

ಬೆಂಗಳೂರು: ಆರ್ಥಿಕವಾಗಿ ಐದು ಗ್ಯಾರಂಟಿಗಳನ್ನು ನಿಭಾಯಿಸುವ ವಿಶ್ವಾಸ ಬರುತ್ತಲೇ ಹಣಕಾಸು ಖಾತೆ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಲ್ಪ ಮೈಚಳಿ ಬಿಟ್ಟಂತಿದ್ದು, ಸಚಿವ ಸಂಪುಟದ ಸಹೋದ್ಯೋಗಿಗಳಿಗೆ ಹೊಸ ಕಾರುಗಳ ಸೌಲಭ್ಯ ಕೊಡಮಾಡಿದ್ದಾರೆ.
ನಾಲ್ಕನೇ ಗ್ಯಾರಂಟಿ ಯೋಜನೆಯಾಗಿ ‘ಗೃಹಲಕ್ಷ್ಮಿ’ಗೆ ಅದ್ದೂರಿ ಚಾಲನೆ, ಶತದಿನೋತ್ಸವದ ಕೊಡುಗೆ ನೀಡುವ ಮೂಲಕ ಸಂಪುಟದ ಸದಸ್ಯರ ಸಂಭ್ರವನ್ನೂ ಹೆಚ್ಚಿಸಿದ್ದಾರೆ. ಎಲ್ಲ 33 ಸಚಿವರುಗಳಿಗೆ ಹೊಸ ಇನ್ನೋವಾ ಹೈಕ್ರಾಸ್-ಹೈಬ್ರಿಡ್ ವಾಹನಗಳು ದೊರೆಯಲಿದ್ದು, ಇದಕ್ಕಾಗಿ 9.90 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ.
ಬಿಡದಿ ಸಮೀಪದ ಟೊಯೋಟ ಕಿರ್ಲೋಸ್ಕರ್ ಮೋಟಾರ್ಸ್ ಕಂಪನಿಯಿಂದಲೇ ತಲಾ 30 ಲಕ್ಷ ರೂ. ವೆಚ್ಚ (ಶೋರೂಮ್ ಹೊರತಾದ ದರ, ಜಿಎಸ್‌ಟಿ ಸೇರಿ)ದಲ್ಲಿ ಖರೀದಿಸಲಿದೆ. ಈ ವಾಹನಗಳ ಖರೀದಿಸಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮದಿಂದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ವಿನಾಯಿತಿ ನೀಡಲಾಗಿದೆ.
ಸಚಿವರಿಗೆ ಹೊಸ ವಾಹನಗಳನ್ನು ಖರೀದಿಸಿ ಒದಗಿಸಲು ಸರ್ಕಾರ 15 ದಿನಗಳ ಹಿಂದೆಯೇ ಅನುಮತಿ ನೀಡಿ, ಅನುದಾನ ಒದಗಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ.