DAR ಪೊಲೀಸ್​ ಪೇದೆ ಸಂಶಯಾಸ್ಪದ ಸಾವು ಪ್ರಕರಣಕ್ಕೆ ಟ್ವಿಸ್ಟ್​: 2ನೇ ಪತ್ನಿಯಿಂದಲೇ ನಡೆಯಿತಾ ಘೋರ ಕೃತ್ಯ?

DAR Police
Published on

ಬಳ್ಳಾರಿ: ಡಿಎಆರ್​ ಪೊಲೀಸ್​ ಪೇದೆ ಅನುಮಾನಾಸ್ಪದ ಸಾವು ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಪತ್ನಿಯಿಂದಲೇ ಪೇದೆ ಜಾಫರ್ ಸಾಹೀಬ್ ಬರ್ಬರ ಹತ್ಯೆಯಾಗಿರುವ ಶಂಕೆ ವ್ಯಕ್ತವಾಗಿದೆ.

ಸಂಬಂಧಿಗಳ‌ ಆರೋಪ ಹಾಗೂ ಪೊಲೀಸರ ಅನುಮಾನ ಎರಡೂ ಕೂಡ ಒಂದೇ ಆಗಿದೆ. ಜಾಫರ್​ ಕೊಲೆ ಮಾಡಿರುವುದು ಆತನ ಪತ್ನಿ ಹನುಮಕ್ಕಳೇ ಅಂದು ಸಂಶಯ ಶುರುವಾಗಿದೆ. ಜಾಫರ್ ಸಂಬಂಧಿಗಳಿಂದಲೂ ಹನುಮಕ್ಕಳ ವಿರುದ್ಧ ದೂರು ದಾಖಲಿಸಿದ್ದಾರೆ. ಅಲ್ಲದೇ ಪ್ರಾಥಮಿಕ ಶಂಕಿತ ವ್ಯಕ್ತಿ ಜಾಫರ್ ಪತ್ನಿ ಎಂದು ಬಳ್ಳಾರಿ ಎಸ್ಪಿ ರಂಜಿತ್ ಬಂಡಾರು ತಿಳಿಸಿದ್ದಾರೆ.

ಹನುಮಕ್ಕ, ಜಾಫರ್​​ನ ಎರಡನೇ ಪತ್ನಿ. ಮೊದಲನೇ ಹೆಂಡತಿ ನವೀನ್ ತಾಜ್ ಬಿಟ್ಟು ಹಿಂದು ಯುವತಿ ಹನುಮಕ್ಕಳನ್ನು ಜಾಫರ್​ ಮದುವೆಯಾಗಿದ್ದ. ಹನುಮಕ್ಕ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದಾಳೆ. ಈಕೆಯನ್ನು ಮದುವೆಯಾಗಿ ನಾಲ್ಕು ವರ್ಷದ ಬಳಿಕ ಜಾಫರ್​ ಮತ್ತೆ ಮೊದಲನೇ ಹೆಂಡತಿಯ ಸಂಗ ಮಾಡಿದ್ದ. ಇದರಿಂದ ಕೋಪಗೊಂಡು ಅನೇಕ ಬಾರಿ ಜಾಫರ್ ಸಂಬಂಧಿಗಳ‌ ಮುಂದೆಯೇ ಹನುಮಕ್ಕ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಳಂತೆ.

ಎಷ್ಟೇ ಹೇಳಿದರೂ ಮೊದಲ ಹೆಂಡತಿಯನ್ನು ಬಿಡದಿದ್ದಕ್ಕೆ ಹನುಮಕ್ಕ ಪ್ಲಾನ್ ಮಾಡಿ ಜಾಫರ್ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ.

ಅಂದಹಾಗೆ ಜಾಫರ್​ ಬಳ್ಳಾರಿಯ ಪೊಲೀಸ್ ವಸತಿ ಗೃಹದಲ್ಲಿ ಬುಧವಾರ ರಾತ್ರಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದರು. ಕಿವಿಯಲ್ಲಿನ ರಕ್ತಸ್ರಾವದಿಂದ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ತಕ್ಷಣ ಆತನನ್ನು ವಿಮ್ಸ್​ಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಜಾಫರ್​ ಮೃತಪಟ್ಟಿದ್ದ. ರಾಡ್​ನಿಂದ ಹೊಡೆದು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿತ್ತು. ಇದೀಗ ಆತನ ಎರಡನೇ ಪತ್ನಿಯ ವಿರುದ್ಧವೇ ಅನುಮಾನ ಬಲವಾಗಿದೆ. ಈ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದೆ. ಜಾಫರ್​​ 2008ರಲ್ಲಿ ಡಿಎಆರ್ ನೇಮಕವಾಗಿದ್ದ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net