

ಬೆಂಗಳೂರು: ಹೊಸ ವರ್ಷ ಇನ್ನೇನು ಬಂದೇ ಬಿಟ್ಟಿದೆ. ಹೊಸ ವರ್ಷವನ್ನು ಬರಮಾಡಿಕೊಳ್ಳಲು ಜನರು ಕಾತುರದಿಂದ ಕಾಯುತ್ತಿದ್ದಾರೆ. ಇದೇ ವೇಳೆಯಲ್ಲಿ ಕೊರೊನಾ ನಾಲ್ಕನೇ ಅಲೆ ಆತಂಕ ಇದ್ದರೂ ಜನರಲ್ಲಿ ಉತ್ಸಾಹ ಒಂಚೂರು ಕಡಿಮೆಯಾಗಿಲ್ಲ. ಇದರ ನಡುವೆ ಬೆಂಗಳೂರು ಪೊಲೀಸರು ಕೂಡ ಒಂದು ಒಳ್ಳೆ ಸುದ್ದಿ ಕೊಟ್ಟಿದ್ದಾರೆ.
ಹೌದು, ವರ್ಷಾಚರಣೆಯಲ್ಲಿ ಭಾಗವಹಿಸಿ ಸಂಭ್ರಮದಿಂದ ಕುಡಿದು ಟೈಟ್ ಆಗಿ ರಸ್ತೆಯಲ್ಲೇ ಬಿದ್ದರೇ ಗತಿಯೇನು ಎಂದು ಯೋಚಿಸುವವರಿಗಾಗಿಯೇ ಬೆಂಗಳೂರಿನ ಈಶಾನ್ಯ ಹಾಗೂ ಪೂರ್ವ ವಿಭಾಗದ ಪೊಲೀಸರು ಹೊಸ ವರ್ಷಕ್ಕೆ ಹೊಸ ಸೇವೆ ನೀಡಲಿದ್ದಾರೆ.
ಕುಡಿದು ಟೈಟಾಗಿ ರಸ್ತೆಯಲ್ಲೇ ಬಿದ್ದವರಿಗೆ ಬೆಂಗಳೂರು ಪೊಲೀಸರು ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಲಿದ್ದಾರೆ. ಆದರೆ, ಈ ವ್ಯವಸ್ಥೆ ಡಿಸೆಂಬರ್ 31ರ ರಾತ್ರಿ ಮಾತ್ರ ಇರಲಿದೆ.
ಬೆಂಗಳೂರು ಆಗ್ನೇಯ ವಿಭಾಗದ ಕೋರಮಂಗಲ, ಮಡಿವಾಳ, ಎಲೆಕ್ಟ್ರಾನಿಕ್ ಸಿಟಿ, ಹೆಚ್ಎಸ್ಆರ್ ಲೇಔಟ್ ನಲ್ಲಿ ಸಂಪೂರ್ಣ ಭದ್ರತೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಹೊಸ ವರ್ಷದ ರಾತ್ರಿ ಕುಡಿದು ಟೈಟಾಗಿ ಪ್ರಜ್ಞೆ ತಪ್ಪಿ ಬೀಳುವವರಿಗೆ, ಬಿದ್ದು ಗಾಯ ಮಾಡಿಕೊಂಡವರಿಗೆ, ಆರೋಗ್ಯ ಸಮಸ್ಯೆ ಉಂಟಾದರೇ ಅಂಥವರಿಗಾಗಿ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಲಾಗುತ್ತಿದೆ.
ಆಗ್ನೇಯ ವಿಭಾಗದಲ್ಲಿ 108 ಪಬ್, ರೆಸ್ಟೋರೆಂಟ್ಗಳಿವೆ, ಪ್ರತಿಯೊಂದು ಪಬ್, ರೆಸ್ಟೋರೆಂಟ್ ಮುಂದೆಯೂ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಿ ಫುಲ್ ಭದ್ರತೆ ಮಾಡಲಾಗಿದೆ. ಮಾಡಲಾಗುತ್ತಿದೆ. ಡಿಸಿಪಿ ಸಿಕೆ ಬಾಬಾ ಅವರ ನೇತೃತ್ವದಲ್ಲಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ.
ಎಲ್ಲಾ ದೊಡ್ಡ ಕಾರ್ಯಕ್ರಮಗಳು ಕಟ್ಟುನಿಟ್ಟಾಗಿ ಹೊರಾಂಗಣದಲ್ಲಿರಬೇಕು. ಸಾಧ್ಯವಾದಷ್ಟು ಬೆಳಕಿರುವಾಗಲೇ ನಡೆಸಬೇಕು. ತಡರಾತ್ರಿ ಮತ್ತು ಮುಂಜಾನೆ ಚಳಿಯನ್ನು ತಪ್ಪಿಸಬೇಕು. ನಿರ್ದಿಷ್ಟವಾಗಿ ಹೋಟೆಲ್‌ಗಳು, ಪಬ್‌ಗಳು, ರೆಸ್ಟೋರೆಂಟ್‌ಗಳು, ಕ್ಲಬ್‌ಗಳು, ರೆಸಾರ್ಟ್‌ಗಳು ಮುಂತಾದ ಒಳಾಂಗಣ ಪ್ರದೇಶಗಳಲ್ಲಿ ಆಸನಗಳ ನಿಗದಿತ ಸಾಮರ್ಥ್ಯವನ್ನು ಮೀರಬಾರದು" ಎಂದು ರಾಜ್ಯದ ಕೊರೊನಾ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.