಿ ಭಾರತ ಹಾಗೂ ದಕ್ಷಿಣ ಏಷ್ಯಾ ವಿಷಯದಲ್ಲಿ ಅಮೆರಿಕದ ನೀತಿಯನ್ನು ಪ್ರಭಾವಿಸಿದ್ದವು. ಅಮೆರಿಕದಲ್ಲಿ ಈಗ ಅಧ್ಯಕ್ಷೀಯ ಚುನಾವಣಾ ಕಾವು ಏರುತ್ತಿರುವ ವೇಳೆ ಬಹಿರಂಗವಾಗಿರುವ ಈ ಸ್ಪೋಟಕ ಮಾಹಿತಿ ಯಾವ ರೀತಿ ಪರಿಣಾಮವುಂಟು ಮಾಡುತ್ತದೆೆಂದು ಕಾದುನೋಡಬೇಕು.

1971ರ ಭಾರತ-ಪಾಕಿಸ್ತಾನ ಯುದ್ಧದ ಸಮಯದಲ್ಲಿ ಭಾರತವನ್ನು ಮಣಿಸಲು ನಿಕ್ಸನ್ ಬಂಗಾಳ ಕೊಲ್ಲಿಗೆ ನೌಕಾಪಡೆ ತುಕಡಿಯನ್ನು ರವಾನಿಸಿದ್ದರು. ಆಗ ಅಮೆರಿಕ-ಭಾರತ ಸಂಬಂಧ ಅಧೋಗತಿಯಲ್ಲಿದ್ದಾಗ ನಿಕ್ಸನ್ ಮಾಡಿದ್ದ ಲಿಂಗಭೇದಭಾವದ (ಸೆಕ್ಸಿಸ್ಟ್) ಮತ್ತು ಜನಾಂಗೀಯ ತಾರತಮ್ಯದ ಹೇಳಿಕೆಗಳಿರುವ ಟೇಪ್​ಗಳನ್ನು ಪ್ರಿನ್ಸ್​ಟನ್ ವಿಶ್ವವಿದ್ಯಾಲಯದ ವಿದ್ವಾಂಸ ಗ್ಯಾರಿ ಬಾಸ್ ಸಂಗ್ರಹಿಸಿದ್ದಾರೆ. ಬಾಸ್ ಅವರ ‘ದಿ ಬ್ಲಡ್ ಟೆಲಿಗ್ರಾಂ: ನಿಕ್ಸನ್, ಕಿಸಿಂಜರ್ ಅಂಡ್ ಎ ಫರ್ಗಾಟನ್ ಜನೊಸೈಡ್’ ಕೃತಿ ನಿಕ್ಸನ್ ಆಡಳಿತದಲ್ಲಿ್ಲ ಅಮೆರಿಕ ಅನುಸರಿಸಿದ್ದ ನೀತಿಯನ್ನು ವಿವರಿಸಿದೆ.

ರಾಷ್ಟ್ರೀಯ ಭದ್ರತಾ ಸಲಹೆಗಾರ ಹೆನ್ರಿ ಕಿಸಿಂಜರ್ ಮತ್ತು ಶ್ವೇತಭವನ ಸಿಬ್ಬಂದಿ ಮುಖ್ಯಸ್ಥ ಎಚ್.ಆರ್. ಹಾಲ್ಡ್ ಮ್ಯಾನ್ ಜತೆ ಅಧ್ಯಕ್ಷ ನಿಕ್ಸನ್ 1971ರ ಜೂನ್​ನಲ್ಲಿ ಓವಲ್ ಕಚೇರಿಯಲ್ಲಿ ನಡೆಸಿದ ಸಂಭಾಷಣೆಯಲ್ಲಿ ಆಘಾತಕಾರಿ ಅಂಶಗಳಿವೆ ಎಂದು ಗ್ಯಾರಿ ಬಾಸ್ ಹೇಳಿದ್ದಾರೆ. ನಂತರದ ದಿನಗಳಲ್ಲಿ ಹೆನ್ರಿ ಕಿಸಿಂಜರ್ ಅವರು ಈ ಮಾತುಗಳ ಬಗ್ಗೆ ಕ್ಷಮೆಯಾಚಿಸಿದ್ದರು.

ಇಂದಿರಾ ಬಗ್ಗೆ ನಿಂದನೆ

1971ರಲ್ಲಿ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿಯವರನ್ನು ‘ಕೊಳಕಿ’ ಎಂದೂ ಭಾರತೀಯರನ್ನು ಸಾರಾಸಗಟಾಗಿ ‘ಬಾಸ್ಟರ್ಡ್’ ಎಂದು ನಿಕ್ಸನ್ ನಿಂದಿಸಿದ್ದು ದಾಖಲಾಗಿದೆ. ‘ನಿಸ್ಸಂದೇಹವಾಗಿ ಭಾರತೀಯ ಮಹಿಳೆಯರು ಜಗತ್ತಿನಲ್ಲೇ ಅನಾಕರ್ಷಣೀಯರು. ಅವರು ಲೈಂಗಿಕ ಆಸಕ್ತಿ ಕುಂದುವಂತೆ ಮಾಡುತ್ತಾರೆ’ ಎಂದೆಲ್ಲ ಬಡಬಡಿಸಿದ್ದು ಟೇಪ್​ಗಳಲ್ಲಿ ದಾಖಲಾಗಿದೆ.

ನಿಕ್ಸನ್ ಆಡಳಿತದಲ್ಲಿ ದಕ್ಷಿಣ ಏಷ್ಯಾ ಕುರಿತ ಅಮೆರಿಕದ ನೀತಿಯು ಭಾರತೀಯರ ಕುರಿತ ದ್ವೇಷಭಾವನೆ ಹಾಗೂ ಭಾರತೀಯರ ಲೈಂಗಿಕತೆ ಕುರಿತ ಧೋರಣೆಯಿಂದ ಪ್ರಭಾವಿತವಾಗಿತ್ತು ಎನ್ನುವುದು ಟೇಪ್​ಗಳ ಪೂರ್ಣ ವಿವರದಿಂದ ಸಾಬೀತಾಗುತ್ತದೆ | ಗ್ಯಾರಿ ಬಾಸ್ ಪ್ರಿನ್ಸ್​ಟನ್ ವಿಶ್ವವಿದ್ಯಾಲಯದ ವಿದ್ವಾಂಸ

ನಿಕ್ಸನ್ ಕೊಳಕುಮಾತು

  • ಇನ್ನೊಂದು ಸಂದರ್ಭದಲ್ಲಿ, 1971 ನವೆಂಬರ್ 4ರಂದು ಶ್ವೇತಭವನದಲ್ಲಿ ಇಂದಿರಾ ಗಾಂಧಿ ಜತೆ ನಡೆಸಿದ ಸಭೆಯ ನಂತರ ವಿರಾಮದ ವೇಳೆ ಕಿಸಿಂಜರ್​ರೊಂದಿಗೆ ಭಾರತೀಯರ ಬಗ್ಗೆ ತೀರಾ ಅವಹೇಳನಕರ ಟಿಪ್ಪಣಿ ಮಾಡಿದ್ದರು.
  • ಇಂದಿರಾರನ್ನು ಖಂಡಿಸುವ ವಿಚಾರ ಉಲ್ಲೇಖವಾದಾಗ, ‘ಭಾರತೀಯರು ಹೇಗೆ ವಂಶಾಭಿವೃದ್ಧಿ ಮಾಡುತ್ತಾರೋ ನನಗಂತೂ ಗೊತ್ತಿಲ್ಲ’ ಎಂದು ನಿಕ್ಸನ್ ಪ್ರತಿಕ್ರಿಯಿಸಿದ್ದರು.

ನಿಕ್ಸನ್ ಪ್ರವರ

  • 913 ಜನವರಿ 9ರಂದು ಜನನ. 1994 ಏಪ್ರಿಲ್ 22ರಂದು ನಿಧನ.
  • ರಿಪಬ್ಲಿಕನ್ ಪಕ್ಷದ ನಾಯಕ.
  • 1969 ಜನವರಿ 20ರಿಂದ 1974ರ ಆಗಸ್ಟ್ 9ವರೆಗೆ ಅಮೆರಿಕದ 37ನೇ ಅಧ್ಯಕ್ಷ.
  • 1953ರಿಂದ 1961ರವರೆಗೆ ಉಪಾಧ್ಯಕ್ಷ.
  • 1972ರ ಅಧ್ಯಕ್ಷೀಯ ಚುನಾವಣೆ ಸಮಯ ಹಾಗೂ ನಂತರ ಕಾಡಿದ ವಾಟರ್​ಗೇಟ್ ಹಗರಣದಿಂದ ಅಧಿಕಾರಕ್ಕೆ ಕುತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net