ಟೇಕಾಫ್​​​ ವೇಳೆ ವಿಮಾನದಲ್ಲಿ ಕಾಣಿಸಿಕೊಂಡ ಬೆಂಕಿ; ದಯವಿಟ್ಟು ಕಾಪಾಡಿ ಎಂದು ಕಿರುಚಿದ ಪ್ರಯಾಣಿಕರು | Video Viral

Untitled design - 2025-02-03T155722.384
Published on

ಹೂಸ್ಟನ್​​: ಜಾರ್ಜ್ ಬುಷ್ ಇಂಟರ್‌ಕಾಂಟಿನೆಂಟಲ್ ಏರ್‌ಪೋರ್ಟ್‌ನಲ್ಲಿ ಟೇಕಾಫ್​​ ಆಗುವ ಸಮಯದಲ್ಲಿ ಹೂಸ್ಟನ್‌ನಿಂದ ನ್ಯೂಯಾರ್ಕ್‌ಗೆ ಹೊರಟಿದ್ದ ಯುನೈಟೆಡ್ ಏರ್‌ಲೈನ್ಸ್ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ವಿಮಾನದಲ್ಲಿದ್ದ ಪ್ರಯಾಣಿಕರು ಚಿರಾಡುತ್ತಿರುವ ವಿಡಿಯೋ ವೈರಲ್​(Video Viral) ಆಗಿದೆ.

ವಿಮಾನ ಟೇಕಾಫ್​​​​ಗೆ ತಯಾರಿ ನಡೆಸುತ್ತಿದ್ದಾಗ ರೆಕ್ಕೆಗೆ ಬೆಂಕಿ ತಗುಲಿದ ಹಿನ್ನೆಲೆಯಲ್ಲಿ ವಿಮಾನವನ್ನು ಸ್ಥಳಾಂತರಿಸಬೇಕಾಯಿತು. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಹೂಸ್ಟನ್ ಅಗ್ನಿಶಾಮಕ ಇಲಾಖೆ (ಎಚ್‌ಎಫ್‌ಡಿ) ತಿಳಿಸಿದೆ.

ಫ್ಲೈಟ್ 1382 ಜಾರ್ಜ್ ಬುಷ್ ಇಂಟರ್‌ಕಾಂಟಿನೆಂಟಲ್ ಏರ್‌ಪೋರ್ಟ್‌ನಿಂದ ಲಾಗಾರ್ಡಿಯಾ ಏರ್‌ಪೋರ್ಟ್‌ಗೆ ಸ್ಥಳೀಯ ಸಮಯ ಬೆಳಗ್ಗೆ 8:30ಕ್ಕೆ ಟೇಕಾಫ್​​ ಆಗಲು ನಿರ್ಧರಿಸಿದಂತೆ ಸಿಬ್ಬಂದಿ ಎಂಜಿನ್ ಸಿಗ್ನಲ್ ಸ್ವೀಕರಿಸಿದರು. ಆದರೆ ರನ್‌ವೇಯಲ್ಲಿ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡ ಬಳಿಕ ಟೇಕಾಫ್​​ ಅನ್ನು ಸ್ಥಗಿತಗೊಳಿಸಿದರು ಎಂದು ಅಪಘಾತದ ಬಗ್ಗೆ ಮಾಹಿತಿ ನೀಡಿದ ವಿಮಾನಯಾನ ಸಂಸ್ಥೆ ತಿಳಿಸಿದೆ.

ಈ ಘಟನೆಯಿಂದಾಗಿ ಪ್ರಯಾಣಿಕರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಬೆಂಕಿ ಹೊತ್ತಿಕೊಂಡಿರುವುದನ್ನು ಕಂಡು ಪ್ರಯಾಣಿಕರು ಚೀರಾಡುತ್ತಿರುವ ವಿಡಿಯೋ ಕೂಡ ವೈರಲ್​ ಆಗಿದೆ. ಇದರಲ್ಲಿ ಪ್ರಯಾಣಿಕರೊಬ್ಬರು, ದಯವಿಟ್ಟು.. ದಯವಿಟ್ಟು ನಮ್ಮನ್ನು ಇಲ್ಲಿಂದ ಹೊರಹಾಕಿ ಎಂದು ಹೇಳುತ್ತಿರುವುದನ್ನು ಕೇಳಬಹುದು.

ವಿಮಾನದಲ್ಲಿ 104 ಪ್ರಯಾಣಿಕರು ಮತ್ತು ಐದು ಸಿಬ್ಬಂದಿ ಇದ್ದರು. ಎಲ್ಲಾ ಪ್ರಯಾಣಿಕರನ್ನು ಸ್ಲೈಡ್‌ಗಳು ಮತ್ತು ಮೆಟ್ಟಿಲುಗಳ ಮೂಲಕ ರನ್‌ವೇಯಲ್ಲಿ ಸುರಕ್ಷಿತವಾಗಿ ಇಳಿಸಲಾಯಿತು ಮತ್ತು ಬಸ್‌ನಲ್ಲಿ ಟರ್ಮಿನಲ್‌ಗೆ ಕರೆದೊಯ್ಯಲಾಯಿತು ಎಂದು ನ್ಯೂಯಾರ್ಕ್​ ಪೋಸ್ಟ್​​ ವರದಿ ಮಾಡಿದೆ. ಈ ವಿಚಾರದಲ್ಲಿ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ ಎಂದು ತಿಳಿಸಿದೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net