ತಲಕಾಡಿನಲ್ಲಿ ಪ್ರವಾಸಿಗರ ಸಂಭ್ರಮ

20200101_153504
Published on

ತಲಕಾಡು: ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಪ್ರಸಿದ್ಧ ಪ್ರವಾಸಿತಾಣ ತಲಕಾಡಿಗೆ ಬುಧವಾರ ಪ್ರವಾಸಿಗರ ದಂಡೇ ಹರಿದು ಬಂದಿತ್ತು. ಹಳೇತಲಕಾಡಿನ ನಿಸರ್ಗಧಾಮದ ಕಾವೇರಿ ನದಿ ದಡ ಜನಸಾಗರದಿಂದ ತುಂಬಿ ತುಳುಕುತ್ತಿತ್ತು.
ಪಂಚಲಿಂಗ ದೇವಾಲಯಗಳು, ಮರಳುಗುಡ್ಡದ ಕಾಡು ಪ್ರದೇಶ, ಕೀರ್ತಿನಾರಾಯಣಸ್ವಾಮಿ ದೇವಾಲಯ, ಮಾಧವಮಂತ್ರಿ ಡ್ಯಾಂ, ಮುಡುಕುತೊರೆ ಮಲ್ಲಿಕಾರ್ಜುನಸ್ವಾಮಿ ದೇವಾಲಯ, ಕಾವೇರಿ ನದಿ ಪಾತ್ರದ ಸ್ನಾನ ಘಟ್ಟ, ಹಳೇತಲಕಾಡು ಆಚೆ ದಡದ ತಡಿಮಾಲಂಗಿ ನದಿಪಾತ್ರದಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಹೊಸವರ್ಷವನ್ನು ಸಂಭ್ರಮಿಸಿದರು.
ಮಹಿಳೆಯರು ಮಕ್ಕಳೆನ್ನದೆ ಎಲ್ಲರೂ ಕಾವೇರಿ ನದಿಯಲ್ಲಿ ಆಟವಾಡಿದರೆ ಯುವಕ ಯುವತಿಯರು ದಡದಲ್ಲಿ ಕುಣಿದು ಕುಪ್ಪಳಿಸಿದರು. ಇನ್ನೂ ಕೆಲ ಪ್ರವಾಸಿಗರು ಹರಿಗೋಲು ತೆಪ್ಪದಲ್ಲಿ ಜಲವಿಹಾರ ನಡೆಸಿದರು. ಮಿನಿಬಸ್, ಕ್ಯಾಬ್, ಕಾರು, ಆಟೋ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಬೈಕ್‌ಗಳಲ್ಲಿ ಗೆಳೆಯರೊಂದಿಗೆ ಬಂದ ಯುವಕರಲ್ಲಿ ಹೊಸವರ್ಷದ ಹುಮ್ಮಸ್ಸು ಇಮ್ಮಡಿಗೊಳಿಸಿತ್ತು. ನದಿಪಾತ್ರದ ಮರಳಲ್ಲಿ ಬೈಕ್ ವ್ಹೀಲಿಂಗ್ ಮಾಡಿದರೆ ಇನ್ನೂ ಕೆಲವರು ಕಬಡ್ಡಿ, ಚೆಂಡಿನಾಟವಾಡಿ ಸಂತಸ ಪಟ್ಟರು. ಕೆಲವು ದಿನದಿಂದ ಇಲ್ಲಿನ ಪ್ರವಾಸಿ ತಾಣಗಳ ಬಳಿ ಸಾಧಾರಣವಾಗಿದ್ದ ವ್ಯಾಪಾರ ಚಟುವಟಿಕೆ ಇಂದು ಭರ್ಜರಿಯಾಗಿ ನಡೆಯಿತು.
ಮಧ್ಯಾಹ್ನದ ವೇಳೆಗೆ ಪ್ರವಾಸಿಗರ ಸಂಖ್ಯೆ ಹೆಚ್ಚಿದ ಹಿನ್ನೆಲೆಯಲ್ಲಿ ಹಳೇತಲಕಾಡು , ನಿಸರ್ಗಧಾಮದ ಅರಣ್ಯ ಪ್ರದೇಶ, ಪಂಚಲಿಂಗಪ್ರಧಾನ ವೈದ್ಯನಾಥೇಶ್ವರ ಪುಷ್ಕರಣಿ ಸರೋವರದಲ್ಲಿ ಪಾಕಿಂಗ್ ಸಮಸ್ಯೆ ಹೆಚ್ಚಾಯಿತು. ಈ ಹಿನ್ನೆಲೆಯಲ್ಲಿ ಹಳೇತಲಕಾಡಿಗೆ ತೆರಳುವ ಪ್ರವಾಸಿ ವಾಹನಗಳಿಗೆ ಏಕಮುಖ ಸಂಚಾರಕ್ಕೆ ವ್ಯವಸ್ಥೆ ಮಾಡಿದ್ದ ಪೊಲೀಸರು, ಹೊಸ ತಲಕಾಡಿನ ಭತ್ತದ ಗದ್ದೆ ಬಯಲಲ್ಲಿ ನಿಲುಗಡೆಗೆ ವ್ಯವಸ್ಥೆ ಮಾಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net