ಹೊಸ ವಿಷಯ ಬೋಧಿಸಿದರೆ ಜ್ಞಾನ ವೃದ್ಧಿ: ದೊರೆಸ್ವಾಮಿ

Pes
Published on

ಬೆಂಗಳೂರು ಉಪನ್ಯಾಸಕರು ಹೊಸ ವಿಷಯಗಳನ್ನು ಗ್ರಹಿಸಿ ಬೋಧಿಸಿದರೆ ವಿದ್ಯಾರ್ಥಿಗಳ ಜ್ಞಾನವೃದ್ಧಿಗೆ ಸಹಕಾರಿಯಾಗುತ್ತದೆ ಎಂದು ಪಿಇಎಸ್ ವಿಶ್ವವಿದ್ಯಾನಿಲಯದ ಕುಲಾಧಿಪತಿ ಡಾ. ಎಂ.ಆರ್. ದೊರೆಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದರು.

ಪಿಇಎಸ್ ಪಿಯು ಕಾಲೇಜು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಸಹಯೋಗದಲ್ಲಿ ಬೆಂಗಳೂರು ದಕ್ಷಿಣ ವಿಭಾಗದ ಜೀವಶಾಸ್ತ್ರ ಉಪನ್ಯಾಸಕರಿಗೆ ವಿವಿಯಲ್ಲಿ ಆಯೋಜಿಸಿದ್ದ ‘ಶೈಕ್ಷಣಿಕ ಕಾರ್ಯಾಗಾರ’ದಲ್ಲಿ ಅವರು ಮಾತನಾಡಿದರು.

ಸಮಾಜದಲ್ಲಿ ಶಿಕ್ಷಕರು ಹಾಗೂ ವೈದ್ಯರು ಅತ್ಯುನ್ನತ ಸ್ಥಾನವನ್ನು ಅಲಂಕರಿಸಿದ್ದಾರೆ. ವೈದ್ಯರು ಜೀವದಾನ ನೀಡಿದರೆ, ಶಿಕ್ಷಕರು ಆ ವ್ಯಕ್ತಿಯ ಜೀವನವನ್ನೇ ರೂಪಿಸುತ್ತಾರೆ. ಹೀಗಾಗಿ, ಉಪನ್ಯಾಸಕರು ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣ ಹಾಗೂ ಕಲಿಕೆಯ ಪ್ರಮಾಣ ಹೆಚ್ಚಿಸಲು ಮೆಂಟರಿಂಗ್ ಪದ್ಧತಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಬೆಂಗಳೂರು ದಕ್ಷಿಣ ಜಿಲ್ಲೆ ಉಪ ನಿರ್ದೇಶಕ ಆನಂದ ರಾಜ್ ಮಾತನಾಡಿ, ಉಪನ್ಯಾಸಕರು ವಿದ್ಯಾರ್ಥಿಗಳಿಗೆ ವಿಷಯ ಮಾತ್ರವಲ್ಲದೇ ಮೌಲ್ಯಗಳನ್ನು ಕೂಡ ಬೋಧಿಸಬೇಕು. ತರಗತಿಯಲ್ಲಿ ಎಲ್ಲರಿಗೂ ಸಮಾನ ಅವಕಾಶಗಳನ್ನು ಕಲ್ಪಿಸಬೇಕು ಎಂದು ಹೇಳಿದರು.

ಕಾರ್ಯಾಗಾರದಲ್ಲಿ ವಿವಿಧ ಕಾಲೇಜುಗಳ 150ಕ್ಕೂ ಅಧಿಕ ಜೀವಶಾಸ್ತ್ರ ಉಪನ್ಯಾಸಕರು ಪಾಲ್ಗೊಂಡಿದ್ದರು. ಬೆಂ. ದಕ್ಷಿಣ ಬಯೋ ಫೋರಂ ಅಧ್ಯಕ್ಷ ದೇವರಾಜು, ಬೆಂ. ದಕ್ಷಿಣ ಪ್ರಾಂಶುಪಾಲರ ಸಂಘದ ಅಧ್ಯಕ್ಷ ರಾಜಗೋಪಾಲ್, ವಿಜಯ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಬಾಲಕೃಷ್ಣ ಅಡಿಗ, ಪಿಇಎಸ್ ಹನುಮಂತನಗರ ಕ್ಯಾಂಪಸ್ ನಿರ್ದೇಶಕ ಪ್ರೊ.ಸತ್ಯನಾರಾಯಣ, ಪ್ರಾಂಶುಪಾಲ ಡಾ.ನಾರಾಯಣ ರೆಡ್ಡಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net