ನಿರ್ಜನ ಪ್ರದೇಶದಲ್ಲಿ ಅಳುವ ಶಬ್ಧ ಕೇಳಿ ಅದರತ್ತ ನಡೆದ ದನಕಾಯುವವನಿಗೆ ಕಾದಿತ್ತು ಶಾಕ್​!

Child
Published on

ವಿಜಯವಾಡ: ನಿರ್ಜನ ಪ್ರದೇಶವೊಂದರಲ್ಲಿ ತನ್ನ ಜಾನುವಾರುಗಳನ್ನು ಮೇಯಿಸುತ್ತಿದ್ದ ವ್ಯಕ್ತಿಯೊಬ್ಬ ಇದ್ದಕ್ಕಿದ್ದಂತೆ ಮಗು ಅಳುವ ಶಬ್ಧವನ್ನು ಕೇಳಿಸಿಕೊಂಡು ಶಬ್ಧದ ದಿಕ್ಕಿನೆಡೆಗೆ ನಡೆದ ಆತನಿಗೆ ಅಕ್ಷರಶಃ ಆಘಾತ ಎದುರಾಗಿತ್ತು.

ಶಬ್ಧವನ್ನು ಹುಡುಕಿ ಬಂದ ದನಕಾಯುವವನಿಗೆ ಕಣ್ಣಿಗೆ ಕಂಡಿದ್ದು ಗುಂಡಿಯೊಂದರಲ್ಲಿ ಜೀವಂತವಾಗಿ ಅರ್ಧ ಸಮಾಧಿ ಮಾಡಿದ್ದ ನವಜಾತ ಶಿಶು. ಅದನ್ನು ನೋಡಿದ ಆತನ ಎದೆ ಒಮ್ಮೆ ಝಲ್​ ಎಂದಿತು. ಅಂದಹಾಗೆ ಈ ಘಟನೆ ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಯೆಟಪಕ ಮಂಡಲದ ಕೃಷ್ಣವರಂ ಗ್ರಾಮದಲ್ಲಿ ಶನಿವಾರ ಬೆಳಗ್ಗೆ ನಡೆದಿದೆ.

ನವಜಾತ ಶಿಶು ನೋಡಿದ ದನಕಾಯುವವ ತಕ್ಷಣ ಸ್ಥಳೀಯರಿಗೆ ಮಾಹಿತಿ ಮುಟ್ಟಿಸಲು ಎಲ್ಲರು ಸ್ಥಳಕ್ಕೆ ಆಗಮಿಸುತ್ತಾರೆ. ಬಳಿಕ ಮಹಿಳೆಯೊಬ್ಬರು ಮಣ್ಣಿನಡಿ ಸಿಲುಕಿದ್ದ ಮಗುವನ್ನು ಎತ್ತಿಕೊಂಡು ನೀರಿನಿಂದ ತೊಳೆದು ಶುಚಿಗೊಳಿಸುತ್ತಾರೆ.

ಘಟನೆ ಬಗ್ಗೆ ಮಾತನಾಡಿರುವ ಯಟಪಕ ಠಾಣೆಯ ಸಬ್​ ಇನ್ಸ್​ಪೆಕ್ಟರ್​, ಮಗು ಇರುವ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದರು. ತಕ್ಷಣ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ತಕ್ಷಣ ಮಗುವನ್ನು ಆಸ್ಪತ್ರೆಗೆ ದಾಖಲಿಸಿದೆವು. ಮಗು ಸುಮಾರು 1 ಕೆ.ಜಿ ತೂಗುತ್ತದೆ. ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಇನ್ನು ಪೊಲೀಸರು ದಾಖಲಿಸಿರುವ ಪ್ರಕರಣದಡಿಯಲ್ಲಿ ಮಗುವಿನ ಪಾಲಕರು ಎಸಗಿರುವುದು ಕ್ಷಮಿಸಲಾರದ ತಪ್ಪಾಗಿದ್ದು, ಆರೋಪಿಗಳಿಗೆ 7 ವರ್ಷ ಜೈಲು ಶಿಕ್ಷೆಯಾಗಲಿದೆ. ಅಲ್ಲದೆ, ದಂಡವನ್ನು ತೆರಬೇಕಾಗುತ್ತದೆ.

ಮಗುವನ್ನು ರಕ್ಷಣೆ ಮಾಡಿದ ಮಹಿಳೆ ಮಾತನಾಡಿ, ಮಗುವನ್ನು ಮಣ್ಣಿನಡಿ ಹೂಳಲು ಯತ್ನಿಸಿದ ದಿನದಂದೇ ಮಗು ಜನಿಸಿದಂತೆ ಕಾಣುತ್ತದೆ. ಮಗುವನ್ನು ಸ್ಥಳೀಯ ಆರೋಗ್ಯ ಸಿಬ್ಬಂದಿಗೆ ಹಸ್ತಾಂತರ ಮಾಡಿದ್ದೇವೆ. ಸದ್ಯ ಮಗುವಿಗೆ ಭದ್ರಾಚಲಂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಮಗುವಿನ ಆರೋಗ್ಯ ಸ್ಥಿರವಾಗಿದೆ ಎಂದಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net