

ನವದೆಹಲಿ: ವಿಶ್ವದ ಆರೋಗ್ಯ ವ್ಯವಸ್ಥೆ ಮೇಲೆ ಕರೊನಾ ಬೀರಿರುವ ಪರಿಣಾಮ ಸದ್ಯ ಅಂತ್ಯವಾಗುವ ಲಕ್ಷಣ ಗೋಚರಿಸುತ್ತಿಲ್ಲ. ಹೀಗಾಗಿ ಕಳೆದ 20 ವರ್ಷದಿಂದ ಸಾಧಿಸಲಾಗಿರುವ ಆರೋಗ್ಯ ವ್ಯವಸ್ಥೆ ಪ್ರಗತಿಯನ್ನು ಮುನ್ನಡೆಸಲು ಎಲ್ಲ ರಾಷ್ಟ್ರಗಳು ಕೈಗೊಳ್ಳಬೇಕಾದ ಪ್ರಮುಖ ಐದು ಅಂಶಗಳನ್ನು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಬಿಡುಗಡೆ ಮಾಡಿದೆ. 2021ರಲ್ಲಿ ಕರೊನಾ ವಿರುದ್ಧ ಹೋರಾಡುವುದರ ಜತೆಗೆ ವಿಶ್ವಾದ್ಯಂತದ ಎಲ್ಲ ರಾಷ್ಟ್ರಗಳು ಸಂಭಾವ್ಯ ಇತರ ರೋಗಗಳ ವಿರುದ್ಧ ಆರೋಗ್ಯ ವ್ಯವಸ್ಥೆಯನ್ನು ಹೆಚ್ಚಿಸಲು ಶ್ರಮವಹಿಸಬೇಕು ಎಂದು ಡಬ್ಲ್ಯುಎಚ್ಒ ಸಲಹೆ ನೀಡಿದೆ.
ಕರೊನಾ ಲಸಿಕೆಗಳು ಎಲ್ಲ ರಾಷ್ಟ್ರಗಳಿಗೂ ಲಭ್ಯವಾಗುವಂತೆ ನೋಡಿಕೊಳ್ಳುವುದು ಮೊದಲ ಆದ್ಯತೆಯಾಗಿದೆ. ಅಗತ್ಯ ರಾಷ್ಟ್ರಗಳಿಗೆ ಲಸಿಕೆ, ಪರೀಕ್ಷಾ ಕಿಟ್ ಸೇರಿದಂತೆ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಬೇಕು. ಬಡ ರಾಷ್ಟ್ರಗಳಿಗೆ ಹಣದ ನೆರವು ನೀಡುವುದು ಮುಖ್ಯ ಎಂದು ಡಬ್ಲ್ಯುಎಚ್ಒ ಹೇಳಿದೆ.
ಎಲ್ಲರೂ ಸುರಕ್ಷಿತವಾಗಿರುವವರೆಗೆ ಯಾರೂ ಸುರಕ್ಷಿತರಲ್ಲ. ಹೀಗಾಗಿ ಎಲ್ಲ ದೇಶಗಳನ್ನು ಒಟ್ಟಿಗೆ ಆರೋಗ್ಯ ವ್ಯವಸ್ಥೆ ಅಭಿವೃದ್ಧಿಯೆಡೆಗೆ ಕೊಂಡೊಯ್ಯಬೇಕು. ವಿಶ್ವಾದ್ಯಂತ ಆರೋಗ್ಯ ಸುರಕ್ಷತೆಯನ್ನು ನಿರ್ವಿುಸುವುದು ಮುಖ್ಯ. ಆರೋಗ್ಯ ಕಾರ್ಯಕರ್ತರಿಗೆ ಉತ್ತಮ ತರಬೇತಿ ನೀಡಬೇಕು ಹಾಗೂ ಗುಣಮಟ್ಟದ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಬೇಕು ಎಂದು ಹೇಳಿದೆ. ಮುಂದಿನ ವರ್ಷ ಎಲ್ಲ ದೇಶಗಳಲ್ಲಿ ಆರೋಗ್ಯ ಸೇವೆಗಳನ್ನು ಹೆಚ್ಚಿಸಬೇಕು. ಪ್ರತಿಯೊಬ್ಬರಿಗೂ ಆರೋಗ್ಯ ಭದ್ರತೆಯನ್ನು ಖಾತ್ರಿಪಡಿಸಬೇಕು ಹಾಗೂ ಅವರು ಬಡತನ ರೇಖೆಗಿಂತ ಕೆಳಗೆ ಬರದಂತೆ ನೋಡಿಕೊಳ್ಳಬೇಕು ಎಂದು ಹೇಳಿದೆ.
ಆರೋಗ್ಯ ವ್ಯವಸ್ಥೆಯಲ್ಲಿ ಲಿಂಗ, ಜನಾಂಗೀಯತೆ, ಆದಾಯ, ಶಿಕ್ಷಣ, ಉದ್ಯೋಗ ಸೇರಿ ಮುಂತಾದ ವಿಷಯಗಳ ಆಧಾರಿತ ಅಸಮಾನತೆಯನ್ನು ತೊಲಗಿಸಬೇಕು. ಜನರ ಸಾವಿನ ಪ್ರಮುಖ 10 ಕಾರಣಗಳಲ್ಲಿ 7 ಕಾರಣಗಳು ಸಾಂಕ್ರಾಮಿಕ ಅಲ್ಲದ ಕಾಯಿಲೆಗಳಾಗಿವೆ. ಹೃದ್ರೋಗ, ಕ್ಯಾನ್ಸರ್ ಮತ್ತು ಮಧುಮೇಹದಂತಹ ಸಾಂಕ್ರಾಮಿಕವಲ್ಲದ ಕಾಯಿಲೆಗಳಿಗೆ ಚಿಕಿತ್ಸೆ ಅಭಿವೃದ್ಧಿ ಪಡಿಸಬೇಕು ಎಂದು ಡಬ್ಲ್ಯುಎಚ್ಒ ಹೇಳಿದೆ.
150 ಸೈನಿಕರಿಗೆ ಕರೊನಾ ಪಾಸಿಟಿವ್
ಗಣರಾಜ್ಯೋತ್ಸವ ಹಾಗೂ ಸೇನಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ದೆಹಲಿಗೆ ತೆರಳಿದ್ದ ಸುಮಾರು 150 ಸೈನಿಕರಿಗೆ ಕರೊನಾ ಪರೀಕ್ಷೆ ಪಾಸಿಟಿವ್ ತೋರಿಸಿದೆ ಅವರನ್ನೆಲ್ಲ ಕ್ವಾರಂಟೈನ್ಗೆ ಒಳಪಡಿಸಲಾಗಿದೆ ಎಂದು ಸೇನೆಯ ಮೂಲಗಳಿಂದ ತಿಳಿದುಬಂದಿದೆ.
ಲಸಿಕೆಯಿಂದ ಅಲರ್ಜಿ
ಅಮೆರಿಕದ ಬಾಸ್ಟನ್ನಲ್ಲಿ ವೈದ್ಯರೊಬ್ಬರು ಮಾಡರ್ನಾ ಲಸಿಕೆ ಪಡೆದ ಕೆಲವೇ ಸಮಯದಲ್ಲಿ ತೀವ್ರ ಅಲರ್ಜಿ ಸಮಸ್ಯೆಗೆ ಒಳಗಾಗಿದ್ದಾರೆ ಎಂದು ತಿಳಿದುಬಂದಿದೆ. ಬಾಸ್ಟನ್ ವೈದ್ಯಕೀಯ ಕೇಂದ್ರದ ಜೆರಿಯಾಟ್ರಿಕ್ ಆಂಕೊಲಾಜಿಯ ವೈದ್ಯ ಹೊಸೆನ ಸದ್ರ್ಜಾಡೆಹ್ ಡೋಸ್ ಪಡೆದ ಕೂಡಲೇ ತಲೆತಿರುಗುವಿಕೆ ಮತ್ತು ಹೃದಯ ಸಂಬಂಧಿ ಸಮಸ್ಯೆಗೆ ಒಳಗಾಗಿದ್ದಾರೆ.
ತ್ವರಿತ ಪ್ರಯೋಗ ಕರೊನಾ ಸೋಂಕಿನ ವಿರುದ್ಧ ತ್ವರಿತ ರಕ್ಷಣೆ ನೀಡುವ ನವೀನ ಪ್ರತಿಕಾಯಗಳನ್ನು ಅಭಿವೃದ್ಧಿ ಪಡಿಸುವ ಚಿಕಿತ್ಸೆಗಳ ಬಗ್ಗೆ ಬ್ರಿಟನ್ನ ವಿಜ್ಞಾನಿಗಳು ಪ್ರಯೋಗಗಳನ್ನು ನಡೆಸುತ್ತಿದ್ದಾರೆ. ಆಸ್ಟ್ರಾಜೆನೆಕಾ ಅಭಿವೃದ್ಧಿಪಡಿಸಿರುವ ಲಾಂಗ್ ಆಕ್ಟಿಂಗ್ ಆಂಟಿ ಬಾಡಿ (ಎಲ್ಎಎಬಿ) ಸೋಂಕಿತರಿಗೆ ತಕ್ಷಣದ ಮತ್ತು ದೀರ್ಘಕಾಲಿನ ರಕ್ಷಣೆ ನೀಡುತ್ತದೆ ಎಂದು ತಜ್ಞರು ಕಂಡುಕೊಂಡಿದ್ದಾರೆ.